ಪರಿಸರಕ್ಕೆ ಅಪಚಾರದಿಂದ ಸಂಕಷ್ಟದ ಹಾದಿಯಲ್ಲಿ ಓಜೋನ್ ಪದರ
ಕ.ಪ್ರ.ವಾರ್ತೆ ಹೊಳೆನರಸೀಪುರ ಆ.16
ಇತ್ತೀಚಿನ ದಿನಗಳಲ್ಲಿ ಪರಿಸರ ಸಂರಕ್ಷಣೆ ಕುರಿತಂತೆ ಸಮಾಜದಲ್ಲಿನ ನಿರ್ಲಕ್ಷ್ಯ ಹಾಗೂ ಪರಿಸರಕ್ಕೆ ಮಾಡುತ್ತಿರುವ ಅಪಚಾರದಿಂದ ಓಜೋನ್ ಪದರವು ಸಂಕಷ್ಟದ ಹಾದಿ ಹಿಡಿದು ಮನು ಕುಲದ ಮೇಲೆ ದುಷ್ಪರಿಣಾಮ ಬೀರುವಂತಾಗಿದೆ ಎಂದು ಪಟ್ಟಣದ ಸರ್ಕಾರಿ ಕಾನೂನು ಕಾಲೇಜಿನ ಪ್ರಾಂಶುಪಾಲೆ ಲಲಿತಾಬಾಯಿ ವಿಷಾದಿಸಿದರು.
ಪಟ್ಟಣದ ಪ್ರಥಮದರ್ಜೆ ಕಾಲೇಜಿನ ಆವರಣದಲ್ಲಿನ ಬಿಸಿಎಂ ವಿದ್ಯಾರ್ಥಿ ನಿಲಯ ಆವರಣದಲ್ಲಿ ಜಿಲ್ಲಾ ನೆಹರು ಯುವಕೇಂದ್ರ ಆಯೋಜಿಸಿದ್ದ ನನ್ನ ಭೂಮಿ ನನ್ನ ಕರ್ತವ್ಯ ಸಮಾರಂಭದಲ್ಲಿ ನಡೆದ ಸಸಿ ನೆಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರಸ್ತುತ ಸಮಾಜದಲ್ಲಿ ಮರಗಳನ್ನು ಕಡಿಯುತ್ತಿರುವುದರಿಂದ ಪರಿಸರದಲ್ಲಿ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.
ಇದನ್ನು ತಡೆಗಟ್ಟಲು ಒಂದೇ ಒಂದು ಉಪಾಯ ಎಂದರೆ ಪ್ರತಿ ನಾಗರಿಕನೂ ತನ್ನ ಮನೆಯ ಮುಂದೆ ಸಸಿ ನೆಡಬೇಕು. ಇದರಿಂದ ಪರಿಸರ ವಿನಾಶ ತಪ್ಪಿಸಲು ಸಾಧ್ಯವಿದೆ. ಜತೆಗೆ ಇದರಿಂದ ಕಾಲಕಾಲಕ್ಕೆ ಮಳೆಯಾಗಿ ಬೆಳೆ ಬೆಳೆಯಲು ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟರು.
ತಾಲೂಕು ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷೆ ಪ್ರೇಮಾಮಂಜುನಾಥ್ ಮಾತನಾಡಿ, ಪ್ರತಿಯೊಬ್ಬರೂ ಸಮಾಜ ಸ್ವಾಸ್ಥ್ಯ ಕಾಪಾಡುವುದನ್ನು ರೂಢಿಸಿಕೊಳ್ಳಬೇಕೆಂದು ಮನವಿ ಮಾಡಿದರು.
ವಸತಿ ನಿಲಯದ ವಾರ್ಡನ್ ಕೃಷ್ಣಕುಮಾರ್, ನೆಹರು ಯುವ ಕೇಂದ್ರದ ಕಾರ್ಯದರ್ಶಿ ಉಮೇಶ್, ಶೃತಿ, ಅನಂತಪ್ಪ ಸೇರಿದಂತೆ ಹಲವರು ಇದ್ದರು.