ಮುದ್ರಣಕಾರರ ಸಂಘದಿಂದ ಸ್ವಾತಂತ್ರ್ಯ ದಿನಾಚರಣೆ
ಹಾಸನ: ಜಿಲ್ಲಾ ಮುದ್ರಣಾಕಾರರ ಸಂಘದಿಂದ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು. ನಗರಸಭಾ ಸದಸ್ಯ ಎಚ್.ಬಿ. ಗೋಪಾಲ್ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟವರನ್ನು ಸ್ಮರಿಸುತ್ತಾ, ಅವರು ತೋರಿದ ದಾರಿಯಲ್ಲಿ ನಾವು ಶಿಸ್ತು, ಸಂಯಮದಿಂದ ಜೀವನ ರೂಪಿಸಿ ಕೊಳ್ಳ ಬೇಕಾಗಿದೆ ಎಂದರು. ಮುಖ್ಯ ಅತಿಥಿ ಎಚ್.ಎಚ್. ದೇವರಾಜ್, ಸ್ವಾತಂತ್ರ್ಯ ಬಂದು ಇಷ್ಟು ವರ್ಷ ಕಳೆದರೂ ದೇಶದಲ್ಲಿ ಅನೇಕ ಸಮಸ್ಯೆಗಳು ಜೀವಂತ ಇವೆ. ಅವುಗಳನ್ನು ಹೋಗಲಾಡಿಸುವತ್ತ ಶ್ರಮಿಸಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಬಿ.ಎಸ್. ಜಗದೀಶ್ ಮಾತನಾಡಿ, ನಮ್ಮ ಕಾಯಕವನ್ನು ಶ್ರದ್ಧೆ ನಿಷ್ಠೆಯಿಂದ ಮಾಡಿಕೊಂಡು ಬಂದರೆ ಅದು ಸಹ ನಾವು ದೇಶಕ್ಕೆ ನೀಡುವ ಕೊಡುಗೆಯಾಗಿದೆ. ಹಾಸನ ಜಿಲ್ಲೆಯಲ್ಲಿ ಎಲ್ಲ ಶಿಕ್ಷಣಕ್ಕೂ ಗಮನ ಹರಿಸಲಾಗಿದೆ. ಆದರೆ ಮುದ್ರಣ ಕ್ಷೇತ್ರಕ್ಕೆ ಒಂದು ಶಿಕ್ಷಣ ಸಂಸ್ಥೆಯ ಅವಶ್ಯಕತೆ ಇದೆ. ಅದನ್ನು ನಮ್ಮ ಸಂಘದಿಂದ ಪ್ರಾರಂಭಿಸಲು ಉದ್ದೇಶಿಸಲಾಗಿದೆ. ಅದಕ್ಕಾಗಿ ನಿವೇಶನ ಕೋರಿ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಈ ನಿಟ್ಟಿನಲ್ಲಿ ಹಂತಹಂತವಾಗಿ ಕಾರ್ಯಗತ ಗೊಳಿಸಬೇಕಾಗಿದೆ ಎಂದು ತಿಳಿಸಿದರು. ಮುಖ್ಯ ಅತಿಥಿ ಗೋಪಾಲಕೃಷ್ಣ ಮಾತನಾಡಿದರು. ಸಹಕಾರ್ಯದರ್ಶಿ ಎಚ್.ಲೋಕೇಶ್, ಖಜಾಂಚಿ ಕಿರಣ್ ಕಿರಗಡಲು ಹಾಗೂ ಸಂಘದ ನಿರ್ದೇಶಕರು, ಸದಸ್ಯರು ಭಾಗವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಬಿ.ಎಂ. ವೀರಾಜು ಸ್ವಾಗತಿಸಿದರು.