'ನೌಕರರ ಸಂಘ ಸಮಾಜಮುಖಿ ಕಾರ್ಯದಲ್ಲಿ ತೊಡಗಲಿ'
ಕ.ಪ್ರ.ವಾರ್ತೆ ಹೊಳೆನರಸೀಪುರ ಆ. 17
ಪ್ರಜ್ಞಾವಂತರು ಹಾಗೂ ವಿದ್ಯಾವಂತರಿಂದ ಕೂಡಿರುವ ಸರ್ಕಾರಿ ನೌಕರರ ಸಂಘದ ತಾಲೂಕು ಶಾಖೆ ತನ್ನ ವ್ಯಾಪ್ತಿಯನ್ನು ಸೀಮಿತಗೊಳಿಸಿಕೊಳ್ಳದೆ, ಉತ್ತಮ ಕಾರ್ಯಗಳ ಮೂಲಕ ಸಮಾಜಮುಖಿಯಾಗಿ ತೊಡಗಿಸಿ ಕೊಳ್ಳುವಂತೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಎಂ.ಬಿ.ಇರ್ಷಾದ್ ಹೇಳಿದರು.
ಸರ್ಕಾರಿ ನೌಕರರ ಸಂಘದ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ಇರ್ಷಾದ್ ತಾಲೂಕು ಶಾಖೆಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಪದಾಧಿಕಾರಿಗಳಿಗೆ ಕೆಲವು ಹಿತವಚನ ಹಾಗೂ ಕರ್ತವ್ಯ ಪರಿಪಾಲನೆಯ ಕುರಿತಂತೆ ಕಿವಿಮಾತುಗಳನ್ನು ಹೇಳಿದರು.
ಸಂಘದ ಚುನಾವಣೆ ಸಂದರ್ಭದಲ್ಲಿ ಎಲ್ಲರೂ ಒಮ್ಮನಸ್ಸಿನಿಂದ ಅವಿರೋಧ ಆಯ್ಕೆಗೆ ಸಹಕಾರ ನೀಡಿದ ರೀತಿಯಲ್ಲಿಯೇ ಸಂಘವನ್ನು ನೂತನ ಪದಾಧಿಕಾರಿಗಳು ಮುನ್ನಡೆಸಿಕೊಂಡು ಹೋಗುವಂತೆ ತಿಳಿಸಿದರು.
ತಾಲೂಕಿನ ಸರ್ಕಾರಿ ನೌಕರರ ಪ್ರತಿನಿಧಿಯಾಗಿ ಸಂಘವು ಸಮಾಜವೆ ಹೆಮ್ಮೆಪಡುವಂತಹ ಸಮಾಜಮುಖಿ ಕಾರ್ಯಗಳ ಮೂಲಕವಾಗಿ ತನ್ನನ್ನು ತೊಡಗಿಸಿಕೊಳ್ಳುವಂತೆ ಕಿವಿಮಾತು ಹೇಳಿದರು.
ನಿಕಟಪೂರ್ವ ಅಧ್ಯಕ್ಷ ಪಶುವೈದ್ಯಕೀಯ ಇಲಾಖೆಯ ಚಂದ್ರಹಾಸ ಅವರು ಮಾತನಾಡಿ, ಯಾವುದೇ ಸಂಘ-ಸಂಸ್ಥೆಗಳು ಅಸ್ತಿತ್ವ ಉಳಿಸಿಕೊಳ್ಳಲು ಮೊದಲಿಗೆ ಸಂಪನ್ಮೂಲದ ಕ್ರೋಢೀಕರಣ ಬಹುಮುಖ್ಯ ಅಂಶ. ಈ ನಿಟ್ಟಿನಲ್ಲಿ ತಮ್ಮ ಅವಧಿಯಲ್ಲಿ ಸಂಘವು ಸಾಕಷ್ಟು ಸಂಪನ್ಮೂಲ ಕ್ರೋಢೀಕರಿಸಿದ್ದು, ಇದನ್ನು ಸಾರ್ವಜನಿಕ ಸೇವಾ ಕಾರ್ಯಗಳಿಗೆ ಹಾಗೂ ಸರ್ಕಾರಿ ನೌಕರರ ಹಿತರಕ್ಷಣೆಗಾಗಿ ವಿವೇಚನಾಯುಕ್ತವಾಗಿ ಬಳಸಿಕೊಳ್ಳುವಂತೆ ಸಲಹೆ ನೀಡಿದರು.
ತಾಲೂಕು ಶಾಖೆಯು ಹೊಂದಿರುವ ನಿವೇಶನದಲ್ಲಿ ಎಲ್ಲರ ಸಹಕಾರದೊಂದಿಗೆ ಹಾಗೂ ಶಾಸಕ ಎಚ್.ಡಿ.ರೇವಣ್ಣ ಅವರನ್ನು ಭೇಟಿಯಾಗಿ ಸಂಘಕ್ಕೆ ನೂತನ ಕಟ್ಟಡ ನಿರ್ಮಿಸಲು ಸಹಕಾರ ನೀಡುವಂತೆ ಕೋರಲು ಸಭೆಯಲ್ಲಿ ನಿರ್ಧರಿಸಲಾಯಿತು.
ಸಂಘದ ನೂತನ ಅಧ್ಯಕ್ಷ ಹಾಗೂ ಪಟ್ಟಣದ ಬಾಲಕಿಯರ ಸರ್ಕಾರಿ ಪಪೂ ಕಾಲೇಜಿನ ಉಪನ್ಯಾಸಕ ಟಿ.ಎಸ್.ಕುಮಾರಸ್ವಾಮಿ ಮಾತನಾಡಿ, ಹುದ್ದೆಯ ಯಾವುದೇ ಹಮ್ಮು ಬಿಮ್ಮುಗಳಿಗೆ ಜೋತು ಬೀಳದೇ, ಎಲ್ಲರೊಂದಿಗೂ ಒಂದಾಗಿ ತಾಲೂಕಿನ ನೌಕರರ ಸಮಸ್ಯೆಗಳಿಗೆ ದನಿಯಾಗಿ ನಿಲ್ಲುವತ್ತ ತಾವು ಮೊದಲ ಪ್ರಾಶಸ್ತ್ಯ ನೀಡುವುದಾಗಿ ಭರವಸೆ ನೀಡಿದರು.
ಹಿಂದಿನ ಲೆಕ್ಕ-ಪತ್ರಗಳ ಪರಿಶೀಲನೆ ಹಾಗೂ ಸಂಘದ ಮುಂದಿನ ಕಾರ್ಯಚಟುವಟಿಕೆಗಳ ರೂಪುರೇಷೆ, ಸಂಘದ ಸಂಪನ್ಮೂಲ ಕ್ರೋಢೀಕರಣ ಕುರಿತು ಚರ್ಚಿಸಲು ಸಭೆ ತೀರ್ಮಾನಿಸಿತು.
ನೂತನ ಉಪಾಧ್ಯಕ್ಷ ಅರಣ್ಯ ಇಲಾಖೆಯ ಎಂ.ಜಿ.ಶಿವಣ್ಣ, ರಾಜ್ಯ ಪರಿಷತ್ತಿನ ಸದಸ್ಯ ಆರೋಗ್ಯ ಇಲಾಖೆಯ ವಿ.ಲೀಲಾಗಂಗಾಧರ್, ಕಾರ್ಯದರ್ಶಿ ಎಚ್.ಎನ್.ಜಯರಾಮ್, ಖಜಾಂಚಿ ಸೋಮೇಶ್, ಸದಸ್ಯ ಪಶು ವೈದ್ಯಾಧಿಕಾರಿ ಡಾ.ಮುರಳಿ, ಕಂದಾಯ ಇಲಾಖೆಯ ನಾಗರಾಜ್, ತಾಪಂ ನ ಕೆ.ಎನ್.ಯೋಗಾ, ಸಮಾಜ ಕಲ್ಯಾಣ ಇಲಾಖೆಯ ಎಚ್.ಜೆ.ರವಿಶಂಕರ್, ಅಬಕಾರಿ ಇಲಾಖೆಯ ಎಸ್.ರಮೇಶ್, ಭೂಮಾಪನಾ ಇಲಾಖೆಯ ಕೆ.ಗಿರೀಶ್, ಆರೋಗ್ಯ ಇಲಾಖೆಯ ಚಂದನ್, ಲಕ್ಷ್ಮಯ್ಯ ಮೊದಲಾದವರು ಹಾಜರಿದ್ದರು.