'ಸ್ವಾತಂತ್ರ್ಯದ ಸದ್ಬಳಕೆ ಅತಿ ಮುಖ್ಯ'
ಕ.ಪ್ರ.ವಾರ್ತೆ ಹೊಳೆನರಸೀಪುರ ಆ.15
ದೇಶಕ್ಕೆ ದೊರೆತ ಸ್ವಾತಂತ್ರ್ಯದ ಸದ್ಬಳಕೆ ಆಗಬೇಕದ್ದು ಅತೀ ಅಗತ್ಯದ ಕಾರ್ಯವಾಗಿದೆ ಎಂದು ಪ್ರಾಂಶುಪಾಲ ಡಾ.ಜಿ.ಡಿ.ನಾರಾಯಣ ಹೇಳಿದರು.
ತಾಲೂಕಿನ ಪಡುವಲಹಿಪ್ಪೆಯ ಎಚ್.ಡಿ.ದೇವೇಗೌಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ನಡೆದ 67ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಸ್ವಾತಂತ್ರ್ಯ ನಂತರದ ಕಾಲದಲ್ಲಿ ಹುಟ್ಟಿದ ಜನತೆ ಸ್ವಾತಂತ್ರ್ಯದ ಮಹತ್ವ ಅರಿತಿಲ್ಲ. ಹಿರಿಯರು ಸ್ವಾತಂತ್ರ್ಯದ ಹೋರಾಟದ ಸಂದರ್ಭದಲ್ಲಿ ಹರಿಸಿದ ನೆತ್ತರ ಬೆಲೆ ಇಂದಿನ ಜನತೆಗೆ ಅರ್ಥವಾಗುತ್ತಿಲ್ಲ ಎಂದು ಹೇಳಿದರು.
ಇಂದು ನಮಗೆ ದೊರೆತಿರುವ ಸ್ವಾತಂತ್ರ್ಯವನ್ನು ಸ್ವೇಚ್ಛಾಚಾರವಾಗಿ ಬಳಸಲಾಗುತ್ತಿದೆ. ಸ್ವಾತಂತ್ರ್ಯದ ಸದ್ಬಳಕೆ ಆಗದಿದ್ದರೆ ದೇಶಕ್ಕೆ ಮತ್ತೆ ಗಂಡಾಂತರ ತಪ್ಪಿದ್ದಲ್ಲ. ದೇಶ ಕಾಯುವ ಸೈನಿಕರನ್ನು ನೋಡಿ ಶಿಸ್ತು, ದೇಶಪ್ರೇಮ ಇವುಗಳನ್ನು ಅರ್ಥ ಮಾಡಿಕೊಂಡು ನಾವು ಸಾಗಬೇಕಾಗಿದೆ. ಸರ್ಕಾರಿ ನೌಕರರ ವರ್ಗ ರಾಷ್ಟ್ರೀಯ ಹಬ್ಬಗಳನ್ನು ಭಕ್ತಿ ಭಾವದಿಂದ ಆಚರಿಸಬೇಕಾದದ್ದು ಇತರರಿಗಿಂತ ಹೆಚ್ಚು ಜವಾಬ್ದಾರಿಯುತ ಕರ್ತವ್ಯವಾಗಿದೆ ಎಂದು ತಿಳಿಸಿದರು. ಉಪನ್ಯಾಸಕ ಮತ್ತು ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಇದ್ದರು.