ಶಂಕರ ಸೇವಾ ಸಮಿತಿ ಟ್ರಸ್ಟ್‌ನಿಂದ ಉಪಾಕರ್ಮ
ಹಾಸನ: ಕಣಕಟ್ಟೆ ಗ್ರಾಮದಲ್ಲಿ ಶಂಕರ ಸೇವಾ ಸಮಿತಿ ಟ್ರಸ್ಟ್‌ನಿಂದ ಮಂಗಳವಾರ ಋಗ್ ಹಾಗೂ ಯಜುರ್ ಉಪಾಕರ್ಮ ನಡೆಯಿತು. ಶಂಕರ ಭವನದಲ್ಲಿ ಲಕ್ಷೀನರಸಿಂಹ ಶಾಸ್ತ್ರಿ ನೇತೃತ್ವದಲ್ಲಿ ಪುಣ್ಯಾಹ ವಾಚನ, ಗಣಪತಿ ಪೂಜೆ, ಪಂಚಾಮೃತ ಅಭಿಷೇಕ, ಸಪ್ತಋಷಿ ಮತ್ತು ನವಋಷಿ ಪೂಜೆ, ಗಾಯತ್ರಿ ಹೋಮ ಮುಂತಾದ ಕಾರ್ಯಕ್ರಮ ನಡೆಯಿತು.
ಗಾಯತ್ರಿ ಪ್ರತಿಪತ್ ಅಂಗವಾಗಿ ಆಯೋಜಿಸಲಾಗಿದ್ದ ಹೋಮದ ಪೂರ್ಣಾಹುತಿಯನ್ನು ಶಂಕರ ಸೇವಾ ಸಮಿತಿ ಕಾರ್ಯದರ್ಶಿ ಕೆ.ಎ.ನಾಗೇಶರಾವ್ ನಡೆಸಿಕೊಟ್ಟರು. ಮಹಾಮಂಗಳಾರತಿ ನಂತರ ವಿಪ್ರವೃಂದದಿಂದ ಬರದಿಂದ ತತ್ತರಿಸಿರುವ ರೈತಾಪಿ ವರ್ಗದ ಪರವಾಗಿ ಪರ್ಜನ್ಯಜಪ ಸಹ ನಡೆಯಿತು. ಕಾಕತಾಳೀಯವೆಂಬಂತೆ ಧಾರ್ಮಿಕ ಕಾರ್ಯಕ್ರಮದ ಸಂದರ್ಭದಲ್ಲಿ ತುಂತುರು ಮಳೆ ಬಂದು ನೆರೆದ ಭಕ್ತರಲ್ಲಿ ಸಂತಸ ಮೂಡಿತು. ಸಮಿತಿಯಿಂದ ಪ್ರಸಾದ ವಿತರಿಸಲಾಯಿತು. ರವಿ, ಆನಂದ್, ಶಶಿಕುಮಾರ್, ನಾರಾಯಣಸ್ವಾಮಿ ಇತರರು ಇದ್ದರು.
ದೇವಸ್ಥಾನ ನೆಮ್ಮದಿಯ ತಾಣ: ಶಾಸಕ ಬಾಲಕೃಷ್ಣ
ಚನ್ನರಾಯಪಟ್ಟಣ: ದೇವಸ್ಥಾನಗಳು ಮನಸ್ಸಿಗೆ ನೆಮ್ಮದಿ ಹಾಗೂ ಶಾಂತಿ ನೀಡುವುದರಿಂದ ಜನತೆ ದೇವಸ್ಥಾನಗಳ ನಿರ್ಮಾಣದತ್ತ ಮುಂದಾಗುತ್ತಿದ್ದಾರೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದರು.
ತಾಲೂಕಿನ ಉತ್ತೇನಹಳ್ಳಿಯಲ್ಲಿ ಶ್ರೀ ಆಂಜನೇಯಸ್ವಾಮಿ ದೇವಸ್ಥಾನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು ನೆಮ್ಮದಿ ಶಾಂತಿಗಾಗಿ ದೇವಸ್ಥಾನಗಳು ಅತ್ಯವಶ್ಯಕ ಸರಿ. ಆದರೆ ಬೀದಿಗೊಂದು ದೇವಸ್ಥಾನ ನಿರ್ಮಿಸಲು ಜನತೆ ಮುಂದಾಗಿದ್ದಾರೆ. ದೇವರೊಬ್ಬನೆ ನಾಮ ಹಲವು ಎಂದು ತಿಳಿದು ಗ್ರಾಮದಲ್ಲಿ ಒಂದೇ ದೇವಾಲಯ ನಿರ್ಮಿಸಿ ಅದರಲ್ಲಿಯೇ ಎಲ್ಲಾ ಧಾರ್ಮಿಕ ಕಾರ್ಯಗಳನ್ನು ನಡೆಸಬೇಕು ಎಂದು ಹೇಳಿದರು.
ಶ್ರವಣಬೆಳಗೊಳದಿಂದ ಗ್ರಾಮಕ್ಕೆ ಸಂಪರ್ಕ ಕಲ್ಪಿಸಲು ಎರಡು ಹಂತದಲ್ಲಿ ರಸ್ತೆ ನಿರ್ಮಾಣಕ್ಕೆ ಸದ್ಯದಲ್ಲಿಯೇ ಚಾಲನೆ ನೀಡಲಾಗುವುದು ಎಂದು ಇದೇ ಸಂದರ್ಭದಲ್ಲಿ ಶಾಸಕರು ತಿಳಿಸಿದರು.
ರೋಟರಿ ಮಿಡ್‌ಟೌನ್‌ನಿಂದ ಸ್ವಾತಂತ್ರ್ಯೋತ್ಸವ
ಹಾಸನ: ನಗರ ರೋಟರಿ ಮಿಡ್‌ಟೌನ್‌ನಿಂದ ಕಾಮಧೇನು ವೃದ್ಧಾಶ್ರಮದಲ್ಲಿ ಆಶ್ರಮ ವಾಸಿಗಳ ಜೊತೆ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಧ್ವಜಾರೋಹಣ ಆಶ್ರಮದ ಉಪಾಧ್ಯಕ್ಷ ರಾಜಣ್ಣ ನೇರವೇರಿಸಿದರು. ಅಧ್ಯಕ್ಷ ಡಾ.ಗುರುರಾಜ ಹೆಬ್ಬಾರ್ ಮುಖ್ಯ ಅತಿಥಿಗಳಾಗಿದ್ದರು. ರೋಟರಿ ಮಿಡ್‌ಟೌನ್ ಅಧ್ಯಕ್ಷ ಆರ್.ಸತ್ಯನಾರಾಯಣ ಅಧ್ಯಕ್ಷತೆ ವಹಿಸಿದ್ದರು. ಪ್ರೊ. ಚಂದ್ರಶೇಖರ್ ಪ್ರಗತಿ ಮತ್ತು ಕೈಗಾರೀಕರಣದ ಬಗ್ಗೆ ಮಾತನಾಡಿದರು. ಸ್ವಾತಂತ್ರ್ಯೋತ್ಸವ ಬಗ್ಗೆ ರೋಟರಿ ಕಾರ್ಯದರ್ಶಿ ಎನ್.ವಿಶ್ವನಾಥ್ ಮಾತನಾಡಿದರು. ಆಶ್ರಮವಾಸಿಗಳ ಜೊತೆ ಉಪಾಹಾರ ಏರ್ಪಡಿಸಲಾಗಿತ್ತು. ಆಶ್ರಮದ ಮಕ್ಕಳ ಆರೋಗ್ಯ ತಪಾಸಣೆಯನ್ನು ಮಕ್ಕಳ ತಜ್ಣ ಡಾ. ದಿನೇಶ್.ಬಿ. ಕಬ್ಳಿಗೆರೆ ನಡೆಸಿಕೊಟ್ಟರು. ಡಾ. ಡಿ.ಎಸ್.ವಿಜಯಕುಮಾರ್, ಕಿರಣ್, ಭಾರತಿ ಸತ್ಯನಾರಾಯಣ್ ಇತರರು ಭಾಗವಹಿಸಿದ್ದರು.
ಚಿಕಿತ್ಸೆಗೆ ನೆರವು :
ದಲಿತ ಸಂಘಟನೆ ಮನವಿ
ಹಾಸನ: ಇತ್ತೀಚೆಗೆ ನಡೆದ ಸಿಲಿಂಡರ್ ಸ್ಫೋಟ ಘಟನೆಯಲ್ಲಿ ನಾಲ್ವರು ಮೃತಪಟ್ಟು, ಒಬ್ಬ ಸಾವು ಬದುಕಿನ ಹೋರಾಟ ನಡೆಸುತ್ತಿದ್ದು, ಆತನ ಚಿಕಿತ್ಸೆಗೆ ನೆರವು ನೀಡುವಂತೆ ದಲಿತ ಸಂಘಟನೆಗಳು ಮನವಿ ಮಾಡಿವೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಸಿದ್ದಾರ್ಥ ಕೋ ಆಪರೇಟಿವ್ ಸೊಸೈಟಿ ನಿರ್ದೇಶಕ ದೇವರಾಜ್ ಮಾತನಾಡಿ, ಹೊಳೆನರಸೀಪುರ ತಾಲೂಕಿನ ಜನತಾ ಕಾಲೋನಿಯ ಗೋವಿಂದಯ್ಯ ಎಂಬುವರ ಪುತ್ರ ಮೂರ್ತಿ ಸೇರಿದಂತೆ ಕುಟುಂಬದ ನಾಲ್ವರು ಮೃತಪಟ್ಟಿದ್ದು, ಒಬ್ಬ ತೀವ್ರ ಸುಟ್ಟ ಗಾಯಗಳಿಂದ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದರು.
ದಲಿತ ಕುಟುಂಬಕ್ಕೆ ಸೇರಿದವರಾಗಿದ್ದು, ಕೂಲಿಯಿಂದ ಜೀವನ ನಡೆಸುತ್ತಿದ್ದರು. ಕುಟುಂಬದ ಯಜಮಾನ ಮೂರ್ತಿ, ಪತ್ನಿ ಲಕ್ಷ್ಮಿ, ಮಗ ಹರ್ಷಿತ್, ಪುತ್ರಿ ರಕ್ಷಿತಾ ಸಾವನ್ನಪ್ಪಿದ್ದಾರೆ. ಉಳಿದಿರುವ ಕೊನೆಯ ಪುತ್ರ ರವಿಕುಮಾರ್ ತೀವ್ರ ಗಾಯಗೊಂಡು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದು, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಲಾಗಿದೆ.
ಚಿಕಿತ್ಸೆಗೆ ನೆರವು ನೀಡುವಂತೆ ಮನವಿ ಮಾಡಿದ್ದು, ಸಹಾಯ ಮಾಡವವರು ಎಸ್‌ಬಿಐ ಉಳಿತಾಯ ಖಾತೆ ಸಂಖ್ಯೆ 30581558968 (ಹೊಳೆನರಸೀಪುರ ಬ್ರಾಂಚ್) ಹಣವನ್ನು ಪಾವತಿಸಬಹುದಾಗಿದೆ ಎಂದರು. ಈ ಸಂದರ್ಭದಲ್ಲಿ ಶಿವಣ್ಣ, ದಸಾಪ ಅಧ್ಯಕ್ಷ ಹೆತ್ತೂರು ನಾಗರಾಜು, ಬ್ಯಾಕರವಳ್ಳಿ ವೆಂಕಟೇಶ್ ಇತರರು ಇದ್ದರು.
ಯುವತಿ ನಾಪತ್ತೆ
ಹೊಳೆನರಸೀಪುರ: ಚಿಟ್ಟನಹಳ್ಳಿಬೀದಿ ವಾಸಿ ಪರಮೇಶ ಎಂಬುವರ ಪುತ್ರಿ ಮಂಜುಳ (22) ಮನೆಯಿಂದ ಮೈಸೂರಿಗೆ ಐಸಿಐಸಿಐ ಬ್ಯಾಂಕ್ ಸಂದರ್ಶನಕ್ಕೆ ಹೋಗುವುದಾಗಿ ಹೇಳಿ ಹೋದವಳು ವಾಪಸ್ ಮನೆಗೆ ಬಾರದೆ ಕಾಣೆಯಾಗಿದ್ದಾರೆ.ಚಹರೆ 5.6 ಅಡಿ ಎತ್ತರ, ಕೋಲು ಮುಖವಿದ್ದು, ಕನ್ನಡ ಮಾತನಾಡುತ್ತಾಳೆಎಂದು ತಂದೆ ಪರಮೇಶ ನಗರ ಠಾಣೆಗೆ ದೂರು ನೀಡಿದ್ದಾರೆ.