ಅಬ್ಬಬ್ಬಾ ಖಾರ, ಕಣ್ಣೀರಿನ ನಡುವೆ ಹಬ್ಬ
ಕನ್ನಡಪ್ರಭ ವಾರ್ತೆ ಹಾಸನ ಆ. 16
ಜಿಲ್ಲೆಯ ಜನತೆ ತರಕಾರಿಗಳ ಬೆಲೆ ಏರಿಕೆ ನಡುವೆಯೇ ವರಮಹಾಲಕ್ಷ್ಮೀ ಹಬ್ಬ ಆಚರಿಸಿದರು. ಹಸಿ ಮೆಣಸಿನಕಾಯಿ ಕೆ.ಜಿ.ಗೆ 80 ರು.ಗಳಾದರೆ ಈರುಳ್ಳಿ ಕೆ.ಜಿ.ಗೆ 70 ರು.ಗಳಿಗೆ ಏರಿಕೆ ಆಗಿದೆ. ಕೆಲ ದಿನಗಳ ಹಿಂದೆ ಹಸಿ ಮೆಣಸಿನಕಾಯಿ ಕೆ.ಜಿ.ಗೆ 40 ರು ಇತ್ತು. ಆದರೆ ಗುರುವಾರ ಒಂದೇ ದಿನಕ್ಕೆ ದುಪ್ಪಟ್ಟು ಬೆಲೆ ಹೆಚ್ಚಾಗಿ ಗ್ರಾಹಕರು ತರಕಾರಿ ಮಾರುಕಟ್ಟೆಗೆ ಬಂದರೆ ದರ ಕೇಳಿ ಆಕಾಶ ನೋಡುವ ಸ್ಥಿತಿ. ತಿಂಗಳಿನಿಂದ ಸುರಿದ ಬಾರಿ ಮಳೆಗೆ ರೈತ ಬೆಳೆದ ಬೆಳೆ ಕೊಳೆತು ಎಲ್ಲಾ ನಷ್ಟವಾಗಿ ಮಾರುಕಟ್ಟೆಗೆ ತರಕಾರಿ ಸರಬರಾಜು ಕಡಿಮೆ ಆಗಿದೆ. ಇದರ ಪರಿಣಾಮ ಗ್ರಾಹಕ ದುಪ್ಪಟ್ಟು ಬೆಲೆ ನೀಡಬೇಕಾದ ಪರಿಸ್ಥಿತಿ ಎದುರಾಗಿದೆ. ಹುರುಳಿಕಾಯಿ ಕೆ.ಜಿ.ಗೆ 25 ರು, ಬಟಾಣಿ 40 ರು, ಕ್ಯಾರೆಟ್ 45 ರು, ನುಗ್ಗೆಕಾಯಿ 85 ರು, ಮುಳಗಾಯಿ 35 ರು, ಆಲೂಗಡ್ಡೆ 20 ರು, ಟೊಮೆಟೋ 10 ರು, ಬಾಳೆಹಣ್ಣು 12ಕ್ಕೆ 60 ರು, ಸೇಬು ಕೆ.ಜಿ.ಗೆ 100 ರು. ಇತ್ತು. ಕೇಂದ್ರ ಸರ್ಕಾರದ ಕೃಷಿ ಹಾಗೂ ವಾಣಿಜ್ಯ ನೀತಿಗಳಿಂದ ಗ್ರಾಹಕನ ಕಣ್ಣಲ್ಲಿ ಕಣ್ಣೀರು ಬರಲು ಕಾರಣ. ಮತ್ತು ಹೊರ ದೇಶಕ್ಕೆ ತರಕಾರಿಗಳು ರಪ್ತು ಆಗುತ್ತಿರುವುದು ಹೆಚ್ಚಾಗಿದೆ. ದಿನಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ಈಗಾಗಲೇ ಗ್ರಾಹಕರು ಏನಾದರೂ ಕೊಂಡುಕೊಳ್ಳುವಲ್ಲಿ ಯೋಚನೆ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಮೊದಲು ಸರ್ಕಾರ ತನ್ನ ರೈತ ವಿರೋಧಿ ನೀತಿ ಬದಲಾಯಿಸುವುದು ಅವಶ್ಯಕ ಎಂಬುದು ಸಾರ್ವಜನಿಕರ ಒಟ್ಟಾರೆ ಅಭಿಪ್ರಾಯ.