ಸುಜಲ ಕಾಲೇಜಿನಲ್ಲಿ ಸ್ವಾತಂತ್ರ್ಯೋತ್ಸವ
ಹಾಸನ: ಸುಜಲ ಶಿಕ್ಷಣ ಸಂಸ್ಥೆಯಲ್ಲಿ 67ನೇ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು. ಕನ್ನಡ ಉಪನ್ಯಾಸಕ ಮುಜಮ್ಮಿಲ್ ಪಾಷ ಸ್ವಾಗತಿಸಿದರು. ಕಾರ್ಯದರ್ಶಿ ಲೋಕೇಶ್ ಎಸ್. ಸುಜಲ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಕುಮಾರ್, ಸುಜಲ ಪಿಯುಸಿ ಕಾಲೇಜಿನ ಪ್ರಾಂಶುಪಾಲ ಜುಲ್ಫೀಕರ್ ಅಹಮದ್, ಖಜಾಂಚಿ ಚಂದ್ರಶೇಖರ್ ಎಚ್.ಎಸ್. ಉಪಸ್ಥಿತರಿದ್ದರು. ಸಂಸ್ಥೆ ಅಧ್ಯಕ್ಷ ಡಿ. ಸುಬ್ಬೇಗೌಡ ಧ್ವಜಾರೋಹಣ ನೆರವೇರಿಸಿದರು. ಚೇತನ ಎಚ್. ವಿ. ವಂದಿಸಿದರು.
ವನಗೂರು ಶಾಲೆಯಲ್ಲಿ ಸಡಗರದ ಆಚರಣೆ
ಸಕಲೇಶಪುರ: ತಾಲೂಕಿನ ವನಗೂರು ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ 67 ನೇ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು. ಎಸ್ಡಿಎಂಸಿ ಉಪಾಧ್ಯಕ್ಷ ತಮ್ಮಣ್ಣೀಗೌಡ, ನಿವೃತ್ತ ಲೆಕ್ಕಪರಿಶೋಧನಾಧಿಕಾರಿ ನಂಜೇಗೌಡ ಜಂಟಿಯಾಗಿ ಧ್ವಜಾರೋಹಣ ನೆರವೇರಿಸಿದರು. ಎಸ್ಎಸ್ಎಲ್ಸಿಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥ್ಥಿಗಳಿಗೆ ದಿ. ತಮ್ಮೇಗೌಡ ಸ್ಮರಣಾರ್ಥ ಪ್ರಶಸ್ತಿ ನೀಡಲಾಯಿತು. ಜಾಗಟೆ ಪ್ರತಿಷ್ಠಾನ ಸಂಸ್ಥೆಯಿಂದ ಎಲ್ಲಾ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಪದಕೋಶ ವಿತರಿಸಲಾಯಿತು.ಮಹಿಳಾ ನಿಲಯ ಪ್ರವೇಶಕ್ಕೆ ಆಹ್ವಾನ
ಹಾಸನ: ಕಾರ್ಯನಿರತ ಮಹಿಳಾ ವಸತಿ ನಿಲಯ, ಹೇಮಗಂಗೋತ್ರಿ, ಬಿ.ಎಂ.ರಸ್ತೆ, ಹಾಸನ ಇಲ್ಲಿ 2013-14ನೇ ಸಾಲಿಗೆ ಪ್ರವೇಶ ಪಡೆಯಲು ಬಯಸುವ ಆಸಕ್ತ ಕಾರ್ಯನಿರತ ಮಹಿಳೆಯರು ಪ್ರಕಟಣೆಗೊಂಡ ಏಳು ದಿನಗಳೊಳಗೆ ಅರ್ಜಿಯನ್ನು ನಿರ್ದೇಶಕರು, ಸ್ನಾತಕೋತ್ತರ ಕೇಂದ್ರ, ಹೇಮಗಂಗೋತ್ರಿ, ಹಾಸನ ಇಲ್ಲಿ ಪಡೆದು ಸಲ್ಲಿಸಬಹುದೆಂದು ತಿಳಿಸಲಾಗಿದೆ.
ದೇವರಾಜ ಅರಸು ಜನ್ಮದಿನಾಚರಣೆ
ಹಾಸನ: ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಮತ್ತು ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಆಶ್ರಯದಲ್ಲಿ ಸಾಮಾಜಿಕ ಕ್ರಾಂತಿಯ ನೇತಾರ, ಸಾಧನೆಗಳ ಸರದಾರ ಹಾಗೂ ದಿ. ಮಾಜಿ ಮುಖ್ಯಮಂತ್ರಿ ದೇವರಾಜ ಅರಸು 98ನೇ ಜನ್ಮ ದಿನಾಚರಣೆ ಆ. 20ರಂದು ಬೆಳಗ್ಗೆ 10 ಕ್ಕೆ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಾ. ಮಹದೇವಪ್ಪ ಕಾರ್ಯಕ್ರಮ ಉದ್ಘಾಟಿಸುವರು. ಮಾಜಿ ಪ್ರಧಾನಿ ದೇವೇಗೌಡರು ಉಪಸ್ಥಿತರಿರುವರು. ಶಾಸಕ ಎಚ್.ಎಸ್.ಪ್ರಕಾಶ್ ಅವರು ಅಧ್ಯಕ್ಷತೆ ವಹಿಸುವರು.