ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಉಸ್ತುವಾರಿ ಸಚಿವರು ಯಾಕ್ಹೀಗೆ...

Vishwanath S
Updated On : 19 Aug 2013, 12:06 pm

ಹಾಸನ: ಜಿಲ್ಲಾ ಉಸ್ತುವಾರಿ ಸಚಿವರು ಹಿಂದಿನವರಂತೆ ಆಗದೇ ಕಾಲ ಕಾಲಕ್ಕೆ ಕ್ಷೇತ್ರಕ್ಕೆ ಬಂದು ಅಭಿವೃದ್ಧಿ ಕೆಲಸಗಳ ಪರಾಮರ್ಶೆ ನಡೆಸಿ, ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಾರೆ ಎಂಬ ಜಿಲ್ಲೆಯ ಜನತೆಯ ನಿರೀಕ್ಷೆ ಇದೀಗ ಹುಸಿಯಾಗಿದೆ. ಹಿಂದಿನ ಬಿಜೆಪಿ ಸರ್ಕಾರದ ಉಸ್ತುವಾರಿ ಸಚಿವರ ಹಾದಿಯನ್ನೇ ಇಂದಿನ ಕಾಂಗ್ರೆಸ್ ಸರ್ಕಾರದ ಜಿಲ್ಲಾ ಉಸ್ತುವಾರಿ ಸಚಿವರೂ ಹಿಡಿದಿದ್ದಾರೆ.
ಇದರಿಂದ ಜಿಲ್ಲೆಯಲ್ಲಿನ ಅಭಿವೃದ್ಧಿ ಕೆಲಸಗಳು ಮತ್ತು ಪರಿಹರಿಸಬೇಕಾಗಿದ್ದ ಬೆಟ್ಟದಷ್ಟು ಸಮಸ್ಯೆಗಳು ನೆನೆಗುದಿಗೆ ಬಿದ್ದಿರುವುದಲ್ಲದೇ, ಅಧಿಕಾರಿಗಳ ತಾವು ಮಾಡಿದ್ದೇ ಕೆಲಸ. ನಡೆದಿದ್ದೇ ದಾರಿ ಎಂಬ ಸನ್ನಿವೇಶ ನಿರ್ಮಾಣವಾಗಿದೆ.
ಸಾಮಾನ್ಯವಾಗಿ ಯಾವುದೇ ಅಭಿವೃದ್ಧಿ ಕೆಲಸಗಳ ಕಾರ್ಯಗತಕ್ಕೆ ಮತ್ತು ಅದಕ್ಕೆ ಬೇಕಾಗುವ ಅನುದಾನ ಮುಂತಾದವುಗಳು ಉಸ್ತುವಾರಿ ಸಚಿವರ ಸೂಚನೆಯಂತೆ ನಡೆಯಬೇಕಾಗುತ್ತದೆ. ಆದರೆ ಉಸ್ತುವಾರಿ ಸಚಿವ ಡಾ. ಎಚ್.ಸಿ. ಮಹಾದೇವಪ್ಪನವರು ಜುಲೈ 10 ರಂದು ಅನ್ನಭಾಗ್ಯ ಕಾರ್ಯಕ್ರಮ ಉದ್ಘಾಟಿಸಿ ಹೋದವರು ಮತ್ತೆ ಈ ಕಡೆ ತಿರುಗಿಯೂ ನೋಡಿಲ್ಲ.
ತಿಂಗಳಿಗೊಮ್ಮೆ ತಾವು ಬಂದು ಅಧಿಕಾರಿಗಳು, ಜನಪ್ರತಿನಿಧಿಗಳ ಜತೆಗೆ ಪ್ರಗತಿ ಪರಿಶೀಲನೆ ನಡೆಸಿ ಆಗಬೇಕಾದ ಅಭಿವೃದ್ಧಿ ಕೆಲಸಗಳಿಗೆ ಒತ್ತು ನೀಡಲಾಗುವುದು. ಇದು ಗ್ಯಾರಂಟಿ ಎಂದು ಹೇಳಿದ್ದ ಉಸ್ತುವಾರಿ ಸಚಿವರು ನಾಪತ್ತೆಯಾಗುವ ಮೂಲಕ, ಕೊಟ್ಟ ಮಾತಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ ಎಂಬ ಟೀಕೆ ಸಾರ್ವಜನಿಕ ವಲಯದಲ್ಲಿ ಹೆಚ್ಚಾಗಿಯೇ ಕೇಳಿ ಬರುತ್ತಿದೆ. ಹಿಂದಿನ ಬಿಜೆಪಿ ಸರ್ಕಾರದ 5 ವರ್ಷಗಳ ಅವಧಿಯಲ್ಲಿ ಐವರು  ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕಗೊಂಡಿದ್ದರು.
ಇವರೆಲ್ಲ ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವ ಸಮಾರಂಭಕ್ಕೆ ಆಗಮಿಸದರೇ ಹೊರತು ಅಭಿವೃದ್ಧಿ ಕೆಲಸಗಳತ್ತ ನಿರೀಕ್ಷಿತ ಮಟ್ಟದಲ್ಲಿ ಗಮನಹರಿಸಲೇ ಇಲ್ಲ. ಹಾಗಾಗಿ ಜಿಲ್ಲೆಯ ಸಮಸ್ಯೆಗಳು ಜೀವಂತವಾಗಿ ಉಳಿದು ಕೊಂಡವು. ಆದರೆ ದುರದೃಷ್ಟವಶಾತ್ ಕಾಂಗ್ರೆಸ್ ಸರ್ಕಾರದ ಮೊದಲ ಉಸ್ತುವಾರಿ ಸಚಿವರೇ ಕ್ಷೇತ್ರಕ್ಕೆ ಬರುತ್ತಿಲ್ಲ. ಕೆಲವು ಪ್ರಮುಖ ಫೈಲ್‌ಗಳಿಗೆ ಸಹಿ ಹಾಕಿಸಲು ಜಿಲ್ಲಾ ಮಟ್ಟದ ಅಧಿಕಾರಿಗಳು ಬೆಂಗಳೂರಿಗೆ ಹೋದರೂ ಉಸ್ತುವಾರಿ ಸಚಿವರು ಅಧಿಕಾರಿಗಳ ಕೈಗೆ ಸಿಗುತ್ತಿಲ್ಲ.
ಅನೇಕ ವರ್ಷಗಳ ನಂತರ ಸಕಲೇಶಪುರ ತಾಲೂಕಿನಲ್ಲಿ ಸತತ 56 ದಿನ ಮಳೆ ಸುರಿದು ಅಪಾರ ಪ್ರಮಾಣದ ಅಸ್ತಿಪಾಸ್ತಿ, ಬೆಳೆ ನಷ್ಟವಾಗಿದೆ. ಜಿಲ್ಲೆಯ ಅರಕಲಗೂಡು, ಬೇಲೂರು, ಆಲೂರು ಮತ್ತು ಹಾಸನ, ಹೊಳೆನರಸೀಪುರ ತಾಲೂಕುಗಳಲ್ಲಿ ಮಳೆಯಿಂದ ಬೆಳೆ ನಷ್ಟವಾಗಿದ್ದರೆ, ಅದೇ ಅರಸೀಕೆರೆ ಮತ್ತು ಚನ್ನರಾಯಪಟ್ಟಣ ತಾಲೂಕುಗಳಲ್ಲಿ ಮಳೆಯಿಲ್ಲದ ಕಾರಣ ಅಲ್ಲಿನ ತೆಂಗಿನ ಮರಗಳು ಒಣಗಿ ಹೋಗಿದ್ದು, ಅಂದಾಜಿಗೆ ಸಿಗದಷ್ಟು ನಷ್ಟ ಉಂಟಾಗಿದೆ.
ಅತಿವೃಷ್ಟಿ ಮತ್ತು ಅನಾವೃಷ್ಟಿ ಪ್ರದೇಶಗಳಿಗೆ ತ್ವರಿತವಾಗಿ ಉಸ್ತುವಾರಿ ಸಚಿವರು ಭೇಟಿ ನೀಡಿ, ಅಸ್ತಿಪಾಸ್ತಿ ಕಳೆದು ಕೊಂಡವರಿಗೆ ಪರಿಹಾರ ನೀಡುವುದು ಇರಲಿ. ಕನಿಷ್ಠ ಪಕ್ಷ ಧೈರ್ಯದ ಮಾತು, ಸಾಂತ್ವನ ಹೇಳುವ ಮಾನವೀಯತೆ ತೋರಲಿಲ್ಲ. ಅಲ್ಲದೇ 1983 ರ ನಂತರ ಜುಲೈನಲ್ಲಿ ಹಾಸನ ತಾಲೂಕಿನ ಗೊರೂರಿನ ಹೇಮಾವತಿ ಜಲಾಶಯ ಭರ್ತಿಯಾಗಿದೆ. ಅಲ್ಲಿಗೆ ಬಾಗಿನ ಅರ್ಪಿಸಲು ಸಹ ಉಸ್ತುವಾರಿ ಸಚಿವರು ಇನ್ನೂ ಆಗಮಿಸಿಲ್ಲ.
ಚುನಾವಣೆಯೇ ಮುಖ್ಯವಾಯಿತಲ್ಲಾ:  ಇದೇ ಆ. 21 ರಂದು ನಡೆಯುವ ಮಂಡ್ಯ ಲೋಕಸಭೆ ಉಪ ಚುನಾವಣೆಯ ಉಸ್ತುವಾರಿಯನ್ನು ಸಚಿವ ಮಹಾದೇವಪ್ಪನವರಿಗೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಸಚಿವರು ಸ್ವಾತಂತ್ರೋತ್ಸವಕ್ಕೂ ಬರಲಿಲ್ಲ. ಆ. 20 ರಂದು ನಡೆಯಲಿರುವ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನೆ ಮತ್ತು ಮಾಜಿ ಮುಖ್ಯಮಂತ್ರಿ ದಿ. ಡಿ. ದೇವರಾಜ ಅರಸ್ ಜನ್ಮ ದಿನಾಚರಣೆ ಕಾರ್ಯಕ್ರಮಕ್ಕೂ ಬರುತ್ತಿಲ್ಲ. ಜಿಲ್ಲೆಯ ಅಭಿವೃದ್ಧಿಗಿಂತ ಸಚಿವರಿಗೆ ಚುನಾವಣೆಯೇ ಮುಖ್ಯವಾಗಿದ್ದು ಖಂಡನಾರ್ಹ ಎಂದು ಜಿಲ್ಲಾ ನಾಗರಿಕ ವೇದಿಕೆ ಸಂಚಾಲಕ ರಮೇಶ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
 ಸುಖಾಸುಮ್ಮನೆ ವಿರೋಧ ಪಕ್ಷಗಳ ಮುಖಂಡರ ವಿರುದ್ಧ ಕೇವಲ ಪ್ರಚಾರಕ್ಕಾಗಿಯೇ ಸುದ್ದಿಗೋಷ್ಠಿಗಳನ್ನು ನಡೆಸಿ ಆರೋಪ ಮಾಡುವ ಜಿಲ್ಲೆಯ ಕಾಂಗ್ರೆಸ್ ಮುಖಂಡರು, ಉಸ್ತುವಾರಿ ಸಚಿವರಿಗೆ ಜಿಲ್ಲೆಯ ಜ್ವಲಂತ ಸಮಸ್ಯೆಗಳನ್ನು ಮನವರಿಕೆ ಮಾಡಿಕೊಟ್ಟು, ಡಾ. ಮಹಾದೇವಪ್ಪರನ್ನು ಜಿಲ್ಲೆಗೆ ಕರೆಸಿ ಅಭಿವೃದ್ಧಿ ಕೆಲಸ ಮಾಡಿಸುವುದರತ್ತ ಗಮನಹರಿಸುತ್ತಿಲ್ಲದಿರುವುದೂ ವಿಷಾದನೀಯ.
ಬೆಟ್ಟದಷ್ಟು ಸಮಸ್ಯೆಗಳು:  ಜಿಲ್ಲೆ ಮತ್ತು ನಗರ ಪ್ರದೇಶದಲ್ಲಿ ಒಂದೇ ಒಂದು ರಸ್ತೆ ಸಂಚರಿಸಲು ಯೋಗ್ಯವಾಗಿಲ್ಲ  ಸರ್ಕಾರಿ ಆಸ್ತ್ರತ್ರೆಗಳಲ್ಲಿ ವೈದ್ಯರು ಮತ್ತು ವೈದ್ಯೇತರ ಸಿಬ್ಬಂದಿ ಕೊರತೆ ಸಾಕಷ್ಟು ಇದೆ.
 ಜೂನ್, ಜುಲೈನಲ್ಲಿ ಉಂಟಾದ ಭಾರಿ ಮಳೆಯಿಂದ 24.84 ಕೋಟಿ ರು. ನಷ್ಟವಾಗಿದೆ. ಜಿಲ್ಲಾಧಿಕಾರಿ ಈ ಬಗ್ಗೆ ಸರ್ಕಾರಕ್ಕೆ ವರದಿ ನೀಡಿದ್ದು, ನಯಾಪೈಸೆ ಬಿಡುಗಡೆ ಆಗಿಲ್ಲ. ಯಾವುದೇ ಪರಿಹಾರ ಕಾರ್ಯ ಆರಂಭವಾಗಿಲ್ಲ. ನಾಶವಾಗಿರುವ ತೆಂಗಿಗೆ ಕೇಂದ್ರ, ರಾಜ್ಯದಲ್ಲಿರುವ ಕಾಂಗ್ರೆಸ್ ನೇತೃತ್ವದ ಸರ್ಕಾರಗಳಿಂದ ಪರಿಹಾರ ಕೊಡಿಸಬೇಕಾಗಿದೆ.
ಕುಡಿಯುವ ನೀರಿನ ಸಮಸ್ಯೆ ಬಹಳಷ್ಟು ಇದೆ, ಆದರೂ ಗಮನಹರಿಸುತ್ತಿಲ್ಲ. ಸಕಲೇಶಪುರ, ಆಲೂರು ತಾಲೂಕುಗಳಲ್ಲಿ ಕಾಡಾನೆಗಳ ಸಮಸ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಹೊಳೆನರಸೀಪುರ, ಚನ್ನರಾಯಪಟ್ಟಣ ಮತ್ತು ಅರಸೀಕೆರೆ ತಾಲೂಕುಗಳಲ್ಲಿ ಚಿರತೆ ಮತ್ತು ಕರಡಿಗಳ ಉಪಟಳ ಹೆಚ್ಚಾಗಿದೆ. ಹೀಗೆ ಜಿಲ್ಲೆಯಲ್ಲಿ ಬೆಟ್ಟದಷ್ಟು ಸಮಸ್ಯೆಗಳು ಇವೆ.
ಇನ್ನೂ ಮುಂದಾದರೂ ಉಸ್ತುವಾರಿ ಸಚಿವರು ಹಿಂದಿನವರಂತಾಗದೆ ಆಗಾಗ್ಗೆ ಕ್ಷೇತ್ರಕ್ಕೆ ಬಂದು ಅಭಿವೃದ್ಧಿ ಕಾರ್ಯಗಳನ್ನು ಚುರುಕುಗೊಳಿಸಬೇಕು. ಅಲ್ಲದೇ ಸ್ಥಳೀಯ ಕಾಂಗ್ರೆಸ್ ಮುಖಂಡರು, ಉಸ್ತುವಾರಿ ಸಚಿವರಿಗೆ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿಕೊಟ್ಟು ಅಭಿವೃದ್ಧಿಯತ್ತ ಮನಸ್ಸು ಮಾಡ ಮಾಡಬೇಕು. ಹಾಗೆ ಮಾಡದಿದ್ದರೆ ಜನತೆಗೆ ಕಾಂಗ್ರೆಸ್ ಸರ್ಕಾರ ಹಾಡಹಗಲೇ ವಂಚನೆ ಮಾಡಿದಂತೆ ಆಗುತ್ತದೆ.
ಕೊಡಗಿಗೂ ಇವರೇ ಉಸ್ತುವಾರಿ ಸಚಿವ  
ಡಾ. ಮಹಾದೇವಪ್ಪ ಹೊತ್ತಿರುವ ಲೋಕೋಪಯೋಗಿ ಇಲಾಖೆ ಸಾಮಾನ್ಯದ್ದೇನು ಅಲ್ಲ. ಆ ಇಲಾಖೆಯನ್ನು ನಿಭಾಯಿಸುವುದೇ ಕಷ್ಟ. ಅಂಥದ್ದರಲ್ಲಿ ಅವರಿಗೆ ಕೊಡಗು ಮತ್ತು ಹಾಸನ ಜಿಲ್ಲೆಗಳ ಉಸ್ತುವಾರಿ ಸಚಿವರಾಗಿ ನೇಮಿಸುವುದು ಅಭಿವೃದ್ಧಿ ದೃಷ್ಟಿಯಿಂದ ಸೂಕ್ತ ಕ್ರಮವಲ್ಲ. 2008 ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯಿಂದ ಒಬ್ಬರೇ ಒಬ್ಬರು ಬಿಜೆಪಿ ಶಾಸಕರು ಆಯ್ಕೆಯಾಗಿರಲಿಲ್ಲ. ಆದ್ದರಿಂದ ಬೇರೆ ಜಿಲ್ಲೆಯವರನ್ನು ಉಸ್ತುವಾರಿ ಸಚಿವರನ್ನು ನೇಮಕ ಮಾಡಬೇಕಾದ ಅನಿವಾರ್ಯತೆ ಅಂದಿನ ಬಿಜೆಪಿ ಸರ್ಕಾರಕ್ಕೆ ಇತ್ತು. ಆದರೆ 2013 ರಲ್ಲಿ ನಡೆದ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಇಬ್ಬರು ಕಾಂಗ್ರೆಸ್ ಶಾಸಕರು ಆಯ್ಕೆಯಾಗಿದ್ದಾರೆ. ಅದರೂ ಬೇರೆ ಜಿಲ್ಲೆಯವರನ್ನು ಉಸ್ತುವಾರಿ ಸಚಿವರನ್ನಾಗಿ ಮಾಡಿದ್ದರ ಹಿಂದಿನ ಗುಟ್ಟು, ಮರ್ಮ ಏನು ಎಂಬುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾತ್ರ ಗೊತ್ತು ಎಂದು ಜನತೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

-ದಯಾಶಂಕರ ಮೈಲಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement