ಮನೆಗಳಲ್ಲಿ ದೇವಿ ಪ್ರತಿಷ್ಠಾಪಿಸಿ ಭಕ್ತಿ ಮೆರೆದ ಸುಹಾಸಿನಿಯರು
ಕ.ಪ್ರ.ವಾರ್ತೆ ಹೊಳೆನರಸೀಪುರ ಆ.16
ಮಹಾಲಕ್ಷ್ಮೀ ಮನೆಗೆ ಬಾರಮ್ಮ... ಎಂದು ಮಹಿಳೆಯರು ವ್ರತಗಳಲ್ಲೆಲ್ಲಾ ಶ್ರೇಷ್ಠವಾದ ವ್ರತವೆನಿಸಿ ಸಕಲ ಸಂಪತ್ತು ಸೌಭಾಗ್ಯಗಳನ್ನು ಕರುಣಿಸುವ ವರಮಹಾಲಕ್ಷ್ಮೀ ವ್ರತವನ್ನು ಶುಕ್ರವಾರ ತಮ್ಮ ತಮ್ಮ ಮನೆಗಳಲ್ಲಿ ದೇವಿಯನ್ನು ಭಕ್ತಿಭಾವದಿಂದ ಪ್ರತಿಷ್ಠಾಪಿಸಿ ಚೆನ್ನಾಗಿ ಅಲಂಕರಿಸಿ ಪೂಜಿಸಿದರು.
ಇತ್ತೀಚಿನ ವರ್ಷಗಳಲ್ಲಿ ವರಮಹಾಲಕ್ಷ್ಮೀ ವ್ರತವನ್ನು ಮಾಡದಿರುವವರೇ ವಿರಳ ಎನ್ನುವಷ್ಟರ ಮಟ್ಟಿಗೆ ಈ ವ್ರತ ವ್ಯಾಪಕವಾಗಿ ಎಲ್ಲೆಡೆಯೂ ಹಬ್ಬಿ ತನ್ನ ಪ್ರಾಧಾನ್ಯತೆಯನ್ನು ವರ್ಷದಿಂದ ವರ್ಷಕ್ಕೆ ಹೆಚ್ಚಿಸಿಕೊಳ್ಳುತ್ತಿರುವುದು ವಿಶೇಷ.
ಶಾಸ್ತ್ರಗಳಲ್ಲಿ ಹೇಳಿರುವಂತೆ ಶ್ರಾವಣ ಮಾಸೇ ಶುಕ್ಲೇ ಚ ಪೌರ್ಣಮ್ಯಾಂ ಭಾರ್ಗವಾಸರೇ ಎಂಬಂತೆ ಶ್ರಾವಣ ಮಾಸ ಶುಕ್ಲ ಪಕ್ಷ ಹುಣ್ಣಿಮೆಯ ಮೊದಲು ಬರುವ ಕೊನೆಯ ಶುಕ್ರವಾರ ಈ ವ್ರತವನ್ನು ಆಚರಿಸುತ್ತಾರೆ. ಒಂದು ವೇಳೆ ಹುಣ್ಣಿಮೆಯ ದಿನ ಶುಕ್ರವಾರವೇ ಆದರೆ ಅಂದೇ ಈ ಪೂಜಾ ಕಾರ್ಯವನ್ನು ಆಚರಿಸಲಾಗುತ್ತದೆ.
ಮಹಿಳೆಯರು ಹಾಗೂ ಹೆಣ್ಣು ಮಕ್ಕಳು ನಮ್ಮ ಸಂಪ್ರದಾಯದಲ್ಲಿನ ಎಲ್ಲಾ ಹಬ್ಬ ಹರಿದಿನಗಳನ್ನೂ ಭಕ್ತಿ-ಭಾವದಿಂದಲೇ ಆಚರಿಸಿದರೂ, ಅದರಲ್ಲಿಯೂ ವಿಶೇಷವಾಗಿ ಗೌರಿ ಪೂಜೆ, ತುಳಸಿ ಪೂಜೆ, ವೈಭವ ಲಕ್ಷ್ಮೀ ಪೂಜೆಗಳೇ ಅಲ್ಲದೇ ವರಮಹಾಲಕ್ಷ್ಮೀ ಪೂಜೆಯನ್ನೂ ಅಷ್ಟೇ ಭಕ್ತಿ ಸಂಭ್ರಮ, ಸಡಗರದಿಂದ ಆಚರಿಸುವುದು ವಿಶೇಷ ಸಂಗತಿ.
ವರಮಹಾಲಕ್ಷ್ಮೀ ಹಬ್ಬದಲ್ಲಿ ವಿಶೇಷವಾಗಿ ಹನ್ನೆರಡು ಗಂಟುಗಳ ದಾರವನ್ನು ಉಪಯೋಗಿಸುವುದುಂಟು. ಅಲಂಕರಿಸಿದ ಮಂಟಪದಲ್ಲಿ ಅಕ್ಕಿ ಹಾಕಿದ ತಟ್ಟೆಯಲ್ಲಿ ಪದ್ಮ ಬರೆದು ಅದರ ಮೇಲೆ ಕಲಶವನ್ನಿಟ್ಟು, ಅದರೊಳಕ್ಕೆ ಶುದ್ಧೋದಕ, ಕೇಸರಿ, ಪಚ್ಚಕರ್ಪೂರ ಹಾಕುತ್ತಾರೆ. ಮಾವಿನ ಗೊಂಚಲನ್ನಿಟ್ಟು ಅದರ ಮೇಲೆ ತೆಂಗಿನಕಾಯಿಗೆ ಅರಿಶಿನ ಸವರಿ, ಕುಂಕುಮ ಚಂದನಗಳನ್ನಿಟ್ಟು ಹೂವಿನಿಂದ ಅಲಂಕರಿಸುತ್ತಾರೆ.
ಯಮುನಾ ಪೂಜೆ ನಂತರ ಅದರ ನೀರನ್ನು ಕಲಶದೊಳಕ್ಕೆ ಹಾಕಿ, ಲಕ್ಷ್ಮೀ ಕಲಶವನ್ನೇ ಯಮುನಾ ಕಲಶವನ್ನಾಗಿಟ್ಟು ಪದ್ಮಾಸನೇ ಪದ್ಮಕರೇ ಸರ್ವಲೋಕೈಕ ಪೂಜಿತೇ- ನಾರಾಯಣಪ್ರಿಯೇ ದೇವಿ ಸುಪ್ರೀತಾ ಭವ ಸರ್ವದಾ ಎಂದು ವರಮಹಾಲಕ್ಷ್ಮಿಯನ್ನು ಪೂಜಿಸುವುದು ವಾಡಿಕೆ.
ಪೂಜೆಯ ನಂತರ ಮುತ್ತೈದೆಯರನ್ನು ಮನೆಗೆ ಕರೆದು ಅರಿಶಿನ ಕುಂಕುಮ ಮತ್ತು ಬಳೆಗಳನ್ನು ನೀಡುವುದು ಸಂಪ್ರದಾಯ. ಮುತ್ತೈದೆಯರು ಪರಸ್ಪರ ಸುಗಂಧ ದ್ರವ್ಯಗಳನ್ನು ವಿನಿಮಯ ಮಾಡಿಕೊಳ್ಳುವುದೂ ಉಂಟು. ಹಬ್ಬದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಹೂವು, ಹಣ್ಣುಗಳು ಹಾಗೂ ಇನ್ನಿತರ ಪೂಜಾ ಸಾಮಗ್ರಿಗಳ ಬೆಲೆಯು ದುಬಾರಿಯಾಗಿದ್ದು ಸಾಮಾನ್ಯ ಸಂಗತಿಯೇ ಆದರೂ, ಈ ಸಂದರ್ಭದಲ್ಲಿ ಜನರು ದುಬಾರಿ ಬಗ್ಗೆ ತಲೆಕೆಡಿಸಿಕೊಳ್ಳದೆ ಅಗತ್ಯ ವಸ್ತುಗಳನ್ನು ಕೊಂಡು ಈ ಹಬ್ಬವನ್ನು ತಮ್ಮ ಶಕ್ತ್ಯಾನುಸಾರ ಆಚರಿಸುತ್ತಲೇ ಬಂದಿರುತ್ತಾರೆ.
ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತವಾಗಿ ಇಡೀ ಪಟ್ಟಣದ ಬಹುತೇಕ ಮನೆಗಳಲ್ಲಿ ಹಬ್ಬದ ಸಂಭ್ರಮ ಸಡಗರ ಎದ್ದು ಕಾಣುತ್ತಿತ್ತು. ಹೆಣ್ಣುಮಕ್ಕಳಿರುವ ಮನೆಗಳಲ್ಲಂತೂ ಈ ಸಂಭ್ರಮ ದುಪ್ಪಟ್ಟಾಗಿತ್ತು.
ಇವರೇನಂತಾರೆ ?
ತರಕಾರಿ ಬೆಲೆ ಹೆಚ್ಚಳವಾಗಲು ಮುಖ್ಯ ಕಾರಣ ಜಮೀನಿನಲ್ಲಿ ರೈತರು ತರಕಾರಿ ಬೆಳೆಯಲು ಕಡಿಮೆ ಮಾಡಿ ಇತರೆ ಪರ್ಯಾಯ ಬೆಳೆ ಬೆಳೆಯಲು ಮುಂದಾಗುತ್ತಿರುವುದು ಒಂದು ಕಾರಣವಾದರೆ, ಮತ್ತೊಂದು ಕಡೆ ಅತಿಯಾದ ಮಳೆಯಿಂದ ಬೆಳೆದ ಬೆಳೆಯೆಲ್ಲಾ ನಾಶವಾಗಿರುವುದು
ಟಿ ನಾಗರಾಜ್, ರೈತ
ಹೆಚ್ಚಿನ ಮಳೆ ಬಂದಿರುವುದರಿಂದ ರೈತರು ಬೆಳೆದ ಬೆಳೆಯೆಲ್ಲಾ ನಾಶವಾಗಿದೆ. ರೈತರು ಈಗ ತರಕಾರಿ ಬೆಳೆ ಬದಲಾಯಿಸಿ ಇತರೆ ಬೆಳೆಯತ್ತ ಗಮನ ನೀಡಿರುವುದು ಸಹ ಮಾರುಕಟ್ಟೆಯಲ್ಲಿ ತರಕಾರಿಗಳ ಬೆಲೆ ಹೆಚ್ಚಾಗಲು ಮುಖ್ಯ ಕಾರಣ
ಟಿ ಅಗಿಲೆ ಮೋಹನ್, ರೈತ
ಮೊದಲು ತರಕಾರಿ ಬೆಳೆದು ಬೆಲೆ ಇಲ್ಲದೆ ನಷ್ಟ ಅನುಭವಿಸಿ, ಈಗ ಶುಂಠಿ, ಆಲೂಗಡ್ಡೆ ಬೆಳೆಗೆ ನಾವು ಮುಂದಾದೆವು. ಮಳೆಯಿಂದ ಶುಂಠಿ ಕೊಳೆತು ಹೋಯಿತು. ಆಲೂ ಬೆಳೆಗೆ ಅಂಗಮಾರಿ ರೋಗ ತಗಲಿ ನಾಶ ಹೊಂದಿದೆ
ಟಿ ಲೋಕಪ್ಪಗೌಡ