ಮಹಿಳಾ ಸಹಕಾರ ಸಂಘದ ಚುನಾವಣೆ: ಸದಸ್ಯರ ಧರಣಿ
ಚನ್ನರಾಯಪಟ್ಟಣ: ತಾಲೂಕಿನ ಹಡೇನಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಚುನಾವಣೆ ಹಿನ್ನೆಲೆಯಲ್ಲಿ ನಾಮಪತ್ರ ವಾಪಸ್ ಪಡೆಯಲು ಕಡೆಯ ದಿನವಾದ ಸೋಮವಾರ ನಿಗದಿತ ಸಮಯಕ್ಕೆ ಚುನಾವಣಾಧಿಕಾರಿ ಬಾರದ ಕಾರಣ ಸಂಘದ ಸದಸ್ಯರು ಧರಣಿ ನಡೆಸಿದರು.
ಮಹಿಳಾ ಸಹಕಾರ ಸಂಘಕ್ಕೆ ಸಲ್ಲಿಸಿದ್ದ ನಾಮಪತ್ರ ವಾಪಸ್ ಪಡೆಯಲು ಸೋಮವಾರ ಕಡೆಯ ದಿನವಾಗಿದ್ದು, ತಮ್ಮ ನಾಪಪತ್ರ ವಾಪಸ್ ಪಡೆಯಲು ಕೆಲ ಸದಸ್ಯರು ಡೈರಿ ಕಟ್ಟಡದ ಬೆಳಗ್ಗೆ 11ಕ್ಕೆ ಆಗಮಿಸಿ ಮದ್ಯಾಹ್ನ 2ರವರೆಗೆ ಕಾದು ಕುಳಿತರೂ ಚುನಾವಣಾಧಿಕಾರಿ ಶಿವಸ್ವಾಮಿ ಬಾರದ ಕಾರಣ ಕೆಲ ಸದಸ್ಯರು ಧರಣಿ ನಡೆಸಿ ಪ್ರತಿಭಟಿಸಿದರು.
25ರಂದು ನಡೆಯಲಿರುವ ಚುನಾವಣೆಗೆ ಆ.17ರಂದು ನಾಮಪತ್ರ ಸಲ್ಲಿಸಲಾಗಿದ್ದು, ಈ ಸಂದರ್ಭದಲ್ಲಿ ಉಮೇದುವಾರರು ತಮ್ಮ ನಾಮಪತ್ರದಲ್ಲಿರುವಂತೆ ಸಹಿ ಮಾಡದೆ, ಒತ್ತಕ್ಷರಗಳನ್ನು ಸಹಿ ಮಾಡುವ ಸಂದರ್ಭದಲ್ಲಿ ಬಳಕೆ ಮಾಡಿಲ್ಲ ಎಂದು ನಾಮಪತ್ರವನ್ನು ತಿರಸ್ಕೃತ ಮಾಡಿರುವುದು ಉದ್ದೇಶಪೂರ್ವಕವಾಗಿ ಕೆಲವರು ಚುನಾವಣಾಧಿಕಾರಿಗಳ ಮೇಲೆ ಪ್ರಭಾವ ಬಳಸಿ ಈ ಕಾರ್ಯ ಮಾಡಿದ್ದಾರೆ ಎಂದು ಗ್ರಾಮದ ಕೆಲವರು ಆರೋಪಿಸಿದರು.