'ಹಿಂದೂ ಮುಸ್ಲಿಂ ನಡುವೆ ಕಂದಕಕ್ಕೆ ಬ್ರಿಟಿಷರೇ ಕಾರಣ'
ಸಕಲೇಶಪುರ: ಹಿಂದೂ- ಮುಸ್ಲಿಮರ ಮಧ್ಯೆ ಕಂದಕ ಹೆಚ್ಚಲು ಬ್ರಿಟಿಷರೆ ಕಾರಣ ಎಂದು ಕೇಶಕೋಡಿ ಸೂರ್ಯ ನಾರಾಯಣ ಭಟ್ ಹೇಳಿದರು. ತಾಲೂಕು ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದಿಂದ ಆಯೋಜಿಸಲಾಗಿದ್ದ ಅಖಂಡ ಭಾರತ ಸಂಕಲ್ಪ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬ್ರಿಟಿಷರು ತಮ್ಮ ಅನುಕೂಲಕ್ಕಾಗಿ ಹಿಂದೂ, ಮುಸ್ಲಿಂ ಮತ್ತು ಕ್ರೈಸ್ತರ ನಡುವೆ ಕಂದಕ ತಂದು ದೇಶವನ್ನು ಕತ್ತರಿಸಿ ಹಾಕಿದರು ಎಂದು ಹೇಳಿದರು. 1947ರಲ್ಲಿ ನಮಗೆ ಸ್ವಾತಂತ್ರ್ಯ ಸಿಕ್ಕಿತು. ಆದರೆ ಮಹಮ್ಮದ್ ಆಲಿ ಜಿನ್ನಾರಂತಹ ಅವಕಾಶವಾದಿ ರಾಜಕೀಯ ಮುಖಂಡರಿಂದ ಅಖಂಡವಾಗಿದ್ದ ನಮ್ಮ ದೇಶ ವಿಭಜನೆಗೊಂಡಿತು. ಇಷ್ಟೂ ಸಾಲದೆಂಬಂತೆ ದೇಶವನ್ನು ಮತ್ತಷ್ಟು ವಿಭಜನೆ ಮಾಡಿ ಪೂರ್ವ ಪಾಕಿಸ್ತಾನವನ್ನು ಹುಟ್ಟುಹಾಕಲಾಯಿತು. ಭಾರತಕ್ಕೆ ಶತ್ರುವಾಗಿ ಇರುವುದು ಪಾಕಿಸ್ತಾನ ಮಾತ್ರವಲ್ಲ. ಚೀನಾ ಸಹ ವ್ಯಾಪಕ ತೊಂದರೆ ಕೊಡುತ್ತಿದೆ ಎಂದರು. ಕಾಶ್ಮೀರದಲ್ಲಿ ಪಾಕಿಸ್ತಾನ ಸೈನಿಕರಿಂದ ಸಾವಿರಾರು ಯೋಧರು ಹತರಾಗಿದ್ದರೂ ನಮ್ಮ ಸರ್ಕಾರ ಹೇಡಿಯಂತೆ ನಿದ್ರಿಸುತ್ತಿದೆ. ಆದ್ದರಿಂದ ಈ ದೇಶವನ್ನು ಬಲಪಡಿಸಲು ಹಿಂದುತ್ವದ ಪರ ಇರುವವರಿಗೆ ನಾವು ಮತ ನೀಡಿ ಗೆಲ್ಲಿಸಬೇಕು ಎಂದು ಹೇಳಿದರು. ಪುರಾಣ ಕಾಲದಿಂದಲೂ ಭಾರತದ ಬಳಿ ಪ್ರತಿ ತಂತ್ರಜ್ಞಾನಗಳಿವೆ. ಆದರೆ ಇದನ್ನು ಪರದೇಶಗಳು ಉಪಯೋಗಿಸಿಕೊಂಡು ದುರ್ಬಳಕೆ ಮಾಡಿಕೊಳ್ಳುತ್ತಿವೆ. ಯಾರಿಗೆ ಭಾರತದ ಸಂಸ್ಕೃತಿ ಹಾಗೂ ಧರ್ಮಗಳ ಬಗ್ಗೆ ಗೌರವವಿಲ್ಲವೋ ಅವರು ಈ ದೇಶ ದಲ್ಲಿರಲು ಯಾವುದೇ ಹಕ್ಕಿಲ್ಲ, ಭಾರತದಲ್ಲಿ ಯುವ ಜನಾಂಗದ ಸಂಖ್ಯೆ ಹೆಚ್ಚಾಗಿದ್ದು 2020ರ ಹೊತ್ತಿಗೆ ಭಾರತ ವಿಶ್ವದಲ್ಲಿ ನಂ 1 ರಾಷ್ಟ್ರವಾಗುವುದು ಖಚಿತವೆಂದು ಅವರು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಹೆಬ್ಬಸಾಲೆ ಕಾಫಿ ಬೆಳೆಗಾರ ಎಚ್.ಕೆ. ಚಂದ್ರಶೇಖರ್ ಮಾತನಾಡಿದರು. ಗಾಯತ್ರಿ ರತ್ನಾಕರ್ ಪ್ರಾರ್ಥಿಸಿದರು. ಕೃಷ್ಣವೇಣಿ ಶಿವಶಂಕರ್ ಮತ್ತು ರೂಪಾ ವಂದೇ ಮಾತರಂ ಹಾಡಿದರು. ಅಗ್ರಹಾರ ರಮೇಶ್ ಸ್ವಾಗತಿಸಿದರು. ಕುಶಾಲನಗರ ರಾಜಣ್ಣ ವಂದಿಸಿದರು. ವಿಎಚ್ಪಿ ಮುಖಂಡ ಸಂತೋಷ್, ದುಷ್ಯಂತ್, ಸುಧೀರ್, ಕಟ್ಟಾಯ ಶಿವಕುಮಾರ್, ಕಾರ್ತೀಕ್ ರಮೇಶ್ ಟೈಲ್ಸ್, ಸಂತೋಷ್, ಪ್ರದೀಪ್, ಪರಮೇಶ್, ಸಿದ್ದಪ್ಪ, ರಮೇಶ್ ಕೃಷ್ಣಪುರ ಇತರರು ಇದ್ದರು.