ಎಚ್ಚರ, ಪ್ರಮುಖ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ
ಕ.ಪ್ರ.ವಾರ್ತೆ ಹಾಸನ ಆ. 17
ಇನ್ನು ಮುಂದೆ ನಗರದಲ್ಲಿ ಎಲ್ಲೆಂದರಲ್ಲಿ ಕಾರು, ಬೈಕ್ ಮತ್ತಿತರ ವಾಹನಗಳನ್ನು ನಿಲ್ಸೋದು, ಅಡ್ಡಾದಿಡ್ಡಿ ಗಾಡಿ ಓಡಿಸುವ ಹಾಗಿಲ್ಲ. ಕಾನೂನು ಉಲ್ಲಂಘನೆ ಮಾಡಿದ್ರೇ ಸಿಕ್ಕಾಕೋಳ್ಳೊದು ಗ್ಯಾರಂಟಿ ಕಂಡ್ರೀ...
ಹೌದು...ಕಾನೂನು ಸುವ್ಯವಸ್ಥೆ ಹಾಗೂ ಅಪರಾಧ ಪ್ರಕರಣಗಳನ್ನು ತಡೆಗಟ್ಟಲು ನಗರದ 15 ಸ್ಥಳಗಳಲ್ಲಿ ಜಿಲ್ಲಾ ಪೊಲೀಸ್ ಸಿಸಿ ಕ್ಯಾಮೆರಗಳನ್ನು ಅಳವಡಿಸಿ, ಕಾನೂನು ಸುವ್ಯವಸ್ಥೆ ಕಾಪಾಡಲು ಮುಂದಾಗಿದೆ.
ಇತ್ತೀಚೆಗೆ ನಗರದಲ್ಲಿ ಅಪಘಾತ, ಕಳವು ಪ್ರಕರಣಗಳು, ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸುವುದು, ಸಂಚಾರಿ ನಿಯಮಗಳನ್ನು ಉಲ್ಲಂಘಿಸುವುದು, ಬೈಕ್ ವೇಗವಾಗಿ ಚಲಾಯಿಸುವಂತಹ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಜಿಲ್ಲಾ ಪೊಲೀಸ್ ಇದೀಗ ಪ್ರಮುಖ ಜನನಿಬಿಡ ಪ್ರದೇಶಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿದ್ದು, ನಗರದಲ್ಲಿ ನಡೆಯುವಂತಹ ಇಂಥ ಯಾವುದೇ ಚಲನವಲನಗಳನ್ನು ಸೂಕ್ಷ್ಮ ಕಣ್ಣಿನಿಂದ ಗಮನಿಸಲಾಗುತ್ತದೆ.
ದಿನೇ ದಿನೇ ನಗರದಲ್ಲಿ ವಾಹನ ದಟ್ಟಣೆ ಹೆಚ್ಚಾಗುತ್ತಿದ್ದು, ಸುಗಮ ಸಂಚಾರಕ್ಕೆ ಅಸಾಧ್ಯ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ವಾಹನ ಸವಾರರು ಸಂಚಾರಿ ನಿಯಮ ಸರಿಯಾಗಿ ಪಾಲಿಸಿದ ಕಾರಣ ಅಪಘಾತ ಹೆಚ್ಚಾಗುತ್ತಿವೆ. ಹಾಗೆಯೇ ಕಳವು ಪ್ರಕರಣಗಳು ಜಾಸ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ಸಿಸಿ ಕ್ಯಾಮೆರಾ ಮೂಲಕ ಅಪರಾಧ ಎಸಗುವಾತನನ್ನು ಸುಲಭವಾಗಿ ಪತ್ತೆ ಹಚ್ಚುವ ಮೂಲಕ ಆರೋಪಿಗಳಿಗೆ ಕಠಿಣ ಶಿಕ್ಷೆ ಹಾಗೂ ದಂಡವನ್ನು ವಿಧಿಸಲಾಗುತ್ತದೆ.
ನಗರದ 15 ಕಡೆ ಸಿಸಿ ಕ್ಯಾಮೆರಾ: ಜಿಲ್ಲಾ ಎಸ್ಪಿ ರವಿ ಡಿ.ಚನ್ನಣ್ಣನವರ್ ಸುದ್ದಿಗಾರರೊಂದಿಗೆ ಮಾತನಾಡಿ, ಕಾನೂನು ಸುವ್ಯವಸ್ಥೆ ಕಾಪಾಡಲು ಹಾಗೂ ವಾಹನಗಳ ಸುಗಮ ಸಂಚಾರಕ್ಕೆ ಹಾಗೂ ಅಪರಾಧ ಪ್ರಕರಣಗಳನ್ನು ನಿಯಂತ್ರಣಕ್ಕೆ ತರಲು ಜಿಲ್ಲಾ ಪೊಲೀಸ್ ಇಲಾಖೆ ಮುಂದಾಗಿದೆ. ಈ ನಿಟ್ಟಿನಲ್ಲಿ ನಗರದ 15 ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿದ್ದು, ಈಗಾಗಲೇ ಎಲ್ಲಾ ಕ್ಯಾಮೆರಾಗಳು ಚಾಲನೆಯಲ್ಲಿದ್ದು, ಪೊಲೀಸರು ನಗರದಲ್ಲಿ ನಡೆಯುವ ಪ್ರತಿನಿತ್ಯದ ಚಲನಲನಗಳನ್ನು ಗಮನಿಸುತ್ತಾರೆ ಎಂದು ಹೇಳಿದರು.
ನಗರದ ಎನ್.ಆರ್.ವೃತ್ತ, ಸಾಲಗಾಮೆ ರಸ್ತೆ, ಎಂ.ಜಿ.ರಸ್ತೆ, ಜಿಲ್ಲಾ ಪಂಚಾಯ್ತಿ ಕಚೇರಿ ಮುಂದೆ, ಶಂಕರ್ನಾಗ್ ವೃತ್ತ, ಜಿಲ್ಲಾಸ್ಪತ್ರೆ ಮುಂದೆ, ಡೈರಿ ವೃತ್ತ ಸೇರಿದಂತೆ ನಾನಾ ಜನದಟ್ಟಣೆ ಇರುವ ಸ್ಥಳಗಳಲ್ಲಿ 15 ಸಿಸಿ ಕ್ಯಾಮೆರಾಗಳನ್ನು ಇಲಾಖೆಯ ಅನುದಾನದಲ್ಲಿ ಅಳವಡಿಸಲಾಗಿದೆ. ನಗರದಲ್ಲಿ ಅಪರಾಧ ಪ್ರಕರಣ ತಡೆಗಟ್ಟುವುದು ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವುದು ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ಅಜಾದ್ ರಸ್ತೆ, ಸ್ಲೇಟರ್ಹಾಲ್ ವೃತ್ತ, ಪಂಚಮುಖಿ ವೃತ್ತ, ಕೆ.ಆರ್.ಪುರಂ ಮಸೀದಿ ಹತ್ತಿರ, ಶಾಹಿಮಸೀದಿ, ಸಹ್ಯಾದ್ರಿ ವೃತ್ತ, ಹೊಸ ಬಸ್ ನಿಲ್ದಾಣ ಸೇರಿದಂತೆ ಇತರೆ ಕಡೆಗಳಲ್ಲಿಯೂ ಸಿಸಿ ಕ್ಯಾಮೆರಾಗಳನ್ನ ಅಳವಡಿಸಿ ಕಾನೂನು ಬಾಹೀರವಾಗಿ ನಡೆಯುವಂತಹ ಚಟುವಟಿಕೆಗೆ ಕಡಿವಾಣ ಹಾಕಲಾಗುತ್ತದೆ. ಇದಕ್ಕೆ ಪ್ರತ್ಯೇಕ ಅಧಿಕಾರಿಯನ್ನು ನಿಯೋಜಿಸಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಸದ್ಯಕ್ಕೆ ಅಳವಡಿಸಿರುವ ಸಿಸಿ ಕ್ಯಾಮೆರಾಗಳಲ್ಲಿ ವಿಲಿಂಗ್ ಮಾಡುವವರು, ಅತೀ ವೇಗವಾಗಿ ವಾಹನ ಚಲಾಯಿಸುವವರನ್ನು, ನೋ ಪಾರ್ಕಿಂಗ್ನಲ್ಲಿ ವಾಹನಗಳನ್ನು ನಿಲ್ಲಿಸುವವರು ಹಾಗೂ ಒನ್ವೇನಲ್ಲಿ ವಾಹನಗಳನ್ನು ಸಂಚರಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಇನ್ನು ಕೆಲವು ದಿನಗಳಲ್ಲಿ ಎಲ್ಲಾ ರೀತಿಯ ಪ್ರಕರಣಗಳನ್ನು ಸಿಸಿ ಕ್ಯಾಮೆರಾಗಳಲ್ಲಿ ಸೆರೆ ಹಿಡಿದು ಆರೋಪಿಗಳ ವಿರುದ್ಧ ಶಿಸ್ತು ಕ್ರಮಕೈಗೊಳ್ಳಲಾಗುತ್ತದೆ ಎಂದು ನುಡಿದರು.
6 ಫೋನ್ಲೈನ್ಗಳು ಕಾರ್ಯಾರಂಭ: ಇದಕ್ಕಾಗಿಯೇ 6 ಫೋನ್ಲೈನ್ಗಳು ಕಾರ್ಯಾರಂಭ ಮಾಡಿದ್ದು, ಸಾರ್ವಜನಿಕರು ದೂರು ನೀಡಬಹುದಾಗಿದೆ. ಜೊತೆಗೆ ಪೊಲೀಸ್ ಕಂಟ್ರೋಲ್ರೂಂನವರು ಸಹ ಕಾರ್ಯನಿರ್ವಹಿಸಲಿದ್ದಾರೆ ಎಂದ ಅವರು, ಬ್ಯಾಂಕ್, ಆಭರಣದ ಅಂಗಡಿಗಳು, ಹೊಟೇಲ್, ಬಾರ್ ರೆಸ್ಟೋರೆಂಟ್, ದೊಡ್ಡ ಅಂಗಡಿ ಮುಂಗಟ್ಟುಗಳು, ಲಾಡ್ಜ್ಗಳು ಸೇರಿದಂತೆ ಇತರರೊಂದಿಗೆ ಈ ಕುರಿತು ಸಭೆ ನೆಡಸಿದ್ದು, ಅವರಿಗೂ ಕಡ್ಡಾಯವಾಗಿ ಸಿಸಿ ಕ್ಯಾಮೆರಾ ಅಳವಡಿಸಿಕೊಂಡು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ತಿಳಿಸಲಾಗಿದೆ ಎಂದು ಹೇಳಿದರು.
ಯಾರ್ಯಾರೋ ಪ್ರೆಸ್ ಎಂದು ಹಾಕಿಕೊಂಡರೆ ಕ್ರಮ: ಪತ್ರಕರ್ತರಲ್ಲದವರು ಅಕ್ರಮವಾಗಿ ಪ್ರೆಸ್ ಎಂದು ಹಾಕಿಕೊಂಡು ಚಲಾಯಿಸುತ್ತಿರುವ ಬಗ್ಗೆ ದೂರುಗಳು ಬಂದಿದ್ದು, ಅಕ್ರಮವಾಗಿ ಯಾರು ವಾಹನಗಳಲ್ಲಿ ಪ್ರೆಸ್ ಎಂದು ಹಾಕಿಕೊಂಡಿರುವುದು ಪತ್ತೆಯಾದಲ್ಲಿ ಅಂತಹವ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಸೂಕ್ತ ಕ್ರಮಕೈಗೊಳ್ಳುವುದಾಗಿ ಹೇಳಿದರು. ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಶ್ಮಿ ಇದ್ದರು.