ಸಕ್ಕರೆ ಕಾರ್ಖಾನೆ ಎದುರು ರೈತರ ಧರಣಿ
ಚನ್ನರಾಯಪಟ್ಟಣ: ಕಬ್ಬಿಗೆ ದರ ನಿಗದಿ ಮಾಡಬೇಕೆಂದು ಆಗ್ರಹಿಸಿ ತಾಲೂಕಿನ ಶ್ರೀನಿವಾಸಪುರ ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆ ಎದುರು ರೈತರು ಧರಣಿ ನಡೆಸಿದರು.
ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಕಬ್ಬು ಬೆಳೆಗಾರರು ಕಾರ್ಖಾನೆ ಕಬ್ಬು ಅರೆಯಲು ಪ್ರಾರಂಭಿಸುವ ಮುನ್ನಾ ಕಬ್ಬಿನ ಬೆಲೆಯನ್ನು ನಿಗದಿ ಮಾಡಬೇಕೆಂದು ಒತ್ತಾಯಿಸಿದರು.
ಕಳೆದ ಸಾಲಿನಲ್ಲಿ ಸರ್ಕಾರ ಪ್ರತಿ ಟನ್ ಕಬ್ಬಿಗೆ 2400ರು. ನಿಗದಿ ಮಾಡಿದ್ದು, ಪ್ರಸಕ್ತ ಸಾಲಿನಲ್ಲಿಯೂ ಅದೇ ಬೆಲೆಯನ್ನು ನಿಗದಿ ಮಾಡಬೇಕೆಂದು ರೈತರು ಆಗ್ರಹಿಸಿದರಾದರೂ ಕಾರ್ಖಾನೆಯ ಆಡಳಿತ ಮಂಡಳಿ ರೈತರ ಒತ್ತಾಯಕ್ಕೆ ಒಪ್ಪದೆ, ಪ್ರತಿ ಟನ್ ಕಬ್ಬಿಗೆ 2100ರು.ಗಳನ್ನು ನೀಡುವುದಾಗಿ ತಿಳಿಸಿದಾಗ ಕಾರ್ಖಾನೆಯ ಆಡಳಿತ ಮಂಡಳಿ ತೀರ್ಮಾನಕ್ಕೆ ಒಪ್ಪದ ರೈತರು ದರ ನಿಗದಿಯಾಗುವವರಗೆ ಕಾರ್ಖಾನೆಗೆ ಕಬ್ಬು ಸಾಗಿಸುವುದಿಲ್ಲ ಎಂದು ಘೋಷಣೆ ಮಾಡಿದರು.
ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ ಕಳೆದ ವರ್ಷದಲ್ಲಿ ಬೀಕರ ಬರಗಾಲದಲ್ಲಿಯೂ ಕಬ್ಬು ಬೆಳೆದಿರುವ ರೈತರಿಗೆ ಕಳೆದ ಬಾರಿ ನೀಡಿದ 2400ರು. ನೀಡಬೇಕು. ರಾಜ್ಯ ಸರ್ಕಾರ ನಂತರದಲ್ಲಿ ಬೆಲೆ ನಿಗದಿ ಮಾಡಿದ ನಂತರ ಕಾರ್ಖಾನೆಯ ಆಡಳಿತ ಮಂಡಳಿ ಆ ದರವನ್ನು ನೀಡಬೇಕು. ಸರ್ಕಾರದ ಬೆಲೆ ನಿಗದಿಯಾಗುವವರಗೆ ಕಳೆದ ಸಾಲಿನಲ್ಲಿ ನಿಗದಿಯಾಗಿರುವ ಬೆಲೆಯನ್ನು ನೀಡಬೇಕು ಎಂದು ಒತ್ತಾಯಿಸಿದರು.
ಕಳೆದ ಸಾಲಿನಲ್ಲಿ ಕಬ್ಬು ಸರಬರಾಜು ಮಾಡಿರುವ ರೈತರಿಗೆ 40ಲಕ್ಷ ಕಬ್ಬಿನ ಬಾಕಿ ಹಣವನ್ನು ಬಾಕಿ ಉಳಿಸಿಕೊಂಡಿರುವ ಕಾರ್ಖಾನೆಯ ಆಡಳಿತ ಮಂಡಳಿ ರೈತರಿಗೆ ಬಡ್ಡಿ ಸಮೇತ ಹಣವನ್ನು ನೀಡಬೇಕು ಎಂದು ಆಗ್ರಹಿಸಿದರು.
ಸಕ್ಕರೆ ಇಳುವರಿಯ ಆಧಾರದ ಮೇಲೆ ಕಬ್ಬಿನ ಬೆಲೆ ನಿಗದಿ ಮಾಡುತ್ತಿರುವ ಕಾರ್ಖಾನೆಯ ಆಡಳಿತ ಮಂಡಳಿ ನಿರ್ಧಾರವನ್ನು ವಾಪಸ್ ತೆಗೆದುಕೊಂಡು ರಾಜ್ಯದಲ್ಲಿನ ಕಾರ್ಖಾನೆಗಳು ನೀಡುತ್ತಿರುವ ದರವನ್ನು ನೀಡಬೇಕು. ಸಕ್ಕರೆ ಇಳುವರಿಗಾಗಿ ಆಡಳಿತ ಮಂಡಳಿ ನೂತನ ಯಂತ್ರಗಳನ್ನು ಅಳವಡಿಸದಿರುವುದಕ್ಕೆ ರೈತರು ಕಾರಣರಲ್ಲ ಎಂದು ಹೇಳಿದರು.
ಕಾರ್ಖಾನೆ ಸಹಾಯಕ ವ್ಯವಸ್ಥಾಪಕ ನಿರ್ದೇಶಕ ಬ್ರಿಟ್ಟೋ ಮಾತನಾಡಿ ಕೆ.ಆರ್. ಪೇಟೆ ತಾಲೂಕಿನಲ್ಲಿರುವ ಐಸಿಎಲ್ ಕಾರ್ಖಾನೆ ಕೂಡ 2100ರು. ನಿಗದಿ ಮಾಡಿದೆ. ಅದೇ ದರವನ್ನು ತಾವು ನೀಡಲು ಮುಂದಾಗಿದ್ದು, ಸರ್ಕಾರ ಯಾವ ತೀರ್ಮಾನ ತೆಗೆದುಕೊಳ್ಳುತ್ತದೆಯೋ ಅದೇ ದರವನ್ನು ರೈತರಿಗೆ ನೀಡಲಾಗುವುದು.
ಸರ್ಕಾರ ದರ ನಿಗದಿ ಮಾಡುವವರಗೆ ತಮ್ಮ ಆಡಳಿತ ಮಂಡಳಿ 2100ರು.ಗಳನ್ನು ನಿಗದಿ ಮಾಡಲಾಗಿದ್ದು, ಸಕ್ಕರೆ ಬೆಲೆ ನಿಗದಿಗೆ ಸರ್ಕಾರ ರಚಿಸಿರುವ ಸಮಿತಿ ತೀರ್ಮಾನಕ್ಕೆ ತಾವು ಬದ್ದರಾಗಿ ಬೆಲೆಯನ್ನು ನೀಡಲಾಗೂವುದು ಎಂದು ತಿಳಿಸಿದರು.
ಕಳೆದ ಸಾಲಿನಲ್ಲಿ ಪ್ರತಿ ಟನ್ ಸಕ್ಕರೆಗೆ 3500ಕ್ಕೂ ಹೆಚ್ಚು ದರ ಮಾರುಕಟ್ಟೆಯಲ್ಲಿತ್ತು. ಆದರೆ ಈ ಬಾರಿ ಸಕ್ಕರೆ ದರ ಮಾರುಕಟ್ಟೆಯಲ್ಲಿ 500ರು. ಕುಸಿದಿದ್ದು, ಇದರಿಂದ ಕಾರ್ಖಾನೆಗೆ ನಷ್ಟವಾಗುತ್ತಿದೆ ಎಂದರು.
ಮಾಜಿ ಶಾಸಕ ಡಾ.ಎನ್.ಬಿ. ನಂಜಪ್ಪ, ರಾಜ್ಯ ರೈತ ಸಂಘ ಹಸಿರು ಸೇನೆಯ ಆನೆಕೆರೆ ರವಿ, ಕಬ್ಬು ಬೆಳೆಗಾರರಾದ ರಾಜು, ಶಿವರಾಮು, ಹೊನ್ನಶೆಟ್ಟಿಹಳ್ಳಿ ರವಿ ಇದ್ದರು.