ಪ್ರಸನ್ನ ಬಾಣೇಶ್ವರ ದೇವಾಲಯ ವಿಮಾನ ಗೋಪುರ ಕುಂಭಾಭಿಷೇಕ
ಹಿರೀಸಾವೆ: ದಿಡಗ ಗ್ರಾಮದ ನೂತನ ದೇವಾಲಯ ಕುಂಭಾಭಿಷೇಕ ಹಾಗೂ ಉದ್ಘಾಟನಾ ಸಮಾರಂಭ ನಡೆಯಿತು. ಹೋಮ, ಹವನಾದಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಗಮಶಾಸ್ತ್ರ ವಿಶಾರದ, ವೇದರತ್ನ, ಶೃಂಗೇರಿ ಶ್ರೀಮಠ ಮುದ್ರಾದಿಕಾರಿ, ವೇದಬ್ರಹ್ಮ, ಯಜ್ಯ ಶ್ರೀಕಾಂತಶರ್ಮಾ ಮುತ್ತೂರು, ಚಿಕ್ಕಬಳ್ಳಾಪುರ ಜಿಲ್ಲೆ ಇವರ ಪ್ರಧಾನಾಚಾರ್ಯತ್ವದಲ್ಲಿ ನೆರವೇರಿತು.
ಸಂಜೆ ಗೋಧೂಳಿ ಲಗ್ನದಲ್ಲಿ ಮಹಾಗಣಪತಿ ಪೂಜೆ ಗಂಗಾಪೂಜೆ ಗೋಪೂಜೆ ದೇವನಾಂದಿ, ಕಂಕಣಧಾರಣೆ , ವಾಸ್ತುಪರ್ಯಗ್ನೀಕರಣ ಕಾರ್ಯಕ್ರಮಗಳೊಂದಿಗೆ ಪ್ರಾರಂಭ ಗೊಂಡಿತು. ರಾತ್ರಿ7-30ರಿಂದ ರಂಗಗೀತೆ, ರಂಗ ದೃಶ್ಯಾವಳಿ ಏರ್ಪಡಿಸಲಾಗಿತ್ತು.
ಸಂಗೀತ ರತ್ನ, ಕೇಂದ್ರ ನಾಟಕ ಅಕಾಡಮಿ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪರಮಶಿವನ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿ ನಿವೃತ್ತ ಪ್ರೊ. ಎ.ವಿ. ಸೂರ್ಯನಾರಾಯಣಸ್ವಾಮಿ ಮಾತನಾಡಿ, ಕಳೆದುಹೋಗುತ್ತಿರುವ ನಮ್ಮ ಸಂಸ್ಕತಿ, ಪರಂಪರೆಯನ್ನು ಬೆಳೆಸಿ ಉಳಿಸಬೇಕಾಗಿದೆ. ಅಂತಹ ಕಾರ್ಯಕ್ರಮ ಯಶಸ್ವಿಗೊಳ್ಳಬೇಕಾದರೆ ನಮ್ಮ ಪುರಾಣ ಮತ್ತು ಇತಿಹಾಸಗಳನ್ನು ಇಂದಿನ ಮಕ್ಕಳಿಗೆ ತಿಳಿಸಿಕೊಡಬೇಕು ಎಂದರು.
ಪೌರಾಣಿಕ ಕಥೆಗಳಲ್ಲಿ ರಾಮ, ಕೃಷ್ಣ, ಅರ್ಜುನ, ರಾವಣ, ಮಹಾರಾಜ, ಏಸುಕ್ರಿಸ್ತ ಮುಂತಾದ ಪಾತ್ರಗಳು, ಜೀವಂತ ದೃಶ್ಯಗಳಾಗಿ ಮಕ್ಕಳ ಕಣ್ಮುಂದೆ ಬಂದಾಗ ಮಕ್ಕಳಿಗೆ ಅದರ ಬಗ್ಗೆ ಆಸಕ್ತಿ ಮೂಡುತ್ತದೆ. ಮಕ್ಕಳು ಆ ಪಾತ್ರದ ವ್ಯಕ್ತಿತ್ವವನ್ನು ಮನಸ್ಸಿನಲ್ಲಿ ಮೂಡಿಸಿಕೊಳ್ಳುತ್ತಾರೆ ಹಾಗೂ ಅನುಸರಣೆ ಮಾಡುತ್ತಾರೆ ಎಂದು ಹೇಳಿದರು.
ರಂಗ ದಿಗ್ಗಜ ಕರ್ನಾಟಕ ರಂಗಸಂಗೀತ ಪರಿಷತ್ ಅಧ್ಯಕ್ಷ ಎಚ್.ಎಸ್.ಗೋವಿಂದೇಗೌಡ, ಕುಪ್ಯಂ ವೆಂಕಟರಾಮು, ರಂಗ ಸಂಗೀತ ರತ್ನ ಪ್ರಶಸ್ತಿ ಪುರಸ್ಕೃತ ಚೌಡಪ್ಪದಾಸ್, ಕಿರಂಗಸೂರು ರಾಜಪ್ಪ, ಶ. ವಿಠಲದಾಸರು ಮುಂತಾದ ಕಲಾವಿದರು ಭಾಗವಹಿಸಿದ್ದರು. ಎಲ್ಲಾ ಕಲಾವಿದರಿಗೂ ಕೆ.ಪಿ. ಬಲರಾಮೇಗೌಡ ಮತ್ತು ಡಿ. ಎ. ಶ್ರೀನಿವಾಸಮೂರ್ತಿ ಮಾರ್ಗದರ್ಶನದಲ್ಲಿ ದಿಡಗ ಗ್ರಾಮಸ್ಥರು ಸನ್ಮಾನಿಸಿದರು. ಡಿ.ಎ. ಶ್ರೀನಿವಾಸಮೂರ್ತಿ ನಿರೂಪಿಸಿದರು.