ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಮೇಲ್ನೋಟಕ್ಕೆ ಕಾಣಿಸದ ಜೀತ

Vishwanath S
Updated On : 20 Aug 2013, 12:11 pm

ಕ.ಪ್ರ.ವಾರ್ತೆ ,  ಅರಕಲಗೂಡು ,  ಆ.19
ತಾಲೂಕಿನ ರಾಮನಾಥಪುರ ಹೋಬಳಿ ರಾಗಿ ಮರೂರು ಗ್ರಾಮದಲ್ಲಿ ಜೀತ ಪದ್ಧತಿ ಇನ್ನೂ ಅಸ್ತಿತ್ವದಲ್ಲಿದೆ ಎಂದು ಜೀತ ವಿಮುಕ್ತಿ ಕರ್ನಾಟಕ ಎನ್‌ಜಿಓ ಸಂಸ್ಥೆ ನಡೆಸಿದ ಸಮೀಕ್ಷಾ ವರದಿ ಪತ್ರಿಕೆ ಮತ್ತು ದೃಶ್ಯ ಮಾಧ್ಯಮಗಳಲ್ಲಿ ಪ್ರಕಟವಾದ ಬೆನ್ನಲ್ಲಿ ಎಚ್ಚೆತ್ತ ಜಿಲ್ಲಾಡಳಿತ ಭಾನುವಾರದಿಂದಲೇ ವಾಸ್ತವ ಸ್ಥಿತಿ ಅರಿಯುವ ಸಲುವಾಗಿ ತಾಲೂಕಿನ ಕಂದಾಯ ಮತ್ತು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಸಮೀಕ್ಷಾ ಕಾರ್ಯ ಮತ್ತು ಗ್ರಾಮಸ್ಥರ ಹೇಳಿಕೆ ಪಡೆದು ಮುಂದಿನ ಕ್ರಮಕ್ಕೆ ಮುಂದಾಗಿತ್ತು.
 ಆದರೆ ಭಾನುವಾರ ಗ್ರಾಮದಲ್ಲಿ ಗ್ರಾಮಸ್ಥರು ಮತ್ತು ದಲಿತ ಕುಟುಂಬ ಸದಸ್ಯರು ಅಧಿಕಾರಿಗಳ ಸಂಪರ್ಕಕ್ಕೆ ಸಿಗದ ಕಾರಣ ಸೋಮವಾರ ಬೆಳಗಿನಿಂದಲೇ ಗ್ರಾಮದಲ್ಲಿ ಬೀಡುಬಿಟ್ಟ ಅಧಿಕಾರಿಗಳು ಮನೆ ಮನೆಗಳಿಗೆ ತೆರಳಿ  ಕುಟುಂಬಗಳಿಂದ ಹೇಳಿಕೆ ಪಡೆದರು. ಕಂದಾಯ ಇಲಾಖೆ ಅಧಿಕಾರಿಗಳು 25 ದಲಿತ ಕುಟುಂಬಗಳ ಹೇಳಿಕೆ ಪಡೆದರೆ, ಸಮಾಜ ಕಲ್ಯಾಣ ಇಲಾಖೆ 35 ಕುಟುಂಬಗಳ ಹೇಳಿಕೆ ಪಡೆಯಿತು.
ಮಾಹಿತಿ ಕಲೆ ಹಾಕಿದ ಜಿಲ್ಲಾಧಿಕಾರಿ:  ಸೋಮವಾರ ಮಧ್ಯಾಹ್ನ ವೇಳೆಗೆ ಜಿಲ್ಲಾಧಿಕಾರಿ ಅನ್ವುಕುಮಾರ್ ಅವರು ಇತರೆ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಗ್ರಾಮದ ದಲಿತ ಕೇರಿಗಳಿಗೆ ತೆರಳಿ ವಾಸ್ತವಸ್ಥಿತಿ ಅರಿಯುವ ಪ್ರಯತ್ನ ಮಾಡಿದರು. ಈ ವೇಳೆ ದಲಿತ ಕುಟುಂಬ ಸದಸ್ಯರಿಂದ ವಿವರ ಮಾಹಿತಿಗಳನ್ನು ಕಲೆ ಹಾಕಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಗ್ರಾಮದಲ್ಲಿ ಜೀತಪದ್ಧತಿ ಇರುವ ಬಗ್ಗೆ ಮೇಲ್ನೋಟಕ್ಕೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಉಳ್ಳವರಿಂದ ಹಣ ಪಡೆದು ಅದರ ಸಾಲ ತೀರಿಸುವ ಸಲುವಾಗಿ ಅವರ ಜಮೀನುಗಳಲ್ಲಿ ಕೆಲಸ ಮಾಡುತ್ತಿರುವುದು ಗ್ರಾಮೀಣ ಪ್ರದೇಶಗಳಲ್ಲಿ ಹಿಂದಿನಿಂದಲೂ ನಡೆದು ಬಂದಿರುವ ಪದ್ಧತಿ.
ಉಪ ವಿಭಾಗಾಧಿಕಾರಿ ಮಟ್ಟದಲ್ಲಿ ಸಮಿತಿ ರಚನೆ:  ಆದರೂ ಇದೊಂದು ಸೂಕ್ಷ್ಮ ವಿಚಾರವಾದ್ದರಿಂದ ಈ ಕುರಿತು ಉಪ ವಿಭಾಗಾಧಿಕಾರಿಗಳ ಮಟ್ಟದಲ್ಲಿ ಸಮಿತಿ ರಚಿಸಿ ತನಿಖೆ ನಡೆಸುವುದಾಗಿ ಹೇಳಿ, ಜೀತ ಯಾವುದೇ ಸಾಂವಿಧಾನಿಕವಲ್ಲದ ಕ್ರಮ ಕಂಡುಬಂದರೂ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ತಹಸೀಲ್ದಾರ್ ಈಶ್ವರಪ್ಪ, ಕಂದಾಯ ಇಲಾಖೆಯ ಶಂಕರಪ್ಪ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ನಾಗರಾಜು, ಸಿಪಿಐ ರಾಜು ಇತರರು ಇದ್ದರು.
ಅರಿವೆ ಇಲ್ಲದಂತಿದ್ದ ಗ್ರಾಮಸ್ಥರು: ರಾಗಿಮರೂರು ಗ್ರಾಮಕ್ಕೆ ಪತ್ರಕರ್ತರ ತಂಡ ಮಧ್ಯಾಹ್ನ 2 ಗಂಟೆ ವೇಳೆಗೆ ಭೇಟಿ ನೀಡಿದಾಗ ಗ್ರಾಮದಲ್ಲಿ  ಪ್ರಶಾಂತ ವಾತಾವರಣವಿತ್ತು. ಸಮಾಜ ಕಲ್ಯಾಣ ಇಲಾಖೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಜಿಲ್ಲಾಧಿಕಾರಿ ಆಗಮನಕ್ಕಾಗಿ ಕಾದು ಕುಳಿತಿದ್ದರು.
ಜೀವಿಕ ಸಂಸ್ಥೆಯ ತಾಲೂಕು ಸಂಚಾಲಕ ಯೋಗೇಶ ಮತ್ತು ಜಿಲ್ಲಾ ಸಂಚಾಲಕ ಬೈರಪ್ಪ ಗ್ರಾಮದ ದಲಿತ ಕೇರಿಯಲ್ಲಿದ್ದರು. ಈ ವೇಳೆ  8-10 ಹುಡುಗರೊಂದಿಗಿದ್ದ ಅವರು ಪತ್ರಕರ್ತರೊಂದಿಗೆ ಮಾತನಾಡಿ ಗ್ರಾಮದಲ್ಲಿ ಒಟ್ಟು 250 ಕುಟುಂಬಗಳಿದ್ದು ಒಕ್ಕಲಿಗ, ಕುರುಬ, ಲಿಂಗಾಯಿತ ಮತ್ತು ನಾಮಧಾರಿ ಗೌಡ ಕುಟುಂಬಗಳು ವಾಸವಾಗಿದ್ದು, ಇವರಲ್ಲಿ ಸುಮಾರು 70 ಕುಟುಂಬಗಳು ದಲಿತರದ್ದಾಗಿದೆ. ತಾವು ಮಾರ್ಚ್ ತಿಂಗಳಿನಿಂದಲೇ ಸಮೀಕ್ಷೆ ಆರಂಭಿಸಿದ್ದು, ಈ ಕುರಿತು ತಹಸೀಲ್ದಾರ್ ಹಾಗೂ ಉಪ ವಿಭಾಗಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದೇವೆ. ಈ ಹಿಂದೆ ಜುಲೈ ತಿಂಗಳಲ್ಲಿ ಉಪ ವಿಭಾಗಾಧಿಕಾರಿಗಳು ತಹಸೀಲ್ದಾರರಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರೂ ತಹಸೀಲ್ದಾರರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ಇಲ್ಲಿನ ದಲಿತರು ಸವರ್ಣೀಯರಿಂದ ಮದುವೆ, ಹಬ್ಬ ಇತ್ಯಾದಿಗೆಂದು 20 ರಿಂದ 70 ಸಾವಿರ ರು.ಗಳವರೆಗೂ ಸಾಲ ಪಡೆದಿದ್ದಾರೆ. ಬೆಳಿಗ್ಗೆ 6ರಿಂದ ಸಂಜೆ 6-7 ಗಂಟೆಯವರೆಗೂ ದುಡಿಯುತ್ತಿದ್ದಾರೆ ಎಂದರು. ತಾವು ಆಗಸ್ಟ್ 2 ರಂದು ಮತ್ತೆ ತಹಸೀಲ್ದಾರರಿಗೆ ವರದಿ ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು.
ತಾಲೂಕಿನಲ್ಲಿ ಜೀವಿಕ ನಡೆಸಿದ ಸಮೀಕ್ಷೆಯಂತೆ ಹಂಪಾಪುರ-12, ದಡದಹಳ್ಳಿ-1,ಅಗ್ರಹಾರ-2,ಸೀಗೋಡು-2 ಜೀತದ ಪ್ರಕರಣಗಳು ಕಂಡುಬಂದಿದೆ ಎಂದು ಯೋಗೇಶ್ ತಿಳಿಸಿದರು.  
ಗೊಂದಲದ ವಾತಾವರಣ: ರಾಗಿಮರೂರು ಗ್ರಾಮದಲ್ಲಿ ಜೀವಿಕ ಸಂಸ್ಥೆ ನಡೆಸಿ ನೀಡಿರುವ ಹೇಳಿಕೆಯಂತೆ ಅಲ್ಲಿರುವುದು ಜೀತ ಪದ್ಧತಿಯೇ ಎಂಬ ಬಗೆಗೆ ಈಗ ಅಧಿಕಾರಿಗಳಲ್ಲಿ ಗೊಂದಲದ ವಾತಾವರಣ ಮೂಡಿದೆ. ಗ್ರಾಮೀಣ ಪ್ರದೇಶದಲ್ಲಿ ತನ್ನ ಅವಶ್ಯಕತೆಗೆ ಅನುಗುಣವಾಗಿ ಹಣ ಪಡೆದು ನಂತರ ಹಣ ಪಡೆದವರ ಮನೆ ಅಥವಾ ಜಮೀನುಗಳಲ್ಲಿ ದುಡಿಮೆ ಮಾಡುವುದು ಸಾಮಾನ್ಯ. ಇದು ಹಿಂದಿನಿಂದಲೂ ನಡೆದು ಬಂದಿದೆ. ಆದರೆ ಹಣ ಕೊಟ್ಟವರು ಅನಿಯಮಿತವಾಗಿ ದುಡಿಸಿಕೊಳ್ಳುವುದು ಮತ್ತು ತನ್ನ ಮನೆ ಅಥವಾ ಆತನ ಸ್ವಾತಂತ್ರ್ಯಕ್ಕೆ ಅಡ್ಡಿ ತರಬಾರದು. ಆದರೆ ತಾವು ಅವರಿಂದ ಹಣ ಪಡೆದಿದ್ದೇವೆ ಎಂಬುವುದನ್ನು ಒಪ್ಪಿಕೊಳ್ಳುವ ದಲಿತ ಕುಟುಂಬಗಳು ಅದನ್ನು ತೀರಿಸುವ ಸಲುವಾಗಿ ಜಮೀನುಗಳಲ್ಲಿ ದುಡಿಯುವುದಾಗಿ ಹೇಳಿಕೆ ನೀಡಿವೆ. ಅದಲ್ಲದೇ ಅಲ್ಲಿಯ ಕೆಲವು ಕುಟುಂಬ ಸದಸ್ಯರು ಕೆಲವರಿಂದ ತಮ್ಮ ಅವಶ್ಯಕತೆಗಾಗಿ ಸಾಲ ಮಾಡಿದ್ದಾರೆ.ಆದರೆ ಅದನ್ನು ತೀರಿಸಲಾಗದೇ ಊರು ಬಿಟ್ಟು ಹೋಗಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದು, ಇದಕ್ಕೂ ಜೀತಕ್ಕೂ ಸಂಬಂಧ ಕಲ್ಪಿಸುವುದು ಸರಿಯೇ ಎಂಬುದು ಗ್ರಾಮದಲ್ಲಿ ಕೇಳಿಬಂದ ಮಾತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement