ಮಕ್ಕಳ ಸಂರಕ್ಷಣೆ ಕಾಯ್ದೆ ಕಟ್ಟುನಿಟ್ಟು ಜಾರಿಯಾಗಲಿ
ಕ.ಪ್ರ.ವಾರ್ತೆ , ಹಾಸನ , ಆ. 18
ಲೈಂಗಿಕ ದೌರ್ಜನ್ಯ ಪ್ರಕರಣಗಳ ವಿರುದ್ಧ ಮಕ್ಕಳ ಸಂರಕ್ಷಣೆ ಕಾಯ್ದೆಯನ್ನು ಸಂಬಂಧಪಟ್ಟ ಎಲ್ಲಾ ಇಲಾಖೆಯ ಅಧಿಕಾರಿಗಳು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಿದಾಗ ಮಾತ್ರ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಗಟ್ಟಲು ಸಾಧ್ಯ ಎಂದು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಜೆ.ಎಸ್.ಸೋಮಶೇಖರ್ ಅಭಿಪ್ರಾಯ ಪಟ್ಟರು.
ಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್ ಇಲಾಖೆ, ಜಿಲ್ಲಾ ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಭಾನುವಾರ ಜಿಲ್ಲಾ ಪಂಚಾಯ್ತಿಯ ಹೊಯ್ಸಳ ಸಭಾಂಗಣದಲ್ಲಿ ನಡೆದ ಲೈಂಗಿಕ ದೌರ್ಜನ್ಯದ ವಿರುದ್ಧ ಮಕ್ಕಳ ಸಂರಕ್ಷಣೆ ಕಾಯ್ದೆ ಹಾಗೂ ಕುಟುಂಬ ವ್ಯಾಜ್ಯಗಳ ಬಗ್ಗೆ ಪ್ರೀ ಲಿಟಿಗೇಷನ್ ಮಧ್ಯಸ್ಥಿಕೆ ಎಂಬ ವಿಷಯ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ನ್ಯಾ. ಸೋಮಶೇಖರ್ ಮಾತನಾಡಿದರು.
ಸಮಾಜದ ಪ್ರತಿಯೊಬ್ಬರ ಕರ್ತವ್ಯ: ಲೈಂಗಿಕ ದೌರ್ಜನ್ಯದಿಂದ ಮಕ್ಕಳು, ಮಹಿಳೆಯರನ್ನು ಸಂರಕ್ಷಿಸುವ ಜವಾಬ್ದಾರಿ ಸಮಾಜದ ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ ಎಂದ ಅವರು, ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಯುವಲ್ಲಿ ಈ ಕಾಯ್ದೆ ಮಹತ್ವದ ಪಾತ್ರ ವಹಿಸುತ್ತದೆ. ಹದಿಹರೆಯದಲ್ಲಿ ನಾನಾ ಸಮಸ್ಯೆಗಳು ತಲೆದೋರಲಿದ್ದು, ಸರ್ವೋಚ್ಛ ನ್ಯಾಯಾಲಯ ಮಕ್ಕಳ ಬಗ್ಗೆ ಕಾಳಜಿವಹಿಸಿ ನಾನಾ ಕಾನೂನು ಜಾರಿಗೆ ತಂದಿದೆ. ಆದರೆ ಕಟ್ಟು ನಿಟ್ಟಾಗಿ ಅವುಗಳ ಪಾಲನೆ ಆಗುತ್ತಿಲ್ಲ. ಲೈಂಗಿಕ ದೌರ್ಜನ್ಯದ ವಿರುದ್ಧ ಮಕ್ಕಳ ಸಂರಕ್ಷಣೆ ಕಾಯ್ದೆ ಬಗ್ಗೆ ಹೆಚ್ಚಿನ ಅರಿವು ಸಾರ್ವಜನಿಕರಿಗೆ ಮೂಡಿಸುವುದು ಇಂದಿನ ದಿನಗಳಲ್ಲಿ ಅನಿವಾರ್ಯವಾಗಿದೆ ಎಂದು ಹೇಳಿದರು.
ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇಂಥ ದೌರ್ಜನ್ಯಕ್ಕೆ ಒಳಗಾದ ಬಾಲಕಿಯರು ಪೊಲೀಸರಿಗೆ ದೂರು ನೀಡುವಲ್ಲಿ ಹಿಂಜರಿಯುತ್ತಾರೆ. ಅಪ್ರಾಪ್ತ ಬಾಲಕಿಯನ್ನು ಯುವಕ ಪ್ರೀತಿಸಿ ಆಕೆಯೊಂದಿಗೆ ವಾಸವಿದ್ದರೆ, ಆತನು ಕಾಯ್ದೆಯಿಂದ ತಪ್ಪಿಸಿ ಕೊಳ್ಳಲು ಸಾಧ್ಯವಾಗುವುದಿಲ್ಲ. ಅಪ್ರಾಪ್ತ ಬಾಲಕಿಯರ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯ ತಡೆಗಟ್ಟಲು ಈ ಕಾಯ್ದೆಯು ಬಹಳ ಉತ್ತಮವಾಗಿದೆ ಎಂದರು.
ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಕ್ಕಳಿಗೆ ಮಾನಸಿಕವಾಗಿ ಸ್ಥೈರ್ಯ ತುಂಬುವಂತಹ ಕೆಲಸವನ್ನು ಪೊಲೀಸ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮತ್ತು ಮನೋರೋಗ ತಜ್ಞರು ಸೇರಿದಂತೆ ಇತರರು ಕಾರ್ಯ ನಿರ್ವಹಿಸಬೇಕು. ಈ ರೀತಿಯ ಪ್ರಕರಣಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಈ ಹಿಂದೆ ನಡೆಸುತ್ತಿದ್ದಂತಹ ತನಿಖೆ ಮಾದರಿಗಿಂತ ಬೇರೆ ಮಾದರಿ ಅನುಸರಿಸಿ ತನಿಖೆ ನಡೆಸಬೇಕು ಎಂದು ತಿಳಿಸಿದರು.
ಅಪರಾಧ ಪ್ರಕರಣಗಳಿಂದ ಅಭಿವೃದ್ಧಿಗೆ ಅಡ್ಡಿ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ್ ಮಾತನಾಡಿ, ಈಗಾಗಲೇ ಜಾರಿಯಾಗಿರುವ ಕಾಯ್ದೆಯು ಬಹಳ ಉತ್ತಮವಾಗಿದ್ದು, ಕಾಯ್ದೆ ಬಗ್ಗೆ ಸಂಬಂಧಪಟ್ಟ ಎಲ್ಲಾ ಇಲಾಖೆ ಅಧಿಕಾರಿಗಳು ಸಂಪೂರ್ಣಮಾಹಿತಿ ಪಡೆದು ಕಟ್ಟುನಿಟ್ಟಾಗಿ ಕಾಯ್ದೆ ಜಾರಿಯಾಗುವಂತೆ ಮಾಡಬೇಕು. ಯಾವುದೇ ಕಾಯ್ದೆಯ ಬಗ್ಗೆ ಸಂಶಯ ಬಂದಲ್ಲಿ ಅದನ್ನು ಬಗೆಹರಿಸಿಕೊಂಡು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು ಎಂದರು.
ಸಮಾಜದ ಅಭಿವೃದ್ಧಿಗೆ ಅಪರಾಧ ಪ್ರಕರಣಗಳು ತಡೆಯಾಗುತ್ತಿವೆ. ಈ ನಿಟ್ಟಿನಲ್ಲಿ ಹೊಸ ಕಾಯ್ದೆ ಉತ್ತಮವಾಗಿದ್ದು, ಇದನ್ನು ಪರಿಪಾಲಿಸುವಲ್ಲಿ ಎಲ್ಲಾ ಅಧಿಕಾರಿಗಳ ಪಾತ್ರ ಪ್ರಮುಖವಾಗಿದೆ ಎಂದು ಹೇಳಿದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ದೇವರಾಜೇಗೌಡ ಮಾತನಾಡಿ, ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದಕ್ಕೆಲ್ಲ ನಿಯಂತ್ರಣ ತರುವ ಸಲುವಾಗಿ ಈ ಹೊಸ ಕಾನೂನನ್ನು ಜಾರಿ ತರಲಾಗಿದೆ. ಸಾರ್ವಜನಿಕರು ಸುದ್ದಿ ಮಾಧ್ಯಮಗಳನ್ನು ಹೆಚ್ಚಾಗಿ ನಂಬಿದ್ದು, ಈ ಹೊಸ ಕಾಯ್ದೆ ಬಗ್ಗೆ ಮಾಧ್ಯಮಗಳಲ್ಲಿ ಹೆಚ್ಚು ಪ್ರಚಾರ ನೀಡುವ ಮೂಲಕ ಪ್ರತಿಯೊಬ್ಬರಲ್ಲೂ ಜಾಗೃತಿ ಮೂಡಿಸಬೇಕು ಎಂದರು.
ಮನುಷ್ಯನ ಇಂಥ ಕೆಟ್ಟ ಭಾವನೆಗಳು ಎಲ್ಲಿಯವರೆಗೂ ಬದಲಾಗುವುದಿಲ್ಲವೋ ಅಲ್ಲಿಯವರೆಗೆ ಅಮಾನುಷ ಕ್ರೌರ್ಯ ತಪ್ಪುವುದಿಲ್ಲ. ಈ ದಿಸೆಯಲ್ಲಿ ಮನುಷ್ಯನ ಭಾವನೆಗಳು ಮೊದಲು ಬದಲಾಗಬೇಕು ಎಂದು ನುಡಿದರು.
ಪ್ರೊಬೇಷನರಿ ಪೊಲೀಸ್ ಅಧಿಕಾರಿ ರಾಮಚಂದ್ರನ್, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಮುಸ್ತಾಫ ಹುಸೇನ್ ಇತರರು ಇದ್ದರು. ಲೈಂಗಿಕ ದೌರ್ಜನ್ಯ ವಿರುದ್ಧ ಮಕ್ಕಳ ಸಂರಕ್ಷಣೆ ಕಾಯ್ದೆ ಬಗ್ಗೆ ಸೆಷನ್ಸ್ 2ನೇ ನ್ಯಾಯಾಧೀಶ ಆರ್.ಡಿ.ಹುದ್ದರ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶ್ಯಾಮಲಾದೇವಿ, ವೈದ್ಯ ಎಸ್.ಎನ್.ಕಿರಣ್
ಮಾತನಾಡಿದರು. ಕುಟುಂಬ ವ್ಯಾಜ್ಯ ಹಾಗೂ ಫ್ರೀ ಲಿಟಿಗೇಷನ್ ಮಧ್ಯಸ್ಥಿಕೆ ಬಗ್ಗೆ ನ್ಯಾ. ಜೆ.ಎಸ್.ಸೋಮಶೇಖರ್, ಹಿರಿಯ ಸಿವಿಲ್ ನ್ಯಾಯಾಧೀಶ ಬಿ.ಜಯಂತ ಕುಮಾರ್, ನ್ಯಾಯಾಧೀಶೆ ಎಚ್.ಜಿ.ವಿಜಯ್ ಕುಮಾರಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜೆ.ಕೆ.ರಶ್ಮಿ, ವಕೀಲ ರಾಜ್ಗಿರ್ ಬೀರಪ್ಪ ಮಾತನಾಡಿದರು.
ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಕ್ಕಳಿಗೆ ಮಾನಸಿಕವಾಗಿ ಸ್ಥೈರ್ಯ ತುಂಬುವಂತಹ ಕೆಲಸವನ್ನು ಪೊಲೀಸ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮತ್ತು ಮನೋರೋಗ ತಜ್ಞರು ಸೇರಿದಂತೆ ಇತರರು ಕಾರ್ಯ ನಿರ್ವಹಿಸಬೇಕು. ಈ ರೀತಿಯ ಪ್ರಕರಣಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಈ ಹಿಂದೆ ನಡೆಸುತ್ತಿದ್ದಂತಹ ತನಿಖೆ ಮಾದರಿಗಿಂತ ಬೇರೆ ಮಾದರಿ ಅನುಸರಿಸಿ ತನಿಖೆ ನಡೆಸಬೇಕು
- ನ್ಯಾ. ಸೋಮಶೇಖರ್
ಸಮಾಜದ ಅಭಿವೃದ್ಧಿಗೆ ಅಪರಾಧ ಪ್ರಕರಣಗಳು ತಡೆಯಾಗುತ್ತಿವೆ. ಈ ನಿಟ್ಟಿನಲ್ಲಿ ಹೊಸ ಕಾಯ್ದೆ ಉತ್ತಮವಾಗಿದ್ದು, ಇದನ್ನು ಪರಿಪಾಲಿಸುವಲ್ಲಿ ಎಲ್ಲಾ ಅಧಿಕಾರಿಗಳ ಪಾತ್ರ ಪ್ರಮುಖವಾಗಿದೆ
- ರವಿ ಡಿ.ಚನ್ನಣ್ಣನವರ್, ಜಿಲ್ಲಾ ಎಸ್ಪಿ