ನಾರ್ವೆ ಗ್ರಾಮದ ರಸ್ತೆ ದುರಸ್ತಿಗೊಳಿಸದಿದ್ದರೆ ಹೋರಾಟ
ಬೇಲೂರು: ತಾಲೂಕಿನ ನಾರ್ವೆ ಗ್ರಾಮದ ಬಿಎನ್‌ಎಸ್ ರಸ್ತೆ ಹದಗೆಟ್ಟಿದ್ದು ತಕ್ಷಣ ಕ್ರಮ ಕೈಗೊಳ್ಳದಿದ್ದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಜಯಕರ್ನಾಟಕ ಅರೇಹಳ್ಳಿ ಹೋಬಳಿ ಅಧ್ಯಕ್ಷ ಮಲ್ಲಿಕಾರ್ಜುನ್ ಎಚ್ಚರಿಸಿದ್ದಾರೆ. ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಬಿರಡಹಳ್ಳಿಯಿಂದ ನಾರ್ವೆ, ಸೂಳೆಗುಡ್ಡ ಗ್ರಾಮಕ್ಕೆ ನೇರ ಸಂಪರ್ಕವಿರುವ ರಸ್ತೆ ಇದ್ದಾಗಿದ್ದು ರಸ್ತೆಯ ಅಲ್ಲಲ್ಲಿ ಸಾಕಷ್ಟು ಗುಂಡಿ ಬಿದ್ದು ವಾಹನ ಸಂಚಾರ ನಡೆಸಲಾಗದಷ್ಟು ದುಸ್ಥಿತಿಯಲ್ಲಿ ಈ ರಸ್ತೆಯಿದೆ. ಕಳೆದ ಕೆಲ ದಿನಗಳ ಹಿಂದೆ ಎದುರಿಗೆ ಬಂದ ವಾಹನಕ್ಕೆ ಜಾಗ ಬಿಡಲು ಹೋದ ಸಂದರ್ಭದಲ್ಲಿ ಆಟೋರಿಕ್ಷಾ ಪಲ್ಟಿಯಾಗಿದೆ. ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ನಡೆದು ಹೋಗಲು ಭಯಪಡುವಂತಾಗಿದೆ. ರಸ್ತೆಯ ಕಾಮಗಾರಿ ಶೀಘ್ರ ಕೈಗೊಳ್ಳಬೇಕೆಂದು ಮನವಿ ಸಲ್ಲಿಸಲಾಗಿತ್ತು. ಮನವಿಗೆ ಸ್ಪಂದಿಸದಿದ್ದಾಗ ಪ್ರತಿಭಟನೆ ನಡೆಸಿದ್ದ ಸಂದರ್ಭದಲ್ಲಿ ಅಧಿಕಾರಿಗಳು ಬಗೆಹರಿಸುವ ಭರವಸೆ ನೀಡಿದ್ದರು. ಇಲ್ಲಿಯವರೆಗೆ ಗಮನಹರಿಸಿಲ್ಲ. ಕೂಡಲೇ ರಸ್ತೆ ಕಾಮಗಾರಿ ಕೈಕೊಂಡು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡದಿದ್ದಲ್ಲಿ ಉಗ್ರಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.