ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಎಸ್‌ಡಿಎಂನಲ್ಲಿ ರಾಷ್ಟ್ರೀಯ ಕಾರ್ಯಾಗಾರ

Vishwanath S
Updated On : 21 Aug 2013, 12:45 pm

ಹಾಸನ: ಹಾಸನ ಮತ್ತು ಉಡುಪಿಯ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯಗಳ ರಸಶಾಸ್ತ್ರ ಮತ್ತು ಭೈಷಜ್ಯಕಲ್ಪನಾ ಸ್ನಾತಕೋತ್ತರ ವಿಭಾಗಗಳ ಸಂಯುಕ್ತಾಶ್ರದಲ್ಲಿ ನಗರದ ಎಸ್‌ಡಿಎಂ ಆಯುರ್ವೇದ ಕಾಲೇಜಿನಲ್ಲಿ ಆ. 30 ಹಾಗೂ 31ರಂದು ಶಾರಂಗಧರ-2013 ಎಂಬ ಎರಡು ದಿನಗಳ ರಾಷ್ಟ್ರಮಟ್ಟದ ಸಮ್ಮೇಳನ ಕಾರ್ಯಾಗಾರ ಏರ್ಪಡಿಸಲಾಗಿದೆ. ಆಯುರ್ವೇದ ಜೌಷಧ ತಯಾರಿಕಾ ವಿಜ್ಞಾನದಲ್ಲಿರುವ ಅವಕಾಶ ಮತ್ತು ಸವಾಲು ಈ ಕಾರ್ಯಾಗಾರದ ಪ್ರಮುಖ ಶೀರ್ಷಿಕೆ ಆಗಿದೆ. ಅಂತಾರಾಷ್ಟ್ರೀಯ ಮಟ್ಟದ ಪ್ರಸಿದ್ಧ ಆಯುರ್ವೇದ ತಜ್ಞ ಪ್ರೊ. ಎಸ್.ಎಸ್.ಸಾವರ್‌ಕರ್, ಡಾ. ಶೈಲೇಶ್ ನಾಡಕರ್ಣಿ, ಡಾ.ವಿಜಯ್‌ಸಿಂಗ್ ಚೌಹಾನ್, ಪ್ರೊ. ಶೋಭಾ ಹಿರೇಮಠ್, ಪ್ರೊ.ಎಸ್. ಆರ್.ಶೆಟ್ಟಿ, ಡಾ.ಬಿ ರವಿಶಂಕರ್ ಅತಿಥಿ ಉಪನ್ಯಾಸಕರಾಗಿದ್ದು, ಈ ರಾಷ್ಟ್ರೀಯ ಕಾರ್ಯಾಗಾರದಲ್ಲಿ ದೇಶಾದ್ಯಾಂತ 300ಕ್ಕೂ ಹೆಚ್ಚು ಯುವ ಆಯುರ್ವೇದ ವಿದ್ಯಾರ್ಥಿಗಳು ಮತ್ತು ವೈದ್ಯರು ಭಾಗವಹಿಸುತ್ತಾರೆ. ಹೆಚ್ಚಿನ ಮಾಹಿತಿಗೆ 08172-256460, 9019418001 ಸಂಪರ್ತಿಸಲು ಕೋರಲಾಗಿದೆ.
'ಎನ್‌ಎಸ್‌ಎಸ್ ವ್ಯಕ್ತಿತ್ವ  ವಿಕಸನಕ್ಕೆ ಸಹಕಾರಿ'
ಹಾಸನ: ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಎನ್‌ಎಸ್‌ಎಸ್ ಸಹಕಾರಿ ಎಂದು ಕೃಷ್ಣ ಪದವಿ ಪೂರ್ವ ಕಾಲೇಜಿನ  ಪ್ರಾಂಶುಪಾಲೆ  ವಿಜಯಲಕ್ಷ್ಮಿ ಅಭಿಪ್ರಾಯಪಟ್ಟರು. ಕಾಲೇಜಿನಲ್ಲಿ  ಏರ್ಪಡಿಸಿದ್ದ ಎನ್‌ಎಸ್‌ಎಸ್ ವಾರ್ಷಿಕ  ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದ ಅವರು ಎನ್‌ಎಸ್‌ಎಸ್ ಗಾಂಧೀಜಿ ಕಂಡ ಕನಸು ಎಂದರು.  ಸೇವಾಮನೋಭಾವಿದ್ದು ಬೇರೊಬ್ಬರು ತಮಗೋಸ್ಕರ ಗುಲಾಮಗಿರಿ ಮಾಡುವುದನ್ನು ವಿರೋಧಿಸುತ್ತಿದ್ದರು ಎನ್ನುತ್ತಾ ಗಾಂಧೀಜಿ ನಂದಿ ಬೆಟ್ಟಕ್ಕೆ ಭೇಟಿಕೊಟ್ಟ ಸಮಯದಲ್ಲಿ ಬೆಟ್ಟಕ್ಕೆ ಡೋಲಿಯಲ್ಲಿ ಹೋಗುವುದನ್ನು ತಿರಸ್ಕರಿಸಿದ್ದ ಸಂಗತಿಯನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಉಪನ್ಯಾಸಕ ಟಿ.ಎಂ.ಶಿವಶಂಕರಪ್ಪ, ಎಂ.ಜಿ.ಮಂಜುಳ, ಜಯ ಕುಮಾರ್‌ಕುದರಿ ಇದ್ದರು. ಉಪನ್ಯಾಸಕ ಟಿ.ಎಚ್. ಅಪ್ಪಾಜಿ ಗೌಡ ಎನ್‌ಎಸ್‌ಎಸ್ ಕುರಿತು ಮಾಹಿತಿ  ನೀಡಿ ಪ್ರತಿಜ್ಞಾವಿಧಿ ಬೋಧಿಸಿದರು. ಎಚ್.ಎಂ.ಉಮೇಶ್ ಸ್ವಾಗತಿಸಿದರು. ಎಚ್.ಎಸ್. ಶ್ರೀನಿವಾಸ್ ವಂದಿಸಿದರು.
ರಸ್ತೆಯ ಗುಂಡಿಗಳಿಗೆ ಮಣ್ಣು ತುಂಬಿಸಿದ ಜನತೆ
ಆಲೂರು: ಗುಂಡಿಮಯ ರಸ್ತೆಗಳಿಂದ ಬೇಸತ್ತ ಪಟ್ಟಣದ ಕೆಇಬಿ ಸರ್ಕಲ್ ನಿವಾಸಿಗಳು ಗುಂಡಿಗಳಿಗೆ ಜೆಸಿಬಿ ಮೂಲಕ ಮಂಗಳವಾರ ಮಣ್ಣು ಹಾಕಿಸಿದರು. ಕೆಇಬಿ ಸರ್ಕಲ್ ರಸ್ತೆ ಸಂಪೂರ್ಣ ಹಾಳಾಗಿದ್ದು, ಕನಿಷ್ಠ ಒಂದೊಂದು ಅಡಿ ಆಳದ ಗುಂಡಿಗಳಿದ್ದವು. ಪ್ರತಿ ದಿನ ಒಬ್ಬರಾದರೂ ಈ ಗುಂಡಿಗಳಲ್ಲಿ ಬಿದ್ದು ಗಂಭೀರವಾಗಿ ಗಾಯಗೊಳ್ಳುತ್ತಿದ್ದರು.
ಈ ರಸ್ತೆ ನಿರ್ಮಾಣಕ್ಕೆ ಶಾಸಕರು ಗುದ್ದಲಿ ಪೂಜೆ ನೆರವೇರಿಸಿ ತಿಂಗಳುಗಳೇ ಕಳೆದಿದ್ದು ಕಾಮಗಾರಿ ಆರಂಭವಾಗುವ ಯಾವುದೇ ಲಕ್ಷಣಗಳು ಕಾಣಿಸಲಿಲ್ಲ. ಜತೆಗೆ ಸಂಬಂಧಿಸಿದ ಯಾರೂ ಈ ಬಗ್ಗೆ ತಲೆ ಕೆಡಿಸಿಕೊಳ್ಳದ ಕಾರಣ ಬೇಸತ್ತ ನಿವಾಸಿಗಳು ತಾವೇ ಸ್ವತ: ಗುಂಡಿಗಳಿಗೆ ಜೆಸಿಬಿ ಯಂತ್ರದ ಮೂಲಕ ಮಣ್ಣು ತುಂಬಿಸಿದರು.
ರಂಗೇಗೌಡ ಅಣತಿ ಗ್ರಾಪಂ ಉಪಾಧ್ಯಕ್ಷ
ಚನ್ನರಾಯಪಟ್ಟಣ: ತಾಲೂಕಿನ ಬಾಗೂರು ಹೋಬಳಿ ಅಣತಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾಗಿ ರಂಗೇಗೌಡ ಆಯ್ಕೆಯಾಗಿದ್ದಾರೆ. ನಾಗೇಶ್ ಅವರ ರಾಜಿನಾಮೆಯಿಂದ ತೆರವುಗೊಂಡಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ರಂಗೇಗೌಡ ಅವರು ಅವಿರೋಧವಾಗಿ ಆಯ್ಕೆಯಾದರು. ಶಾಸಕ ಸಿ.ಎನ್.ಬಾಲಕೃಷ್ಣ ಅಭಿನಂದಿಸಿದರು.
ಮಹಿಳಾ ಕಾಲೇಜಿಗೆ ಲೋಕಾ ಎಸ್ಪಿ ಭೇಟಿ
ಹಾಸನ: ನಗರದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಮಂಗಳವಾರ ಜಿಲ್ಲಾ ಲೋಕಾಯುಕ್ತ ಎಸ್ಪಿ ವೇದಮೂರ್ತಿ ದಿಢೀರ್ ಭೇಟಿ ನೀಡಿ, ದಾಖಲೆ ಪರಿಶೀಲನೆ ನಡೆಸಿದರು.
  ಕಾಲೇಜಿನ ಅಧ್ಯಾಪಕ ಹಾಗೂ ಸಿಬ್ಬಂದಿ ಹಾಜರಾತಿ ಪುಸ್ತಕ, ಕಾಲೇಜಿನಲ್ಲಿರುವ ವಿದ್ಯಾರ್ಥಿಗಳ ಮಾಹಿತಿ ಸೇರಿದಂತೆ ಕಾಲೇಜಿನ ಎಲ್ಲಾ ದಾಖಲಾತಿಗಳನ್ನು ಪರಿಶೀಲಿಸಿದರು. ನಂತರ ಕಾಲೇಜಿನ ಎಲ್ಲಾ ವಿಭಾಗಗಳಿಗೂ ಭೇಟಿ ನೀಡಿದ ಅವರು ವಿಭಾಗಗಳ ಮುಖ್ಯಸ್ಥರಿಂದ ಮಾಹಿತಿ ಪಡೆದುಕೊಂಡರು.
ಬೀದಿ ದೀಪ ವ್ಯವಸ್ಥೆಗೆ ಗ್ರಾಮಸ್ಥರ ಒತ್ತಾಯ
ಹಾಸನ: ಹಲವು ತಿಂಗಳಿಂದ ಬೀದಿ ದೀಪದ ವ್ಯವಸ್ಥೆ ಇಲ್ಲದೆ ಜನರು ಓಡಾಡಲು ಪರಿತಪಿಸುವಂತಾಗಿದೆ ಎಂದು  ಶ್ರೀರಾಮದೇವರಕಟ್ಟೆ ಗ್ರಾಮದ ಹೊಸ ಬಡಾವಣೆ ನಿವಾಸಿ ನಿವೃತ್ತ ಅಧಿಕಾರಿ ಕೆ.ಪಿ. ಕುಮಾರಸ್ವಾಮಿ ಆರೋಪಿಸಿದ್ದಾರೆ.
  ಗ್ರಾಮದ ಬಡಾವಣೆಯು ಹೊಳೆನರಸೀಪುರ ತಾ. ಕಟ್ಟೆಬೆಳಗುಲಿ ಗ್ರಾಮ ಪಂಚಾಯ್ತಿ  ವ್ಯಾಪ್ತಿಗೆ ಸೇರಿದ್ದು  ಈ ಸಂಬಂಧ ಗ್ರಾಮಸ್ಥರು ಹಲವು ಬಾರಿ ಗ್ರಾಮಪಂಚಾಯಿತಿ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಬೀದಿ ದೀಪದ ವ್ಯವಸ್ಥೆ ಕಲ್ಪಿಸದೆ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ದೂರಿದ್ದಾರೆ.
ಊರಿನ ಪಕ್ಕದಲ್ಲಿಯೇ ಚಾನಲ್ ಹರಿಯುತ್ತಿದ್ದು ಕಾಲುವೆ ಪಕ್ಕದಲ್ಲಿಯೇ ಮನೆಗಳು ಇರುವುದರಿಂದ ಸರಿಯಾದ ರಸ್ತೆಯೂ ಇಲ್ಲದೇ, ಬೀದಿ ದೀಪದ ವ್ಯವಸ್ಥೆಯೂ ಕೂಡ ಇಲ್ಲದೆ ರಾತ್ರಿ ವೇಳೆ ಸಾರ್ವಜನಿಕರು ಹಾಗೂ ವಾಹನಗಳು ಸಂಚರಿಸಲು ಬಹಳ ತೊಂದರೆ ಅನುಭವಿಸುವಂತಾಗಿದೆ. ಇದುವರೆಗೂ ಅಧಿಕಾರಿಗಳು ನಮ್ಮ ಮನವಿಗೆ ಸ್ಪಂದಿಸಿಲ್ಲ ಎಂದು ಆಕ್ಷೇಪಿಸಿದ್ದಾರೆ.
ಪಾರ್ಶ್ವನಾಥ ತೀರ್ಥಂಕರರ ಮೋಕ್ಷ ಕಲ್ಯಾಣ
ಹಾಸನ: ನಗರದ ದೊಡ್ಡ ಬಸದಿ ರಸ್ತೆ ಬಳಿ ಇರುವ ಶ್ರೀ ವೀರವಾಣಿ ಮಂದಿರದಲ್ಲಿ  ಭಗವಾನ್ 1008 ಪಾರ್ಶ್ವನಾಥ ತೀರ್ಥಂಕರರ ಮೋಕ್ಷ ಕಲ್ಯಾಣ ಮಹೋತ್ಸವ ಅಂಗವಾಗಿ ಮುಕುಟ ಸಪ್ತಮಿ ವಿಶೇಷ  ಪೂಜಾ ಕಾರ್ಯಕ್ರಮಗಳು ನಡೆದವು. ನಗರಕ್ಕೆ ಪ್ರಥಮ ಬಾರಿಗೆ ಮಂಗಲ ಪ್ರವೇಶ ಮಾಡಿದ ಶಿವಮೊಗ್ಗ ಜಿಲ್ಲೆಯ ಶ್ರೀ ಕ್ಷೇತ್ರ ಲಕ್ಕವಳ್ಳಿ ಮೋಕ್ಷ ಜೈನ ಮಠದ ಪರಮಪೂಜ್ಯ ವೃಷಭಸೇನ ಭಟ್ಟಾರಕ ಸ್ವಾಮೀಜಿ ಪಾರ್ಶ್ವನಾಥ ತೀರ್ಥ್ಥಂಕರರಿಗೆ 108 ಕಳಸಗಳ ಜಲಾಭಿಷೇಕ ಮತ್ತು ಪಂಚಾಮೃತ ಅಭಿಷೇಕ ನೆರವೇರಿಸಿದರು. ಈ ಸಂಬಂಧ ನಾನಾ ಧಾರ್ಮಿಕ ಕಾರ್ಯಗಳನ್ನು ನಡೆಸಲಾಯಿತು. ಮುಕುಟ ಸಪ್ತಮಿ ಮಹೋತ್ಸವ ಸಮಿತಿ ಅಧ್ಯಕ್ಷರು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಇದ್ದರು.
ಪ್ರಾರ್ಥೇನಿಯಂ ಕಳೆ ನಿರ್ಮೂಲನಾ ಆಂದೋಲನ
ನುಗ್ಗೇಹಳ್ಳಿ:  ಹೋಬಳಿಯ ವಿರೂಪಾಕ್ಷಿಪುರ ಗ್ರಾಮದಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಪ್ಲಾಸ್ಟಿಕ್ ಹಾಗೂ ಪಾರ್ಥೇನಿಯಂ ಕಳೆ ನಿರ್ಮೂಲನಾ ಆಂದೋಲನಾವನ್ನು ಹಾಸನದ ಕೃಷಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದರು. ಶಾಲಾ ಮಕ್ಕಳು ಮತ್ತು ಶಿಬಿರಾರ್ಥಿಗಳು ಜೊತೆಗೂಡಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಘೋಷಣೆಗಳೊಂದಿಗೆ ಮೆರವಣಿಗೆ ನಡೆಸಿ, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿದ್ದ ಪ್ಲಾಸ್ಟಿಕ್ ಹಾಗೂ ಪಾರ್ಥೇನಿಯಂ ಗಿಡಗಳನ್ನು ಕಿತ್ತು ಸ್ವಚ್ಛಗೊಳಿಸಿದರು. ಗ್ರಾಪಂ ಉಪಾಧ್ಯಕ್ಷ ಯಲ್ಲಯ್ಯ, ಗ್ರಾಪಂ ಸದಸ್ಯರಾದ ಪಾರ್ವತಮ್ಮ, ಬಿಸಿಎಂ ವಸತಿ ನಿಲಯ ಪಾಲಕ ದೊಡ್ಡೇಗೌಡ ಇದ್ದರು.
ಸೆ. 2ಕ್ಕೆ ಮೈಸೂರು ವಿವಿ ಕ್ರಾಸ್‌ಕಂಟ್ರಿ ಸ್ಪರ್ಧೆ
ಮೈಸೂರು: ಮೈಸೂರು ವಿವಿ ದೈಹಿಕ ಶಿಕ್ಷಣ ವಿಭಾಗ ಹಾಗೂ ಹೊಳೆನರಸೀಪುರ ತಾಲೂಕಿನ ಪಡುವಲಹಿಪ್ಪೆ ಗ್ರಾಮದ ಎಚ್.ಡಿ. ದೇವೇಗೌಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಂಯುಕ್ತಾಶ್ರಯದಲ್ಲಿ ಸೆ. 2ರಂದು ಪಡುವಲಹಿಪ್ಪೆ ಗ್ರಾಮದಲ್ಲಿ ಮೈವಿವಿ ಅಂತರ ಕಾಲೇಜುಗಳ ಪುರುಷರ ಮತ್ತು ಮಹಿಳೆಯರ ಕ್ರಾಸ್‌ಕಂಟ್ರಿ ಸ್ಪರ್ಧೆ ಏರ್ಪಡಿಸಿದೆ.ಅಂದು ಬೆಳಗ್ಗೆ 6ಕ್ಕೆ ಯುವ ಮುಖಂಡ ಎಚ್.ಆರ್. ಪ್ರಜ್ವಲ್ ರೇವಣ್ಣ ಚಾಲನೆ ನೀಡಲಿದ್ದು, ಪ್ರಾಂಶುಪಾಲ ಡಾ.ಜಿ.ಡಿ. ನಾರಾಯಣ ಅಧ್ಯಕ್ಷತೆ ವಹಿಸುವರು. ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಸಿ. ಕೃಷ್ಣ, ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಪಿ.ಜಿ. ಬಸವೇಗೌಡ, ಜಿಪಂ ಸದಸ್ಯ ಎಚ್. ಎನ್. ದೇವೇಗೌಡ, ಜಿ.ಪಿ. ಯೋಗೇಶ ಭಾಗವಹಿಸುವರು. ಬೆಳಗ್ಗೆ 9.30ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಸ್ಪರ್ಧಾ ವಿಜೇತರಿಗೆ ಮಾಜಿ ಸಚಿವ ಎಚ್.ಡಿ. ರೇವಣ್ಣ ಬಹುಮಾನ ವಿತರಿಸುವರು. ಕಾಲೇಜು ಶಿಕ್ಷಣ ಇಲಾಖೆಯ ಹೆಚ್ಚುವರಿ ನಿರ್ದೇಶಕ ಎಚ್.ಕೆ. ಕುಮಾರರಾಜ ಅರಸ್, ತಾಪಂ ಸದಸ್ಯೆ ಪುಷ್ಪ ಗೌಡೇಗೌಡ, ಗ್ರಾಪಂ ಅಧ್ಯಕ್ಷೆ ಲಕ್ಷ್ಮೀ ರಂಗಸ್ವಾಮಿ ಭಾಗವಹಿಸುವರು. ರಾಷ್ಟ್ರೀಯ ಖೋಖೋ ಆಟಗಾರ ಸಿ.ಪಿ ಆದರ್ಶ ಅವರನ್ನು ಸನ್ಮಾನಿಸಲಾಗುತ್ತದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement