ಸ್ಥಳೀಯ ಉದ್ಯೋಗಕ್ಕಾಗಿ ಕೈಗಾರಿಕೆ ಸ್ಥಾಪನೆಗೆ ಆದ್ಯತೆ
ಕ.ಪ್ರ.ವಾರ್ತೆ ಅರಸೀಕೆರೆ ಆ.15
ಕೃಷಿಯನ್ನೆ ನಂಬಿ ಬದುಕುತ್ತಿರುವ ಈ ನಾಡಿನಲ್ಲಿ ಪ್ರಸ್ತುತ ತಾಲೂಕಿನಲ್ಲಿ ಬರ ಹಿನ್ನೆಲೆಯಲ್ಲಿ ಜೀವನ ಸಾಗಿಸಲು ಆಗದೇ ಎಷ್ಟೋ ಮಂದಿ ಉದ್ಯೋಗ ಅರಸಿ ವಲಸೆ ಹೋಗುತ್ತಿದ್ದು, ಈ ನಿಟ್ಟಿನಲ್ಲಿ ಸ್ಥಳೀಯವಾಗಿ ಉದ್ಯೋಗ ದೊರೆಯುವಂತೆ ಮಾಡಲು ಕೈಗಾರಿಕೆಗಳ ಸ್ಥಾಪನೆಗೆ ತಾವು ಶ್ರಮ ವಹಿಸುವುದಾಗಿ ಶಾಸಕ ಕೆ.ಎಂ.ಶಿವಲಿಂಗೇಗೌಡ ಭರವಸೆ ನೀಡಿದರು.
ಪಟ್ಟಣದ ಜೇನುಕಲ್ ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ ಗುರುವಾರ ಏರ್ಪಡಿಸಿದ್ದ 67ನೇ ಸ್ವಾತಂತ್ರ್ಯೋತ್ಸವದಲ್ಲಿ ಮಾತನಾಡಿದ ಅವರು, ರಾಜ್ಯದ 58 ತಾಲೂಕುಗಳು ಪ್ರಕೃತಿ ವೈಪರೀತ್ಯದಿಂದಾಗಿ ಮಳೆಯಿಲ್ಲದೆ ಬರಗಾಲದಿಂದ ತತ್ತರಿಸಿ ಕುಡಿಯುವ ನೀರಿಗೂ ಜನರು ಹಾಹಾಕಾರ ಪಡುತ್ತಿದ್ದರೆ, ಇನ್ನೊಂದು ಕಡೆ ನದಿಗಳು ತುಂಬಿ ಹರಿದು ಕೆಲ ಗ್ರಾಮಗಳು ನೀರಿನಿಂದ ಜಲಾವೃತವಾಗಿ ಜನರು ಬವಣೆ ಪಡುವಂತಾಗಿದೆ ಎಂದರು.
ನದಿ ನೀರಿನ ಸದ್ಬಳಕೆ: ನದಿ ನೀರನ್ನು ಸದ್ಭಳಕೆ ಮಾಡಿಕೊಂಡು ರಾಜ್ಯದ ಬರಗಾಲ ಪೀಡಿತ ಪ್ರದೇಶಗಳಿಗೆ ನೀರು ಒದಗಿಸಲು ಸರ್ಕಾರ ಕಾರ್ಯತಂತ್ರ ರೂಪಿಸಬೇಕು. ಸತತ ಬರಗಾಲ ಎದುರಿಸುತ್ತಿರುವ ಈ ತಾಲೂಕಿನಲ್ಲಿ ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಕೆರೆಗಳಿಗೆ ನೀರು ಹರಿಸುವ ಅಗತ್ಯವಿದ್ದು ಇದಕ್ಕಾಗಿ ಜನರು ಹೋರಾಟಕ್ಕೆ ಸಿದ್ಧರಾಗಬೇಕೆಂದು ಕರೆ ನೀಡಿದರು.
ಬರಗಾಲದಿಂದ ಕುಡಿಯುವ ನೀರಿಗೆ ತೊಂದರೆಯಾಗಿರುವ ತಾಲೂಕಿನ 477 ಗ್ರಾಮಗಳಿಗೆ ಹೇಮಾವತಿ ನದಿ ಮೂಲದಿಂದ ಕುಡಿಯುವ ನೀರಿನ ಕಾಮಗಾರಿಗೆ ಚಾಲನೆ ದೊರೆತಿದ್ದು, ಪಟ್ಟಣದಲ್ಲಿ 24 ಗಂಟೆ ನಿರಂತರ ನೀರು ಸರಬರಾಜು ಕಾಮಗಾರಿ ಚಾಲನೆಯಲ್ಲಿದ್ದು ಇನ್ನು 6 ತಿಂಗಳಲ್ಲಿ ಶುದ್ಧ ಕುಡಿಯುವ ನೀರು ನಗರದ ಜನತೆಗೆ ದೊರೆಯಲಿದೆ ಎಂದು ತಿಳಿಸಿದರು. ನಾಡಿನ ಸ್ವಾತಂತ್ರ್ಯಕ್ಕಾಗಿ ಪ್ರಾಣತ್ಯಾಗ ಮಾಡಿದ ಎಲ್ಲಾ ಮಹನೀಯರನ್ನು ಸ್ಮರಿಸುತ್ತಾ ಶಾಂತಿಯುತ ಹೋರಾಟದ ಮೂಲಕ ಸ್ವಾತಂತ್ರ್ಯವನ್ನು ಗಳಿಸಿಕೊಟ್ಟ ಮಹಾತ್ಮಗಾಂಧಿ ತತ್ವ, ಆದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳೋಣ ಎಂದ ಅವರು ಎರಡನೇ ಬಾರಿಗೆ ತಮ್ಮನ್ನು ಆಯ್ಕೆ ಮಾಡಿದ ಮತದಾರರ ಅಭಿಲಾಷೆಯಂತೆ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ತಾವು ಶ್ರಮ ವಹಿಸುವುದಾಗಿ ತಿಳಿಸಿದರು.
ರಾಷ್ಟ್ರ ಧ್ವಜಾರೋಹಣ ಮಾಡಿ ಪೊಲೀಸ್ ಗೃಹರಕ್ಷಕ ದಳ ಹಾಗೂ ವಿದ್ಯಾರ್ಥಿಗಳಿಂದ ಧ್ವಜವಂದನೆ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್ ಕೇಶವಮೂರ್ತಿ ಮಾತನಾಡಿ, ಆಂಗ್ಲರ ಆಳ್ವಿಕೆಯಿಂದ ದೇಶ ಮುಕ್ತಿ ಹೊಂದಿ 66 ವರ್ಷಗಳು ಕಳೆದಿದ್ದು, ಅನೇಕ ದೇಶಭಕ್ತರು ತಮ್ಮ ತನು ಮನಗಳನ್ನು ತ್ಯಾಗ ಮಾಡಿ ಸ್ವಾತಂತ್ರ್ಯವನ್ನು ತಂದು ಕೊಟ್ಟಿದ್ದಾರೆ. ದೇಶಕ್ಕಾಗಿ ದುಡಿದ ಅಂಥ ದೇಶಪ್ರೇಮಿಗಳಿಗೆ ಕೃತಜ್ಞತೆ ಸಲ್ಲಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು.
ರೈತಾಪಿ ವರ್ಗ ಕಾಲಕಾಲಕ್ಕೆ ಮಳೆಯಾಗದೆ ಕೃಷಿ ವೃತ್ತಿಯನ್ನು ತೊರೆದು ಜೀವನೋಪಾಯಕ್ಕೆ ಪಟ್ಟಣಗಳತ್ತ ಗುಳೆ ಹೋಗುವಂತಹ ಅನಿವಾರ್ಯ ಪರಿಸ್ಥಿತಿ ಒದಗಿಬಂದಿದ್ದು ನೀರಾವರಿ ಯೋಜನೆಗಳಿಗೆ ಸಾಕಷ್ಟು ಹೊತ್ತು ನೀಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಊಹಿಸಲು ಅಸಾಧ್ಯವಾದ ಪರಿಸ್ಥಿತಿಗೆ ತಲುಪಬಹುದೆಂಬ ಭಯ ಕಾಡುತ್ತಿದೆ. ಆದ್ದರಿಂದ ನೀರಾವರಿ ಯೋಜನೆಗಳಿಗೆ ಮೊದಲ ಆದ್ಯತೆ ನೀಡಿ ಅನ್ನದಾತರಿಗೆ ಅನುಕೂಲ ಮಾಡಿಕೊಟ್ಟಲ್ಲಿ ಕೃಷಿ ಭೂಮಿ ಬರಡುಭೂಮಿಯಾಗುವುದನ್ನು ತಪ್ಪಿಸಲು ಸಾಧ್ಯ ಎಂದು ತಿಳಿಸಿದರು.
ಹೊಯ್ಸಳರ ವೈಭವ: 9 ಶಾಲೆಯ 1200 ಮಕ್ಕಳು ನಡೆಸಿಕೊಟ್ಟ ನೃತ್ಯರೂಪಕ ನಾಟಕ ಹೊಯ್ಸಳರ ವೈಭವ ಅದ್ಭುತವಾಗಿ ಮೂಡಿಬಂದಿತು. ಹೊಯ್ಸಳರ ಕಾಲದ ವೈಭವ ಮತ್ತೊಮ್ಮೆ ಧರೆಗಿಳಿದಂತೆ ಭಾಸವಾಗುತ್ತಿತ್ತು. ಉಡುಗೆ ತೊಡುಗೆಗಳು ಅಂದಿನ ಜಾನಪದ ಸೊಗಡು ಯುದ್ಧದ ಸನ್ನಿವೇಶಗಳು ಸುಮಾರು ಒಂದು ಗಂಟೆ ಕಾಲ ನೆರೆದಿದ್ದ ಪ್ರೇಕ್ಷಕರನ್ನು ನಿಬ್ಬೆರಗಾಗುವಂತೆ ಮಾಡಿತು.
ವೇದಿಕೆಯಲ್ಲಿ ತಾಪಂ ಅಧ್ಯಕ್ಷ ಎಚ್.ಟಿ.ಶಿವಮೂರ್ತಿ, ಇಓ ಟಿ.ಎನ್.ಮಂಜುನಾಥ್, ಡಿವೈಎಸ್ಪಿ ಮಂಜುನಾಥ್, ಬಿಇಓ ನಟರಾಜ್, ಪುರಸಭಾ ಮುಖ್ಯಾಧಿಕಾರಿ ರಂಗೇಗೌಡ, ಚುನಾಯಿತ ಪುರಸಭಾ ಸದಸ್ಯರು, ಹಿರಿಯ ಸ್ವಾತಂತ್ರ್ಯ ಹೋರಾಟಗಾರರು ಪಾಲ್ಗೊಂಡಿದ್ದರು. ಇದೇ ವೇಳೆ ಹಿರಿಯ ಸ್ವಾತಂತ್ರ್ಯ ಹೋರಾಟಗಾರರು, ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದ ನಂತರ ಜೇನುಕಲ್ ಕ್ರೀಡಾಂಗಣದಿಂದ ಅನೇಕ ಜಾನಪದ ಕಲಾತಂಡಗಳೊಂದಿಗೆ ಶಾಂತಿನಿಕೇತನ ಪಬ್ಲಿಕ್ ಶಾಲೆ, ಕೃಷಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸ್ತಬ್ಧಚಿತ್ರಗಳ ಮೆರವಣಿಗೆ ತೆರಳಿ ಗಣಪತಿ ದೇವಸ್ಥಾನದ ಬಳಿ ಮುಕ್ತಾಯಗೊಂಡಿತು.