ಹೇಮಾವತಿ ಜಲಾಶಯಕ್ಕೆ 6029 ಕ್ಯುಸೆಕ್ ಒಳ ಹರಿವು
ಹಾಸನ: ತಾಲೂಕಿನ ಹೇಮಾವತಿ ಜಲಾಶಯಕ್ಕೆ ಗುರುವಾರ 6029 ಕ್ಯುಸೆಕ್ ಒಳ ಹರಿವು ಇದ್ದು, 4800 ಕ್ಯುಸೆಕ್ ನೀರು ಹೊರ ಬಿಡಲಾಗುತ್ತಿದೆ. ಇಂದಿನ ಮಟ್ಟ 2921.75 ಅಡಿಗಳು, ಗರಿಷ್ಟ ಮಟ್ಟ 2922 ಅಡಿಗಳು. ಜಲಾಶಯದಲ್ಲಿ ಈಗ 36.861 ಟಿಎಂಸಿ ನೀರು ಇದೆ, ಸಂಗ್ರಹ ಸಾಮರ್ಥ್ಯ 37.017 ಟಿಎಂಸಿ.
ಯಗಜಿ ಜಲಾಶಯ: ಇಂದಿನ ಮಟ್ಟ 3164.726 ಅಡಿಗಳು. ಒಳ ಹರಿವು 525, ಹೊರ ಹರಿವು 525.
ವಾಟೆ ಹೊಳೆ ಜಲಾಶಯ: ಇಂದಿನ ಮಟ್ಟ 3165.35 ಅಡಿಗಳು, ಒಳ ಹರಿವು 60 ಕ್ಯುಸೆಕ್, ಹೊರ ಹರಿವು 30 ಕ್ಯುಸೆಕ್.
ಹೈವೋಲ್ಟೇಜ್: ದಿಢೀರ್ ಪ್ರತಿಭಟನೆ
ಬೇಲೂರು: ವಿದ್ಯುತ್ ಸಂಚಾರದಲ್ಲಿ ವ್ಯತ್ಯಾಸ ಉಂಟಾಗಿ ಗೃಹೋಪಯೋಗಿ ವಸ್ತುಗಳು ಹಾನಿಯಾಗಿದ್ದರಿಂದ ಆಕ್ರೋಶಗೊಂಡ ಸಾರ್ವಜನಿಕರು ಬುಧವಾರ ದಿಢೀರ್ ಪ್ರತಿಭಟನೆ ನಡೆಸಿದರು. ಜೆಪಿ ನಗರದಲ್ಲಿ ವಿದ್ಯುತ್ ಲೈನ್ ಬದಲಾಯಿಸಲು ಲೈನ್ ಬದಲಾವಣೆ ಕಾಮಗಾರಿ ಮುಗಿದ ತಕ್ಷಣ ಲೈನ್ ಮೆನ್ ವಿದ್ಯುತ್ ಸಂಪರ್ಕ ನೀಡಿದ್ದಾರೆ. ಆಕ್ರೋಶ ಗೊಂಡ ಸಾರ್ವಜನಿಕರು ಕಾಮಗಾರಿ ನಡೆಸಿದ ಲೈನ್ಮೆನ್ಗಳನ್ನು ತಡೆದು ತರಾಟೆ ತೆಗೆದು ಕೊಂಡು ಪ್ರತಿಭಟನೆ ನಡೆಸಿ ರಸ್ತೆ ತಡೆಗೆ ಮುಂದಾದರು. ಇದೇ ಸಮಯಕ್ಕೆ ಸೆಸ್ಕ್ನ ಜೂನಿಯರ್ ಇಂಜಿನಿಯರ್ ಮಹದೇವ್ ಮತ್ತು ಪೊಲೀಸ್ ಉಪನಿರೀಕ್ಷಕ ಅಶ್ವಿನ್ ಕುಮಾರ್ ಸ್ಥಳಕ್ಕೆ ಆಗಮಿಸಿ ಸಾರ್ವಜನಿಕರ ಮನವೊಲಿಸಲು ಪ್ರಯತ್ನಿಸಿದರು. ಆದರೆ ಸಾರ್ವಜನಿಕರು ಸೆಸ್ಕ್ ಅಧಿಕಾರಿ ವಿರುದ್ಧ ತರಾಟೆ ತೆಗೆದು ಕೊಂಡು ತಕ್ಷಣ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ಮುಖಂಡ ಯೋಗಾಚಾರಿ ಪ್ರತಿಭಟನೆ ನೇತೃತ್ವ ವಹಿಸಿದ್ದರು. ಪುರಸಭಾ ಸದಸ್ಯೆ ಗಾಯತ್ರಿ, ಮಂಜುನಾಥ್, ಪ್ರದೀಪ್, ಆನಂದ್ ಇನ್ನಿತರರು ಇದ್ದರು.
ಅಪರಿಚಿತ ವ್ಯಕ್ತಿ ಶವ ಪತ್ತೆ
ಹಾಸನ: ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿರುವ ಘಟನೆ ತಾಲೂಕಿನಲ್ಲಿ ನಡೆದಿದೆ. ತಾಲೂಕಿನ ಚೌಡೇನಹಳ್ಳಿ ಗ್ರಾಮದ ರಂಗಸ್ವಾಮಿ ತಮ್ಮ ಜಮೀನಿನಲ್ಲಿ ಬೆಳೆದಿರುವ ಆಲೂ ಬೆಳೆಗೆ ಕ್ರಿಮಿನಾಶಕ ಸಿಂಪಡಿಸಲು ಹೋಗುತ್ತಿರುವಾಗ ಜಮೀನಿನ ಪಕ್ಕ ಹೇಮಾವತಿ ಡ್ಯಾಂನ ಹಿನ್ನಿರಿನಲ್ಲಿ ಸುಮಾರು 30 ರಿಂದ 35 ವರ್ಷ ವಯಸ್ಸಿನ ಅಪರಿಚಿತ ಗಂಡಸಿನ ಶವ ತೇಲುತ್ತಿದ್ದು, ಆತನ ಹೊಟ್ಟೆಗೆ ಕಲ್ಲು ಕಟ್ಟಿರುವುದಾಗಿ ಕಂಡು ಬಂದಿದೆ. ದುಷ್ಕರ್ಮಿಗಳು ದುರುದ್ದೇಶದಿಂದ 2-3 ದಿವಸಗಳ ಹಿಂದೆ ಕೊಲೆ ಮಾಡಿ ಹೊಟ್ಟೆಗೆ ಕಲ್ಲು ಕಟ್ಟಿ ನೀರಿಗೆ ತಂದು ಹಾಕಿರುತ್ತಾರೆ ಎಂದು ರಂಗಸ್ವಾಮಿ ರವರು ಗೊರೂರು ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಯುವತಿ ನಾಪತ್ತೆ
ಹಾಸನ: ತಾ. ಶಾಂತಿಗ್ರಾಮ ಹೋಬಳಿ ಮಲ್ಲನಾಯಕನಹಳ್ಳಿಯ ತಾಯಮ್ಮ ಎಂಬುವರ ಪುತ್ರಿ ಶಶಿಕಲಾ(20) ಮನೆಯಿಂದ ಹೊರಗೆ ಹೋದವಳು ವಾಪಸ್ಸು ಮನೆಗೆ ಬಾರದೆ ಕಾಣೆಯಾಗಿದ್ದಾರೆ. ಚಹರೆ 5.8 ಅಡಿ, ಕಪ್ಪು ಬಣ್ಣ, ದುಂಡುಮುಖ, ತೆಳುವಾದ ಮೈಕಟ್ಟು, ಕನ್ನಡ, ಇಂಗ್ಲಿಷ್ ಮಾತನಾಡುತ್ತಾರೆ. ಮಾವ ಕುಮಾರ ಶಾಂತಿಗ್ರಾಮ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಮಾತು ಬಾರದ ಅಜ್ಜಿ ಬಿಟ್ಟು ತೆರಳಿದರು
ಸಕಲೇಶಪುರ: ಮಾತುಬಾರದ ಅಜ್ಜಿಯನ್ನು ಸಂಬಂಧಿಕರು ಮಾರ್ಗ ಮಧ್ಯೆ ಬಿಟ್ಟು ಹೋಗಿರುವ ಅಮಾನವೀಯ ಘಟನೆ ತಾಲೂಕಿನ ದೋಣಿಗಾಲ್ ಗ್ರಾಮದಲ್ಲಿ ಬುಧವಾರ ನಡೆದಿದೆ. ಸ್ಪಷ್ಟವಾಗಿ ಮಾತನಾಡದ ಅಜ್ಜಿಯನ್ನು ಕರೆತಂದು ದೋಣಿಗಾಲ್ ಗ್ರಾಮ ಸಮೀಪದ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಬಸ್ನಿಂದ ಕೆಳಗಿಳಿಸಿ ಹೋಗಿದ್ದಾರೆ ಎನ್ನಲಾಗಿದೆ. ರಸ್ತೆಯಲ್ಲಿ ಅಳುತ್ತ ನಿಂತಿದ್ದ ಈ ಅಜ್ಜಿಯನ್ನು ದೋಣಿಗಾಲ್ ಗ್ರಾಮದ ಕುಮಾರ್ ಠಾಣೆಗೆ ಕರೆತಂದು ಬಿಟ್ಟಿದ್ದಾರೆ. ಸಂಪೂರ್ಣ ನಿತ್ರಾಣರಾಗಿದ್ದ ಅಜ್ಜಿಗೆ ತಿಂಡಿ ನೀರು ಕೊಟ್ಟು ಉಪಚರಿಸಿದ ಪೊಲೀಸರು ಅಜ್ಜಿಯಿಂದ ಹೆಚ್ಚಿನ ವಿಚಾರ ತಿಳಿಯಲು ಪ್ರಯತ್ನ ಮುಂದುವರಿಸಿದ್ದಾರೆ.