ಮಾಡಾಳು ಸ್ವರ್ಣಗೌರಿ ದೇಗುಲದಲ್ಲಿ ಪಂಚಮಿ ಹಬ್ಬ
ಕ.ಪ್ರ.ವಾರ್ತೆ ಅರಸೀಕೆರೆ ಆ.16
ತಾಲೂಕಿನ ಸುಕ್ಷೇತ್ರ ಮಾಡಾಳು ಸ್ವರ್ಣಗೌರಿಯ ಮೂಲಸ್ಥಾನ ಗೌರಮ್ಮನ ಬಾವಿಗೆ ಪಂಚಮಿ ಹಬ್ಬ ಹಾಗೂ ಮುತ್ತೈದೆಯರ ಸೇವೆಯನ್ನು ಸುಕ್ಷೇತ್ರ ಹಾರನಹಳ್ಳಿ ಕೋಡಿಮಠದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭಕ್ತರ ಸಮ್ಮುಖದಲ್ಲಿ ನೆರವೇರಿಸಿದರು.
ಮೂವರು ಮುತ್ತೈದೆಯರಿಗೆ ಶಾಸ್ತ್ರೋಕ್ತವಾಗಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸೇವೆ ಜಂಗಮಪೂಜೆ ಹಾಗೂ ಕಳಸ ಸ್ಥಾಪನೆಯೊಂದಿಗೆ ನೆರವೇರಿಸಿದರು. ಶ್ರಾವಣಮಾಸದ ಆರಂಭದಲ್ಲಿ ನಾಗರ ಪಂಚಮಿ, ವರಮಹಾಲಕ್ಷ್ಮೀ ಪೂಜೆ, ಸ್ವರ್ಣಗೌರಿ ವ್ರತ ಇನ್ನಿತರ ಪೂಜಾ ಕಾರ್ಯಕ್ರಮಗಳು ಬಿಡುವಿಲ್ಲದೆ ನಡೆಯುವುದರಿಂದ ಇವುಗಳು ಯಾವುದೇ ಅಡ್ಡಿ ಆತಂಕಗಳಿಲ್ಲದೆ ನಿರಾತಂಕವಾಗಿ ನಡೆಯಲಿ ಎಂದು ಆಶೀರ್ವದಿಸಿದರು.
ಸಿದ್ಧರು, ದಾರ್ಶನಿಕರು, ಮಹಾಮಹಿಮರು, ತಪೋಧನರು ಹುಟ್ಟಿದ ಈ ನಾಡಿನಲ್ಲಿ ಜನ್ಮ ತಾಳಿರುವ ನಾವುಗಳೇ ಪುಣ್ಯವಂತರು. ಅವರು ಹಾಕಿಕೊಟ್ಟಿರುವ ಸನ್ಮಾರ್ಗದಲ್ಲಿ ನಡೆದರೆ ಮೋಕ್ಷ ಪ್ರಾಪ್ತಿಯಾಗುತ್ತದೆ. ದೈವಿಕ ಆರಾಧನೆಯಿಂದ ಭಗವಂತನನ್ನು ಕಾಣಬಹುದು, ಆ ಮೂಲಕ ಭಕ್ತಿ ಸಮರ್ಪಣೆಗೆ ಸಾಧ್ಯವಾಗುತ್ತದೆ.
ಪೋಷಕರು ಮಕ್ಕಳಿಗೆ ಬಾಲ್ಯದಿಂದಲೇ ಉತ್ತಮ ಸಂಸ್ಕಾರವನ್ನು ನೀಡಿ ದೇವರು, ಗುರು, ಹಿರಿಯರಲ್ಲಿ ಭಯ, ಭಕ್ತಿ ಬೆಳೆಸುವುದರ ಮೂಲಕ ಸಜ್ಜನ ನಾಗರೀಕರನ್ನಾಗಿ ಮಾಡುವ ಜವಾಬ್ದಾರಿ ವಹಿಸಿಕೊಳ್ಳಬೇಕೆಂದು ಕರೆ ನೀಡಿದರು. ಮಾಡಾಳು ಸುತ್ತಮುತ್ತಲಿನ ಮಹಿಳೆಯರು, ಗ್ರಾಮಸ್ಥರು ಪಾಲ್ಗೊಂಡಿದ್ದರು.