ತರಕಾರಿ ಮಾರುಕಟ್ಟೆ ನಿರ್ಮಾಣಕ್ಕೆ ರು. 1.60 ಕೋಟಿ ವೃಥಾ ಪೋಲು
ಕ.ಪ್ರ.ವಾರ್ತೆ ಹೊಳೆನರಸೀಪುರ ಆ. 16
ಪಟ್ಟಣದ ಪಕ್ಕದಲ್ಲಿ ಹರಿಯುವ ಹೇಮಾವತಿ ನದಿ ಬಳಿಯಲ್ಲಿ ನಿರ್ಮಿಸಲಾಗಿರುವ ತಡಗೋಡೆಯ ಬಳಿಯಲ್ಲಿ ಚರಂಡಿ ಮತ್ತಿತರ ಕಾಮಗಾರಿಗಳ ನಿರ್ಮಾಣಕ್ಕಾಗಿ ಕಾನೂನುಬಾಹಿರವಾಗಿ ಪುರಸಭೆಯ ತರಕಾರಿ ಮಾರುಕಟ್ಟೆ ನಿರ್ಮಾಣಕ್ಕೆ ಮೀಸಲಾಗಿರುವ 1.60 ಕೋಟಿ ರು. ಅನುದಾನ ಬಳಕೆ ಮಾಡಿ ಸಾರ್ವಜನಿಕರ ತೆರಿಗೆ ಹಣವನ್ನು ಪೋಲು ಮಾಡಲಾಗುತ್ತಿದೆ ಎಂದು ಸ್ಥಳೀಯ ಕಾಂಗ್ರೆಸ್ ಮುಖಂಡರು ಆರೋಪಿಸಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ಜಿಲ್ಲಾ ಛಲವಾದಿ ಮಹಾಸಭಾ ಅಧ್ಯಕ್ಷ ಎಚ್.ಆರ್.ನಾರಾಯಣ, ಕೆ.ರಾಜೇಗೌಡ ಹಾಗೂ ಪುರಸಭೆ ಮಾಜಿ ನಾಮ ನಿರ್ದೇಶಿತ ಸದಸ್ಯ ಉನ್ನಿಕೊಪ್ಪಲು ಮಂಜೇಗೌಡರು, ತಮ್ಮ ಹಿಂಬಾಲಕ ಗುತ್ತಿಗೆದಾರರಿಗೆ ದುಡ್ಡು ಮಾಡಿಕೊಡುವ ಸಲುವಾಗಿ ಶಾಸಕ ಎಚ್.ಡಿ.ರೇವಣ್ಣ ಅವರು ಪುರಸಭೆಯ ತರಕಾರಿ ಮಾರುಕಟ್ಟೆ ನಿರ್ಮಾಣಕ್ಕೆ ಮೀಸಲಾದ ಹೆಡ್ನಲ್ಲಿನ 1.60 ಕೋಟಿ ರು.ಗಳ ಅನುದಾನವನ್ನು ತಡೆಗೋಡೆ ಬಳಿಯಲ್ಲಿ ಚರಂಡಿ, ವಾಯವಿಹಾರ ಮಾಡಲು ಲ್ಯಾಂಡ್ ಸ್ಕ್ಕೇಪಿಂಗ್ ಹಾಗೂ ಚೈನ್ಲಿಂಕ್ ಫೆನ್ಸಿಂಗ್ ನಿರ್ಮಾಣಕ್ಕಾಗಿ ದುರ್ಬಳಕೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ತಾಲೂಕಿನಲ್ಲಿ ತಮ್ಮ ತಾಳಕ್ಕೆ ತಕ್ಕಂತೆ ಕುಣಿಯುವ ಅಧಿಕಾರಿಗಳನ್ನು ಸೂಕ್ತವಾದ ಆಯಕಟ್ಟಿನ ಸ್ಥಳಗಳಿಗೆ ನೇಮಿಸಿ ಅವರಿಂದ ತಮ್ಮ ಹಿಂಬಾಲಕರಿಗೆ ಅನುಕೂಲ ಮಾಡಿಕೊಡಲು ಇಲ್ಲದ ಕಾಮಗಾರಿಗಳನ್ನು ಸೃಷ್ಟಿಸಿ, ವಾಮಮಾರ್ಗ ಮೂಲಕ ಹಣ ಮಾಡಿಕೊಡಲು ಶಾಸಕರು ಮುಂದಾಗಿದ್ದಾರೆ. ಈ ಕೂಡಲೇ ಹೊರಡಿಸಲಾಗಿರುವ ಟೆಂಡರ್ ಪ್ರಕಟಣೆಯನ್ನು ಗಮನಿಸಿ ರದ್ದುಪಡಿಸುವಂತೆ ಜಿಲ್ಲಾಧಿಕಾರಿ ಹಾಗೂ ಸಂಬಂಧಿಸಿದ ಮೇಲಧಿಕಾರಿಗಳನ್ನು ಆಗ್ರಹಿಸಿದರು.
ಕಾಂಗ್ರೆಸ್ ಮುಖಂಡ ಕೆ.ರಾಜೇಗೌಡ ಮಾತನಾಡಿ, ತಾಲೂಕಿನಲ್ಲಿ ಗ್ರಾಮಲೆಕ್ಕಾಧಿಕಾರಿಗಳ ಕೈಯಲ್ಲಿ ತಹಸೀಲ್ದಾರರ ಕೆಲಸ, ಇಂಜಿನೀಯರುಗಳ ಕೈಯಲ್ಲಿ ಮುಖ್ಯಾಧಿಕಾರಿಗಳ ಕೆಲಸ ಮಾಡಿಸುವ ಚಾಳಿಯನ್ನು ಶಾಸಕ ಎಚ್.ಡಿ.ರೇವಣ್ಣ ಕೂಡಲೇ ನಿಲ್ಲಿಸಿ, ಸಾರ್ವಜನಿಕರ ಹಣವನ್ನು ದುರ್ಬಳಕೆ ಮಾಡುವುದನ್ನು ನಿಲ್ಲಿಸಲಿ ಎಂದು ನುಡಿದರು.
ಪುರಸಭೆ ಮಾಜಿ ನಾಮನಿರ್ದೇಶಿತ ಸದಸ್ಯ ಉನ್ನಿಕೊಪ್ಪಲು ಮಂಜೇಗೌಡ ಮಾತನಾಡಿ, ಸರ್ಕಾರದ ಯಾವುದೋ ಅನುದಾನವನ್ನು ಮತ್ಯಾವುದೋ ಕಾಮಗಾರಿಗಳಿಗೆ ಬಳಕೆ ಮಾಡುವುದನ್ನು ಶಾಸಕರು ನಿಲ್ಲಿಸಿದಲ್ಲಿ ಒಳ್ಳೆಯದು, ಇಲ್ಲದಿದ್ದಲ್ಲಿ ಸಾರ್ವಜನಿಕರ ಹಣ ಪೋಲಾಗುವುದನ್ನು ತಡೆಯಲು ಸೂಕ್ತ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಅನಾವಶ್ಯಕವಾಗಿ ಹೊಳೆಗೆ ತಡೆಗೋಡೆಯನ್ನು ನಿರ್ಮಿಸಿದ್ದಲ್ಲದೇ ಈ ಕಾಮಗಾರಿಗೆ ನಿಗಧಿಯಾಗಿದ್ದ ಸುಮಾರು 36 ಕೋಟಿ ರು.ಗಳ ಅನುದಾನವನ್ನು ತಮ್ಮ ಹಿಂಬಾಲಕರಿಗೆ ನೀಡುವ ಸಲುವಾಗಿ 60 ಕೋಟಿ ರು.ಗಳಿಗೆ ಹೆಚ್ಚಿಸಲಾಗಿದೆ ಎಂದು ಆರೋಪಿಸಿದರು. ಅಲ್ಲದೇ ಪುರಸಭೆಯ ತರಕಾರಿ ಮಾರುಕಟ್ಟೆಯ ನಿರ್ಮಾಣದ ಅನುದಾನವನ್ನು ಸಣ್ಣ ನೀರಾವರಿ ಇಲಾಖಾ ವ್ಯಾಪ್ತಿಯಲ್ಲಿನ ಕಾಮಗಾರಿಗೆ ಹೇಗೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬುದನ್ನು ಮೇಲಧಿಕಾರಿಗಳು ಸೂಕ್ತ ತನಿಖೆ ನಡೆಸುವಂತೆ ಆಗ್ರಹಿಸಿದರು.