ವಿರೂಪಾಕ್ಷಿಪುರದಲ್ಲಿ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರ
ನುಗ್ಗೇಹಳ್ಳಿ: ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ಅಂಗವಾಗಿ ನುಗ್ಗೇಹಳ್ಳಿ ಹೋಬಳಿಯ ವಿರೂಪಾಕ್ಷಿಪುರ ಗ್ರಾಮದಲ್ಲಿ ಹಾಸನದ ಕೃಷಿ ಮಹಾವಿದ್ಯಾಲಯ ವತಿಯಿಂದ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಶಿಬಿರಾರ್ಥಿಗಳು ರೂಪಿಸಿದ್ದ ಕೃಷಿ ಸಂಗ್ರಹಾಲಯಕ್ಕೆ ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಡಾ. ಶಿವರಾಜು ಹಾಗೂ ಕೃಷಿ ಅಧಿಕಾರಿ ಶ್ರೀನಿವಾಸ್ ಭೇಟಿ ನೀಡಿದ್ದರು.
ಏಕದಳ ಧಾನ್ಯಗಳಾದ ರಾಗಿ, ಭತ್ತ, ಗೋಧಿ, ಜೋಳ, ದ್ವಿದಳ ಧಾನ್ಯಗಳಾದ ಅಲಸಂದೆ, ತೊಗರಿ, ನೆಲಗಡಲೆ, ಅವರೆ, ಹುರುಳಿ, ಇತ್ಯಾದಿ ಹೂವಿನ ಗಿಡಗಳಾದ ಗುಲಾಬಿ, ಸೇವಂತಿಗೆ, ಚೆಂಡುಹೂವು ಇತ್ಯಾದಿ. ಎಣ್ಣೆಕಾಳುಗಳಾದ ಅರಳು, ಎಳ್ಳು, ಅಗಸೆ, ಸಾಸಿವೆ, ಹುಚ್ಚೆಳ್ಳು, ಕುಸುವೆ ಇತ್ಯಾದಿ, ಮೇವಿನ ಬೆಳೆಗಳಾದ ನೇಪಿಯರ್ಸ್ ಪಿ 3 ಹುಲ್ಲು, ಜೋಳ (ಸೌತ್ ಆಫ್ರಿಕನ್ ಸ್ಟಾಲ್) ಇತ್ಯಾದಿ. ಇತರೆ ಬೆಳೆಗಳಾದ ಹಿಪ್ಪುನೇರಳೆ, ಈಜಿಪ್ಟ್ನಿಂದ ತಂದಿರುವ ಟೆಫ್, ನವಣೆ, ಸಜ್ಜೆ, ಇತ್ಯಾದಿ, ಔಷಧಿ ಸಸ್ಯಗಳಾದ ಪುದೀನ, ಮುಂಗುರುಬಳ್ಳಿ, ದೊಡ್ಡಪತ್ರೆ, ಇತ್ಯಾದಿ, ತರಕಾರಿ ಬೆಳೆಗಳಾದ ದಂಟು, ಮೆಂತ್ಯ, ಕೋಸು, ಆಲೂಗಡ್ಡೆ, ಟೊಮೆಟೊ, ಈರುಳ್ಳಿ, ಬದನೆ ಇತ್ಯಾದಿ ಬೆಳೆಗಳನ್ನು ಒಳಗೊಂಡ 80 ಪಾತಿಗಳನ್ನು ವೀಕ್ಷಿಸಿದರು. ಅಜೋಲ್ಲಾ ಹಾಗೂ ಜಪಾನ್ ಪದ್ಧತಿಯ ಕಾಂಪೋಸ್ಟ್, ಜೇನು ಸಾಕಣಾ ಪೆಟ್ಟಿಗೆ ಇವುಗಳನ್ನು ಗಮನಿಸಿ, ವಿದ್ಯಾರ್ಥಿಗಳ ಪರಿಶ್ರಮಕ್ಕೆ ಮೆಚ್ಚುಗೆ ಸೂಚಿಸಿದರು.