ಜಿಲ್ಲೆಯಲ್ಲಿ ಅಕ್ರಮ ಮದ್ಯ ಮಾರಾಟ: ಇಬ್ಬರ ಬಂಧನ
ಸಕಲೇಶಪುರ: ಜಿಲ್ಲೆಯ ನಾನಾ ಕಡೆಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಇಬ್ಬರನ್ನು ತಾಲೂಕಿನಲ್ಲಿ ಶನಿವಾರ ಪೊಲೀಸರು ಬಂಧಿಸಿದ್ದಾರೆ.
ತಾಲೂಕಿನ ಯಸಳೂರು ಹೋಬಳಿ, ಮಲಗಹಳ್ಳಿ ಗ್ರಾಮದಲ್ಲಿ ದಾಳಿ ನಡೆಸಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಗಣೇಶ (52) ಎಂಬುವನನ್ನು ಬಂಧಿಸಿ, ಮಾರಾಟಕ್ಕಿಟ್ಟಿದ್ದ 793 ರು. ಬೆಲೆಯ ಮದ್ಯದ ಬಾಟಲಿಗಳನ್ನು ವಶಪಡಿಸಿಕೊಂಡು ಯಸಳೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಹಾಸನ ತಾ. ತಟ್ಟೆಕೆರೆ ಗ್ರಾಮದ ಶ್ರೀನಿವಾಸ (34) ಎಂಬುವರು ತಮ್ಮ ಮನೆಯ ಹಿಂಭಾಗದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾಗ ಪೊಲೀಸರು ದಾಳಿ ನಡೆಸಿ ಶ್ರೀನಿವಾಸನನ್ನು ಬಂಧಿಸಿದ್ದು, ಮಾರಾಟಕ್ಕಿಟ್ಟಿದ್ದ 2840 ರು.ಬೆಲೆಯ ಮದ್ಯದ ಬಾಟಲಿಗಳನ್ನು ವಶಪಡಿಸಿಕೊಂಡಿದ್ದಾರೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗೃಹಿಣಿ ನಾಪತ್ತೆ
ಬೇಲೂರು: ತಾ. ಬಿಕ್ಕೋಡು ಹೋಬಳಿ, ಹಿರಿವಟೆ ಗ್ರಾಮದ ಜಯರಾಜು ಎಂಬುವರ ಪತ್ನಿ ಹಂಪನ(25) ಮನೆಯಿಂದ ಹೋದವರು ವಾಪಸ್ ಮನೆಗೆ ಬಾರದೆ ಕಾಣೆಯಾಗಿದ್ದಾರೆ. ಚಹರೆ 5 ಅಡಿ ಎತ್ತರ, ಕೋಲುಮುಖ, ಕನ್ನಡ ಮಾತನಾಡುತ್ತಾಳೆ. ನೇರಳೆ ಬಣ್ಣದ ಚೂಡಿದಾರ ಧರಿಸಿರುತ್ತಾಳೆ. ಪತಿ ಜಯರಾಜು ಅರೇಹಳ್ಳಿ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ವರದಕ್ಷಿಣೆ ಕಿರುಕುಳ: ಶಿಕ್ಷೆ
ಹೊಳೆನರಸೀಪುರ: ತವರಿನಿಂದ ಹೆಚ್ಚಿನ ವರದಕ್ಷಿಣೆ ತರುವಂತೆ ಹೆಂಡತಿಗೆ ಕಿರುಕುಳ ನೀಡಿ ಬೆಂಗಳೂರಿನ ಮನೆಯಲ್ಲಿ ಬಿಟ್ಟು ಬಂದಿದ್ದ ಪತಿ ಮಹಾಶಯನಿಗೆ ನ್ಯಾಯಾಲಯ 1 ವರ್ಷ ಸಜೆ ಮತ್ತು 2 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ. ದಂಡ ಪಾವತಿಸದಿದ್ದಲ್ಲಿ ಹೆಚ್ಚುವರಿಯಾಗಿ 6 ತಿಂಗಳು ಸೆರೆವಾಸ ಅನುಭವಿಸುವಂತೆ ಇಲ್ಲಿನ ನ್ಯಾಯಾಲಯ ಆದೇಶಿಸಿದೆ. ತಾಲೂಕಿನ ಹಳ್ಳಿಮೈಸೂರು ಹೋಬಳಿಯ ಹೊಸ ಲಕ್ಕೇಗೌಡನಕೊಪ್ಪಲು ಗ್ರಾಮದ ಅಣ್ಣೇಗೌಡ ಎಂಬುವವರ ಪುತ್ರ ದೇವರಾಜ ತನ್ನ ಹೆಂಡತಿ ಜ್ಯೋತಿಗೆ ವರದಕ್ಷಿಣೆ ಕಿರುಕುಳ ನೀಡಿ ದೌರ್ಜನ್ಯ ನಡೆಸಿದ್ದ ಬಗ್ಗೆ ಜ್ಯೋತಿ ಇಲ್ಲಿನ ಗ್ರಾಮಾಂತರ ಠಾಣೆಯಲ್ಲಿ ಗಂಡ ದೇವರಾಜನ ವಿರುದ್ಧ ಪ್ರಕರಣ ದಾಖಲಿಸಿದ್ದಳು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದ ಸರ್ಕಲ್ ಇನ್ಸಸ್ಪೆಕ್ಟರ್ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಹಿರಿಯ ಶ್ರೇಣಿ ನ್ಯಾಯಾಧೀಶ ಕಂಬೇಗೌಡ ದೇವರಾಜನಿಗೆ ಈ ಶಿಕ್ಷೆ ವಿಧಿಸಿದ್ದಾರೆ.
ಎಂಜಿನಿಯರ್ ಮೇಲೆ ಹಲ್ಲೆ: ದಂಡ
ಇಲ್ಲಿನ ಕಾವೇರಿ ನೀರಾವರಿ ನಿಗಮದ ಎಂಜಿನಿಯರ್ ಞಜಜೇಗೌಡ ಎಂಬುವವರ ಮೇಲೆ ಕಾಮಗಾರಿ ನೀಡಲಿಲ್ಲ ಎಂದು ಹಲ್ಲೆ ನಡೆಸಿದ್ದ ಗುತ್ತಿಗೆದಾರ ಜಿ.ವಿ.ಓಹಿಲೇಶ್ವರ್ ಎಂಬಾತನಿಗೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಕಿರಿಯ ಶ್ರೇಣಿ ನ್ಯಾಯಾಧೀಶ ಸನತ್ಕುಮಾರ್ 2 ಸಾವಿರ ರು ದಂಡ, ಅಥವಾ 1 ವರ್ಷ ಜೈಲುವಾಸ ವಿಧಿಸಿ ತೀರ್ಪಿತ್ತಿದ್ದಾರೆ. ಪ್ರಕರಣವನ್ನು ಗ್ರಾಮಾಂತರ ಠಾಣೆ ಎಸ್ಐ ರವೀಂದ್ರ ಪ್ರಕರಣ ದಾಖಲಿಸಿದ್ದರು.
ಟಿಎಪಿಸಿಎಂಎಸ್ ಮುಂದೆ ಗೊಬ್ಬರಕ್ಕೆ ಮುಗಿಬಿದ್ದ ರೈತರು
ಅರಸೀಕೆರೆ: ರೈತರಿಗೆ ಅಗತ್ಯವಿರುವ ರಸಗೊಬ್ಬರ ತರಿಸಲಾಗುತ್ತಿದ್ದು ಯಾವುದೇ ಕಾರಣಕ್ಕೂ ಗೊಂದಲಕ್ಕೆ ಒಳಗಾಗದೆ ಗೊಬ್ಬರ ಪಡೆಯಬೇಕೆಂದು ಟಿಎಪಿಸಿಎಂಎಸ್ ಕಾರ್ಯದರ್ಶಿ ಎಸ್.ಎನ್.ತಿಮ್ಮೇಗೌಡ ರೈತರಲ್ಲಿ ಮನವಿ ಮಾಡಿದರು. ಪಟ್ಟಣದ ಟಿಎಪಿಸಿಎಂಎಸ್ ಗೋದಾಮು ಮುಂದೆ ರಸಗೊಬ್ಬರಕ್ಕಾಗಿ ಕಾದು ನಿಂತಿದ್ದ ರೈತರೊಂದಿಗೆ ಮಾತನಾಡಿ ತಾಲೂಕಿಗೆ ಈಗಾಗಲೇ 120 ಟನ್ ಯೂರಿಯಾ ಸೇರಿದಂತೆ ಇತರೆ ರಸಗೊಬ್ಬರ ದೊರೆತಿದೆ. ಇಂತಹ ಸ್ಥಿತಿಯಲ್ಲಿ ರೈತರು ಯಾವುದೇ ಗೊಂದಲಕ್ಕೆ ಒಳಗಾಗಬಾರದು ಎಂದರು.
ಪೇದೆ ಮೇಲೆ ಹಲ್ಲೆ: ಶಿಕ್ಷೆ
ಹೊಳೆನರಸೀಪುರ: ನಿವೇಶನ ವಿಚಾರಕ್ಕೆ ಸಂಬಂಧಪಟ್ಟಂತೆ ಪೇದೆ ದಿಲೀಪ್ ಎಂಬುವವರ ಮೇಲೆ ಹಲ್ಲೆ ನಡೆಸಿದ್ದ ಹೊಳೆನರಸೀಪುರದ ನಂಜುಂಡಿ ಎಂಬಾತನ ವಿರುದ್ಧ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಕಿರಿಯ ಶ್ರೇಣಿ ನ್ಯಾಯಾಧೀಶ ಸನತ್ಕುಮಾರ್ 45 ದಿನಗಳ ಶಿಕ್ಷೆ ಹಾಗೂ 1300 ರು. ದಂಡ ವಿಧಿಸಿ ತೀರ್ಪಿತ್ತಿದ್ದಾರೆ. ಪ್ರಕರಣ ನಗರ ಠಾಣೆಯಲ್ಲಿ ದಾಖಲಾಗಿತ್ತು. ಈ ಮೇಲಿನ ಮೂರೂ ಪ್ರಕರಣಗಳಲ್ಲಿ ಸಹಾಯಕ ಸರ್ಕಾರಿ ಅಭಿಯೋಜಕ ಮಲ್ಲಿಕಾರ್ಜುನ್ ದೊಡ್ಡಗೌಡರ್ ವಾದ ಮಂಡಿಸಿದ್ದರು.
ವಿದ್ಯಾರ್ಥಿನಿ ನಾಪತ್ತೆ
ಹಳೇಬೀಡು: 9ನೇ ತರಗತಿ ವಿದ್ಯಾರ್ಥಿನಿ ಶೀಲ ಕಾಣೆಯಾಗಿದ್ದಾಳೆ. ಶಾಲೆಗೆ ಹೋದವಳು ಮನೆಗೆ ವಾಪಸಾಗಿಲ್ಲ. ಎತ್ತರ 4.9 ಅಡಿ, ಗೋಧಿ ಮೈಬಣ್ಣ, ದುಂಡು ಮುಖ ಹೊಂದಿದ್ದು, ಕನ್ನಡ ಮಾತನಾಡುತ್ತಾಳೆ. ಮನೆಯಿಂದ ಹೋಗುವಾಗ ಕಪ್ಪು ಚೂಡಿದಾರ್ ಧರಿಸಿದ್ದಳು ಎಂದು ಹಳೇಬೀಡು ಠಾಣೆಗೆ ದೂರು ನೀಡಲಾಗಿದೆ.