ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಹಿಂದಿನ ವರ್ಷದ ಬೆಲೆ ನೀಡದಿದ್ದರೆ ಕಾರ್ಖಾನೆಗೆ ಕಬ್ಬು ಸರಬರಾಜಿಲ್ಲ

Rashmi Kasaragodu
Updated On : 18 Aug 2013, 12:55 pm

ಚನ್ನರಾಯಪಟ್ಟಣ: ತಾಲೂಕಿನ ಶ್ರೀನಿವಾಸಪುರ ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಕಳೆದ ವರ್ಷ ನೀಡಿದ ದರವನ್ನು ಪ್ರಸಕ್ತ ಸಾಲಿನಲ್ಲಿ ನೀಡಲು ಮುಂದಾಗದಿದ್ದರೆ ಯಾವ ರೈತರೂ ಕಾರ್ಖಾನೆಗೆ ಕಬ್ಬು ಸರಬರಾಜು ಮಾಡುವುದಿಲ್ಲ ಎಂದು ರಾಜ್ಯ ರೈತ ಸಂಘ ಹಸಿರು ಸೇನೆ ರಾಜ್ಯ ಕಾರ್ಯದರ್ಶಿ ಆನೆಕೆರೆ ರವಿ ತಿಳಿಸಿದರು.
 ರೈತರು ಪ್ರಸಕ್ತ ವರ್ಷದ ಬರಗಾಲದಲ್ಲಿಯೂ ಕಷ್ಟಪಟ್ಟು ಬೆಳೆದಿರುವ ಕಬ್ಬಿಗೆ ಪ್ರಸಕ್ತ ಸಾಲಿನಲ್ಲಿ ಕಾರ್ಖಾನೆಯ ಆಡಳಿತ ಮಂಡಳಿ 2100ರು.ಗಳನ್ನು ನಿಗದಿ ಮಾಡಿರುವುದು ಅವೈಜ್ಞಾನಿಕವಾಗಿದ್ದು, ಕಳೆದ ವರ್ಷ ನೀಡಿದ 2350 ರು.ಗಳನ್ನು ನೀಡದಿದ್ದರೆ ರೈತರು ಕಾರ್ಖಾನೆಗೆ ಕಬ್ಬು ಸರಬರಾಜು ಮಾಡದಂತೆ ತೀರ್ಮಾನಿಸಲಾಗಿದೆ ಎಂದು ಹೇಳಿದರು.
 ಸರ್ಕಾರ ಕಬ್ಬಿಗೆ ಬೆಲೆ ನಿಗದಿ ಮಾಡುವುದಕ್ಕಿಂತ ಮುಂಚಿತವಾಗಿ ಕಳೆದ ಬಾರಿ ನೀಡಿರುವ ಬೆಲೆಯನ್ನು ನೀಡಬೇಕು. ಸರ್ಕಾರ ಬೆಂಬಲ ಬೆಲೆಯನ್ನು ಹೆಚ್ಚಿಸಿದರೆ ಕಾರ್ಖಾನೆಯ ಆಡಳಿತ ಮಂಡಳಿ ರೈತರಿಗೆ ಹೆಚ್ಚುವರಿ ಹಣವನ್ನು ನೀಡಬೇಕಾಗಿದ್ದು, ಸರ್ಕಾರ ನಿಗದಿ ಮಾಡುವವರಗೆ 2350ರು.ಗಳನ್ನು ರೈತರಿಗೆ ಮುಂಗಡ ಹಣ ನೀಡುವಂತೆ ಆಡಳಿತ ಮಂಡಳಿ ಒಪ್ಪಿಗೆ ಸೂಚಿಸದಿದ್ದರೆ ತಾವು ಕಬ್ಬು ಸರಬರಾಜು ನಿಲ್ಲಿಸಲಾಗುವುದು ಎಂದರು.
 ಸಹಕಾರ ರಂಗದಲ್ಲಿದ್ದ ಕಾರ್ಖಾನೆಯನ್ನು ಗುತ್ತಿಗೆ ಪಡೆದಿರುವ ಚಾಮುಂಡೇಶ್ವರಿ ಕಂಪನಿಯವರು ಕಾರ್ಖಾನೆಯನ್ನು ವಿಸ್ತರಣೆ ಮಾಡುವ ಸಂಬಂದ ಯಾವುದೇ ಯೋಜನೆಗಳನ್ನು ಹಾಕಿಕೊಳ್ಳದೆ ಯಥಾಸ್ಥಿತಿಯಲ್ಲಿಯೇ ಕಬ್ಬು ಅರೆಯುತ್ತಿರುವುದರಿಂದ ರೈತರು ಹೆಚ್ಚು ಕಬ್ಬು ಸಾಗಣೆ ಮಾಡಲು ಸಾದ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ಗುತ್ತಿಗೆ ನೀಡಿ ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ನಿರ್ಲಕ್ಷ ತೋರಿದೆ ಎಂದು ತಿಳಿಸಿದರು.
 ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿರುವ ಕಾರಣದಿಂದ  ಹೆಚ್ಚು ರೈತರು ಕಬ್ಬು ನಾಟಿ ಮಾಡುತ್ತಿದ್ದು, ಮುಂದಿನ ಸಾಲಿಗೆ ಹೆಚ್ಚು ಕಬ್ಬು ಕಾರ್ಖಾನೆಗೆ ಸರಬರಾಜಾಗುವುದರಿಂದ ಕಾರ್ಖಾನೆಯ ಕಬ್ಬು ಅರೆಯುವ ಸಾಮರ್ಥ್ಯವನ್ನು ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement