ರು. 13 ಲಕ್ಷದ ಸ್ತ್ರೀಶಕ್ತಿ ಭವನ ನಿರ್ಮಾಣಕ್ಕೆ ಭೂಮಿ ಪೂಜೆ
ಚನ್ನರಾಯಪಟ್ಟಣ: ಸ್ತ್ರೀಶಕ್ತಿ ಸಂಘಗಳು ಆರ್ಥಿಕವಾಗಿ ಪ್ರಾಬಲ್ಯ ಸಾಧಿಸಿರುವ ಜತೆಗೆ ಕೆಲ ಸಾಮಾಜಿಕ ಕಾರ್ಯಗಳನ್ನು ಮಾಡುವತ್ತಾ ಮುಂದಾಗಿರುವುದು ಮೆಚ್ಚುಗೆಯ ವಿಷಯ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಅವರುತಿಳಿಸಿದರು.
ಪಟ್ಟಣದ ಕುವೆಂಪು ನಗರದಲ್ಲಿ 13 ಲಕ್ಷ ರು. ವೆಚ್ಚದಲ್ಲಿ ಸ್ತ್ರೀಶಕ್ತಿ ಭವನ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು ಸ್ತ್ರೀಶಕ್ತಿ ಸಂಘಗಳು ಸ್ಥಾಪನೆಗೊಂಡ ನಂತರದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಕೆಲ ಬದಲಾವಣೆಗಳನ್ನು ತಂದಿದ್ದು, ಸಂಘಗಳು ಕೇವಲ ಆರ್ಥಿಕವಾಗಿ ಸಬಲತೆ ಆಗುವಲ್ಲಿ ಮುಂದಾಗಿಲ್ಲ, ಸಾಮಾಜಿಕ ಕಾರ್ಯಗಳಲ್ಲಿಯೂ ತೊಡಗಿಸಿಕೊಂಡು ಗ್ರಾಮೀಣ ಬದುಕನ್ನು ಹಸನು ಮಾಡಲು ಮುಂದಾಗಿವೆ ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ 13 ಲಕ್ಷ ರು. ವೆಚ್ಚದಲ್ಲಿ ಕಟ್ಟಡವನ್ನು ನಿರ್ಮಿಸಿದ ನಂತರದಲ್ಲಿ ಇನ್ನೂ ಎರಡು ಅಂತಸ್ತು ಮುಂದಿನ ಅವಧಿಯಲ್ಲಿ ನಿರ್ಮಿಸಿ ಸ್ತ್ರೀಶಕ್ತಿ ಸ್ವಸಹಾಯ ಸಂಘಗಳು ನಡೆಸುವ ಎಲ್ಲಾ ಚಟುವಟಿಕೆಗಳಿಗೆ ಇದು ಕೇಂದ್ರ ಬಿಂದುವಾಗಿಸುವ ಉದ್ದೇಶ ಹೊಂದಲಾಗಿದೆ ಎಂದು ನುಡಿದರು.
ಶೌಚಾಲಯ ನಿರ್ಮಾಣ: ಪಟ್ಟಣದಲ್ಲಿ ಶೌಚಾಲಯಗಳ ಕೊರತೆಯಿದ್ದು, ಕನಿಷ್ಠ 10 ಕಡೆಯಲ್ಲಾದರೂ ಶೌಚಾಲಯಗಳ ನಿರ್ಮಾಣವಾಗಬೇಕಿದೆ. ಈ ನಿಟ್ಟಿನಲ್ಲಿ ಪುರಸಭೆ ಹಾಗೂ ಖಾಸಗಿ ಕಂಪನಿಗಳಿಗೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ 5 ಶೌಚಾಲಯಗಳ ನಿರ್ಮಾಣಕ್ಕೆ ಖಾಸಗಿ ಕಂಪನಿಯೊಂದು ಮುಂದೆ ಬಂದಿದೆ ಎಂದು ತಿಳಿಸಿದರು.
ಪಟ್ಟಣದ ಎಪಿಎಂಸಿ, ಕಾರ್ಪೋರೇಷನ್ ಬ್ಯಾಂಕ್, ಹಳೆ ಬಸ್‌ನಿಲ್ದಾಣ, ತಾಲೂಕು ಕಚೇರಿ ಹಾಗೂ ಬಾಗೂರು ರಸ್ತೆಯಲ್ಲಿ ಹೈಟೆಕ್ ಶೌಚಾಲಯ ನಿರ್ಮಿಸಲು ಖಾಸಗಿಯವರಿಗೆ ನೀಡಲಾಗಿದೆ ಎಂದು ತಿಳಿಸಿದರು. ಪುರಸಭಾ ಸದಸ್ಯ ನವೀನ್, ಸಿಡಿಪಿಒ ಗಂಗೇಗೌಡ ಮೊದಲಾದವರು ಇದ್ದರು.