ಪಡಿತರ ಕಾರ್ಡ್ ನೀಡಲು ಲಂಚ ಸ್ವೀಕರಿಸಿದರೆ ಕಠಿಣ ಕ್ರಮ
ಚನ್ನರಾಯಪಟ್ಟಣ: ಪಡಿತರ ಕಾರ್ಡ್ ನೀಡುವ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ನೌಕರರು ಲಂಚ ಸ್ವೀಕರಿಸುತ್ತಿರುವ ಬಗ್ಗೆ ದೂರು ಕೇಳಿ ಬರುತ್ತಿದ್ದು, ಮುಂದಿನ ದಿನಗಳಲ್ಲಿ ಅಂಥ ದೂರು ಕೇಳಿ ಬಂದರೆ ಅವರ ವಿರುದ್ಧ ಕ್ರಮ ತೆಗೆದು ಕೊಳ್ಳುವಂತೆ ಒತ್ತಾಯಿಸಲಾಗುವುದು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದರು.
ಬಾಗೂರಿನಲ್ಲಿ 750 ಮಂದಿಗೆ ವಿವಿಧ ಮಾಸಾಶನ ಮಂಜೂರಾತಿ ಪತ್ರ ವಿತರಿಸಿ ಮಾತನಾಡಿದ ಅವರು, ಸರ್ಕಾರ ಬಿಪಿಎಲ್ ಕಾರ್ಡ್ಗಳನ್ನು ನೀಡುವ ವ್ಯವಸ್ಥೆ ಕಲ್ಪಿಸಿದ್ದು, ಕೆಲ ಗ್ರಾಮ ಪಂಚಾಯಿತಿ ನೌಕರರು 100 ರಿಂದ 200 ರು.ವರಗೆ ಸಂಗ್ರಹಿಸುತ್ತಿರುವ ಬಗ್ಗೆ ದೂರು ಕೇಳಿ ಬಂದಿದೆ. ತಾಲೂಕಿನ ಯಾವುದೇ ಗ್ರಾಮ ಪಂಚಾಯಿತಿಗಳಲ್ಲಿ ಇಂತಹ ದೂರುಗಳು ಕೇಳಿ ಬಂದರೆ ಅಂಥವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಲಾಗುವುದು ಎಂದರು.
ಪಡಿತರ ಕಾರ್ಡ್ ನೀಡುವ ಸಂದರ್ಭದಲ್ಲಿ ಕೆಲ ಗ್ರಾಮ ಪಂಚಾಯಿತಿಗಳಲ್ಲಿ ಮನೆ ಕಂದಾಯ ಹಾಗೂ ಇತರೆ ಬಾಕಿಯನ್ನು ಪಾವತಿಸಿದರೆ ಮಾತ್ರ ಎಂದು ನಿರ್ಬಂಧ ಹಾಕುತ್ತಿದ್ದಾರೆ ಎನ್ನಲಾಗಿದೆ. ನೌಕರರು ಮನೆ ಕಂದಾಯ ವಸೂಲಿ ಮಾಡಲು ಅವರ ಮನೆ ಹತ್ತಿರ ಹೋಗಿ ಸಂಗ್ರಹಿಸಿ ಅದನ್ನು ಹೊರತುಪಡಿಸಿ ಕಾರ್ಡುದಾರರಿಗೆ ಕಿರುಕುಳ ನೀಡಬೇಡಿ ಎಂದು ತಿಳಿಸಿದರು.
ತಾಲೂಕಿನ ಶ್ರವಣಬೆಳಗೊಳ ಹೋಬಳಿಯಲ್ಲಿ 450, ಹಿರೀಸಾವೆ 700 ಹಾಗೂ ನುಗ್ಗೇಹಳ್ಳಿಯಲ್ಲಿಯೂ ವಿವಿದ ಮಾಸಶನಗಳ ಮಂಜೂರಾತಿ ಪತ್ರಗಳನ್ನು ನೀಡುವ ವ್ಯವಸ್ಥೆಯನ್ನು ಸಧ್ಯದಲ್ಲಿಯೇ ಕಲ್ಪಿಸಲಾಗುವುದು ಎಂದು ತಿಳಿಸಿದರು.
ಪಹಣಿ ತಿದ್ದುಪಡಿ: ರೈತರು ತಮ್ಮ ಜಮೀನು ಆಧಾರವಾಗಿಸಿಕೊಂಡು ಸಾಲ ಹಾಗೂ ಇತರೆ ಸೌಲಭ್ಯಗಳನ್ನು ಪಡೆಯಲು ತಿದ್ದುಪಡಿ ಅಗತ್ಯವಿದ್ದು, ಒಬ್ಬೊಬ್ಬರು ಈ ವ್ಯವಸ್ಥೆಯನ್ನು ಸರಿಪಡಿಸಿಕೊಳ್ಳಲು ಹಲವು ದಿನಗಳು ಅಗತ್ಯವಿರುವುದರಿಂದ ಹೋಬಳಿ ಮಟ್ಟದಲ್ಲಿ ಸರಿಪಡಿಸುವ ನಿಟ್ಟಿನಲ್ಲಿ ದಿನಾಂಕ ನಿಗದಿ ಮಾಡಿ ಹೋಬಳಿ ಕೇಂದ್ರಕ್ಕೆ ಕಂದಾಯ ಅಧಿಕಾರಿಗಳು ಹಾಜರಾಗಿ ಸರಿಪಡಿಸುವ ವ್ಯವಸ್ಥೆಯನ್ನು ಕಲ್ಪಿಸುವಂತೆ ಹೇಳಿದರು.
ನುಗ್ಗೇಹಳ್ಳಿ ಹೋಬಳಿಯಲ್ಲಿ ಪಹಣಿ ತಿದ್ದುಪಡಿ ಕಾರ್ಯ ಪೂರ್ಣಗೊಂಡಿದ್ದು, ಬಾಗೂರು ಹಾಗೂ ಹಿರೀಸಾವೆ ಹೋಬಳಿಗಳಲ್ಲಿ ಈ ಕಾರ್ಯವನ್ನು ಸದ್ಯದಲ್ಲಿಯೇ ಕಾರ್ಯರೂಪಕ್ಕೆ ಬರಬೇಕಾಗಿದೆ ಎಂದರು.
ಓಬಳಾಪುರ ಬಳಿ ಕಾವೇರಿ ನೀರಾವರಿ ನಿಗಮದ 21ಎಕರೆ ಪ್ರದೇಶದಲ್ಲಿ 15ಎಕರೆ ಪ್ರದೇಶವನ್ನು ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ವರ್ಗಾಯಿಸಿ ಬಾಗೂರು ಹೋಬಳಿಗೊಂದು ಶಾಲೆಯನ್ನು ಮಂಜೂರು ಮಾಡಿಸಬೇಕೆಂದು ತಾಲೂಕು ಪಂಚಾಯಿತಿ ಸದಸ್ಯ ಬಸವರಾಜು ಒತ್ತಾಯಿಸಿದರು. ಜಿಪಂ ಸದಸ್ಯ ಶಿವಶಂಕರ್ಕುಂಠೆ, ತಾಪಂ ಮಾಜಿ ಅಧ್ಯಕ್ಷೆ ವಿಜಯಶಿವಲಿಂಗಪ್ಪ, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಶಿವಣ್ಣ, ತಹಸೀಲ್ದಾರ್ ಸೋಮಶೇಖರ್ ಉಪಸ್ಥಿತರಿದ್ದರು.