ಅರಸು ಸಾಮಾಜಿಕ ಕ್ರಾಂತಿಯ ಹರಿಕಾರ
ಕ.ಪ್ರ.ವಾರ್ತೆ , ಹಾಸನ , ಆ. 20
ಮಾಜಿ ಮುಖ್ಯಮಂತ್ರಿ ದಿ. ಡಿ. ದೇವರಾಜ ಅರಸು ಅವರು, ತಾನೆಂದು ಹಿಂದುಳಿದ ವರ್ಗಗಳ ನಾಯಕ ಎಂದು ಹೇಳಿಕೊಳ್ಳಲಿಲ್ಲ. ಎಲ್ಲಾ ವರ್ಗಗಳ ನಾಯಕರಾಗಿ ಕಾರ್ಯನಿರ್ವಹಿಸಿದ ಸಮಾನತೆ ಕ್ರಾಂತಿಯ ಹರಿಕಾರರಾಗಿದ್ದರು ಎಂದು ಶಾಸಕ ಎಚ್.ಎಸ್. ಪ್ರಕಾಶ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಹಿಂದುಳಿದ ವರ್ಗಗಳ ಮತ್ತು ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ, ಡಿ.ದೇವರಾಜ್ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಮತ್ತು ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಸಂಯುಕ್ತಾಶ್ರಯದಲ್ಲಿ ನಡೆದ ದಿ. ದೇವರಾಜ್ ಅರಸು ರವರ 98ನೇ ಜನ್ಮ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶಾಸಕರು ಮಾತನಾಡಿದರು.
ಉಳುವವನೆ ಭೂಮಿ ಒಡೆಯ ಕಾಯ್ದೆ ಜಾರಿಗೆ ತರುವ ಮೂಲಕ ಸರ್ವರಿಗೂ ಸಮಬಾಳು ಮತ್ತು ಸಮಪಾಲು ಎಂಬುದನ್ನು ತೋರಿಸಿ ಕೊಟ್ಟಂತಹ ಮಹಾನ್ ವ್ಯಕ್ತಿ ಅರಸು ಅವರು, ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅನೇಕ ಸವಾಲು ಹಾಗೂ ವಿರೋಧಗಳನ್ನು ಎದುರಿಸಿದರೂ ಹಿಂದುಳಿದ ವರ್ಗಗಳು ಸೇರಿದಂತೆ ನಾನಾ ವರ್ಗಗಳ ಅಭಿವೃದ್ಧಿಗೆ ಶ್ರಮಿಸಿದರು ಎಂದು ತಿಳಿಸಿದರು.
ಅರಸು ಹುಟ್ಟುಹಬ್ಬ ಆಚರಿಸುವುದು ವಿಶೇಷವಾಗಿದ್ದು, ಇವರು ಸಮಾಜಕ್ಕೆ ನೀಡಿದಂತಹ ಕೊಡುಗೆ ಅಪಾರ. ಭೂ ಸುಧಾರಣೆ, ವೃದ್ಧಾಪ್ಯ ವೇತನ, ಅನಿಷ್ಟ ದೇವದಾಸಿ ಪದ್ಧತಿಯನ್ನು ತೊಡೆದು ಹಾಕಲು ಶ್ರಮಿಸಿದ ಮಹಾನ್ ವ್ಯಕ್ತಿ ಎಂದು ಬಣ್ಣಿಸಿದರು.
ಜಿಲ್ಲೆಯಲ್ಲಿ ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಕಚೇರಿ ಎಲ್ಲಿದೆ ಎಂಬ ಮಾಹಿತಿ ಯಾರಿಗೂ ಸರಿಯಾಗಿ ಗೊತ್ತಿಲ್ಲ. ಈ ಬಗ್ಗೆ ಸಂಬಂಧಪಟ್ಟಣ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಬೇಕು ಹಾಗೂ ದೇವರಾಜ ಅರಸು ಅವರ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪುವಂತಾಗಬೇಕು ಎಂದು ಹೇಳಿದರು.
ಸರ್ವರಿಗೂ ಸಮಬಾಳು ಮತ್ತು ಸಮಪಾಲು: ಶಾಸಕ ಕೆ.ಎಂ.ಶಿವಲಿಂಗೇಗೌಡ ಮಾತನಾಡಿ, ಭೂಮಾಲೀಕತ್ವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ವರಿಗೂ ಸಮಬಾಳು ಮತ್ತು ಸಮಪಾಲು ಎಂಬ ನೀತಿಯ ಮೂಲಕ ಧೈರ್ಯದಿಂದ ಭೂ ಸುಧಾರಣೆ ಜಾರಿಗೆ ತಂದ ಯುಗಪುರುಷ ಅರಸು ಅವರಾಗಿದ್ದಾರೆ ಎಂದರು.
ಹಿಂದುಳಿದವರು, ದಲಿತರು ಸೇರಿದಂತೆ ಸಮಾಜದ ಎಲ್ಲಾ ವರ್ಗಗಳನ್ನು ಆರ್ಥಿಕವಾಗಿ ಮೇಲೆತ್ತುವಂತಹ ಪ್ರಾಮಾಣಿಕ ಪ್ರಯತ್ನವನ್ನು ಅರಸು ಮಾಡಿದರು. ಸಮಾಜದಲ್ಲಿ ಆರ್ಥಿಕ ಸಂಕಷ್ಟದ ವಿರುದ್ಧವಾಗಿ ದೃಢ ನಿರ್ಧಾರ ಕೈಗೊಂಡು, ಆರ್ಥಿಕ ಸಂಕಷ್ಟದಲ್ಲಿದ್ದ ಸುಮಾರು 33ಕ್ಕೂ ಹೆಚ್ಚು ಸಮುದಾಯದವರ ಪರವಾಗಿ ಕೆಲಸ ಮಾಡಿ ಆರ್ಥಿಕ ನೀತಿ ಜಾರಿಗೆ ತಂದ ಕೀರ್ತಿ ಅರಸು ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ ಮಾತನಾಡಿ, ದೇವರಾಜ್ ಅರಸು ನೀಡಿದ ಕೊಡುಗೆಯನ್ನು ಸ್ಮರಿಸುವಂತಹ ಅವಶ್ಯಕತೆ ಇದೆ. ಕೇವಲ ಅವರ ಜನ್ಮ ದಿನದಂದು ಮಾತ್ರ ನೆನಸಿಕೊಳ್ಳದೆ ಅವರ ತತ್ವ ಆದರ್ಶ ಗುಣಗಳನ್ನು ಮನದಟ್ಟು ಮಾಡಿಕೊಂಡು ಸಮಾಜದ ನೂನ್ಯತೆಯನ್ನು ತೊಡೆದು ಹಾಕಲು ಪ್ರತಿಯೊಬ್ಬರು ಮುಂದಾಗಬೇಕು ಎಂದು ತಿಳಿಸಿದರು.
1978 ರಲ್ಲಿ ಉಳುವವನೆ ಭೂ ಒಡೆಯ ಕಾನೂನು ಜಾರಿಗೆ ತಂದು ಸಾಮಾನ್ಯ ಜನರಿಗೂ ಭೂ ಮಾಲೀಕತ್ವ ನೀಡಿದರು. ನಿರುದ್ಯೋಗಿಗಳ ಸಮಸ್ಯೆ ಬಗೆಹರಿಸುವಲ್ಲಿ ಶ್ರಮಿಸಿದ ಅವರು, ಅವರಿಗೆ ನಿರುದ್ಯೋಗ ಭತ್ಯೆ ನೀಡುವ ವ್ಯವಸ್ಥೆ ತಂದರು. ತುಳಿತಕ್ಕೆ ಒಳಗಾದವರನ್ನು ಸಮಾಜದಲ್ಲಿ ಅರ್ಥಿಕವಾಗಿ, ಸಾಮಾಜಿಕವಾಗಿ ಮೇಲೆತ್ತಲು ಸಾಕಷ್ಟ ಶ್ರಮಿಸಿದರು ಎಂದರು.
ಸಮಾಜದಲ್ಲಿನ ನ್ಯೂನತೆ: ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಡಿ.ಜಿ.ಅಂಬಿಕಾ ರಾಮಣ್ಣ ಮಾತನಾಡಿ, ಹಿಂದುಳಿದವರಿಗೆ, ಬಡವರ ಅಭಿವೃದ್ಧಿಗೆ ಶ್ರಮಿಸಿದ ಮಹಾನ್ ವ್ಯಕ್ತಿ ಅರಸು ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸಿದ ಮೊದಲಿಗರು. ಸಾಮಾಜಿಕ ನ್ಯಾಯಪರವಾಗಿದ್ದ ಅವರು ಸಮಾಜದಲ್ಲಿನ ನ್ಯೂನತೆಗಳನ್ನು ತೊಡೆದು ಹಾಕಲು ಶ್ರಮಸಿದರು ಎಂದ ಅವರು, ಅರಸು ಎಂದಿಗೂ ಶ್ರೀಮಂತಿಕೆಯ ರಾಜಕೀಯ ಮಾಡಿದವರಲ್ಲ ಎಂದು ಹೇಳಿದರು.
ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಬಿಳಿ ಚೌಡಯ್ಯ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಶಂಕರ, ತಾಲೂಕು ಪಂಚಾಯ್ತಿ ಅಧ್ಯಕ್ಷೆ ಡಿ.ರತ್ನ ಹನುಮೇಗೌಡ, ಜಿಲ್ಲಾಧಿಕಾರಿ ವಿ.ಅನ್ಬುಕುಮಾರ್, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉಪೇಂದ್ರ ಪ್ರತಾಪಸಿಂಗ್, ಡಿ.ದೇವರಾಜು ಅರಸು ಮತ್ತು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಜಿಲ್ಲಾ ವ್ಯವಸ್ಥಾಪಕ ಬಿ.ಎನ್.ಕೃಷ್ಣಕುಮಾರ್, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ನಾಗೇಂದ್ರ, ಬಿಸಿಎಂ ಅಧಿಕಾರಿ ಡಾ.ಸಿ.ಕೆ.ಜಗದೀಶ್ಕುಮಾರ್ ಇತರರು ಇದ್ದರು.