ಬೇಲೂರು: ನಾನಾ ಇಲಾಖೆಗಳಿಗೆ ಲೋಕಾಯುಕ್ತ ಡಿವೈಎಸ್ಪಿ ಭೇಟಿ
ಕ.ಪ್ರ.ವಾರ್ತೆ , ಬೇಲೂರು , ಆ.18
ಲೋಕಾಯುಕ್ತ ಡಿವೈಎಸ್‌ಪಿ ಶಿವಬಸಪ್ಪ ಶನಿವಾರ ನಾನಾ ಇಲಾಖೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮೊದಲು ಸರ್ಕಾರಿ ಅಸ್ಪತ್ರೆಗೆ ಭೇಟಿ ನೀಡಿದಾಗ ಶೌಚಾಲಯವನ್ನು ಸಿಬ್ಬಂದಿ ಸ್ವಚ್ಛ ಮಾಡದಿರುವುದು ಗಮನಕ್ಕೆ ಬಂತು. ಸ್ಥಳದಲ್ಲಿದ್ದ ಸ್ವಚ್ಛತಾ ಮೇಲ್ವಿಚಾರಕರನ್ನು ತರಾಟೆ ತೆಗೆದುಕೊಂಡು ಮುಂದಿನ ಭೇಟಿ ವೇಳೆ ಇಂಥ ಅವ್ಯವಸ್ಥೆ ಕಂಡು ಬಂದಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಸಿದರು. ನಂತರ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಗೆ ಭೇಟಿ ನೀಡಿದಾಗ ಶಾಲೆ ತುಂಬಾ ಕಿರಿದಾಗಿದ್ದು ತಕ್ಷಣ ಬದಲಿ ವ್ಯವಸ್ಥೆ ಮಾಡುವಂತೆ ಪ್ರಾಂಶುಪಾಲರು ಮತ್ತು ವಸತಿ ಶಾಲೆಯ ಮೇಲ್ವಿಚಾರಕರಿಗೆ ಸೂಚಿಸಿದರು. ದಾಸ್ತಾನು ಕೊಠಡಿಯನ್ನು ಪರಿಶೀಲನೆ ನಡೆಸಿದಾಗ ಬಳಕೆಯಾದ ಚೀಲಗಳನ್ನು ಶೇಖರಿಸಿದ್ದುದು ಕಂಡು ತರಾಟೆ ತೆಗೆದುಕೊಂಡರು. ವಸತಿ ನಿಲಯದ ವಿದ್ಯಾರ್ಥಿನಿಯರ ಹಿತದೃಷ್ಟಿಯಿಂದ ಸ್ವಚ್ಛತೆ ಕಾಪಾಡಬೇಕು. ವಿದ್ಯಾರ್ಥಿಗಳು ಮಲಗುವ ಸ್ಥಳವನ್ನು ವಸತಿ ಶಾಲೆಯ ಮುಂಭಾಗದ ಕೊಠಡಿಗೆ ಬದಲಾಯಿಸಬೇಕು. ಈ ಬಗ್ಗೆ ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಆದೇಶಿಸಿದರು. ವಸತಿ ಶಾಲೆಗಳಲ್ಲಿ ಭೇಟಿ ನೀಡಿದಾಗ ಅಕ್ಕಿ ಗುಣಮಟ್ಟ ಸರಿ ಇರಲಿಲ್ಲ. ಅರಕಲಗೂಡು ತಾಲೂಕಿನ ವಸತಿ ಶಾಲೆಗಳಲ್ಲಿ ಉತ್ತಮ ಅಕ್ಕಿಯನ್ನು ಸರಭರಾಜು ಅಗುತ್ತಿದ್ದು ಬೇಲೂರು ತಾಲೂಕಿಗೆ ಏಕೆ ಇಂಥ ಅಕ್ಕಿ ಸರಬರಾಜು ಅಗುತ್ತಿದೆ ಎಂಬುದು ತಿಳಿಯುತ್ತಿಲ್ಲ ಎಂದರು. ತಾಲೂಕಿನ ಅಸ್ಪತ್ರೆಗಳಲ್ಲಿ ಸಾಕಷ್ಟು ವೈದ್ಯರ ಕೊರತೆ ಇರುವುದು ಕಾಣುತ್ತಿದೆ. ಈ ಸಮಸ್ಯೆ ಬಗೆಹರಿಯದಿದ್ದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.