2 ನೇ ದಿನಕ್ಕೆ ದಿನಗೂಲಿ ನೌಕರರ ಪ್ರತಿಭಟನೆ
ಕ.ಪ್ರ.ವಾರ್ತೆ , ಹಾಸನ , ಆ 21
ಕನಿಷ್ಠ ವೇತನ ಸೇರಿ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಸರ್ಕಾರಿ ಅರಣ್ಯ ಇಲಾಖೆ ದಿನಗೂಲಿ ನೌಕರರ ಸಂಘ ಆಶ್ರಯದಲ್ಲಿ ಅರಣ್ಯ ಇಲಾಖೆ ಪರಿಶಿಷ್ಟ ಜಾತಿ ಮತ್ತು ಪಂಗಡ ವರ್ಗಗಳ ದಿನಗೂಲಿ ನೌಕರರು ನಡೆಸುತ್ತಿರುವ ಅನಿದಿರ್ಷ್ಟಾವಧಿ ಪ್ರತಿಭಟನೆ ಬುಧವಾರ ಎರಡನೇ ದಿನಕ್ಕೆ ಕಾಲಿಟ್ಟಿದೆ.
ಪ್ರತಿಭಟನಕಾರರು ಅರಣ್ಯ ಭವನದ ಮುಂದೆ ಧರಣಿಯನ್ನು ಮುಂದುವರಿಸಿದ್ದು, ತಮ್ಮ ಬೇಡಿಕೆಗಳು ಈಡೇರಿಕೆಯಾಗುವವರೆಗೂ ಪ್ರತಿಭಟನೆ ಮುಂದುವರೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಹಾಸನ ವಿಭಾಗದ ಸಕಲೇಶಪುರ, ಅರಕಲಗೂಡು, ಹೊಳೆನರಸೀಪುರ ಹಾಗೂ ತುಮಕೂರು ವಿಭಾಗದ ಕುಣಿಗಲ್, ಹುಲಿಯೂರು ದುರ್ಗ ಹಾಗೂ ಸಾಮಾಜಿಕ ವಲಯದ ನೌಕರರ ಬೇಡಿಕೆಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗನಮಕ್ಕೆ ತಂದರೂ ಉಪ ಅರಣ್ಯ ಸಂರಕ್ಷಣಾಧಿಕಾರಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಅಧಿಕಾರಿಗಳು ನೌಕರರ ಬೇಡಿಕೆಗಳನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ ಎಂದು ಆರೋಪಿಸಿದರು.
ಅರಕಲಗೂಡು, ಹೊಳೆನರಸೀಪುರ, ಬೇಲೂರು, ಹಳೇಬೀಡು ವಲಯಗಳಲ್ಲಿ ಕಳೆದ ಹತ್ತು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿರುವ ಪಿಟಿ ಕ್ಯಾಶ್ ಪೇಮೆಂಟ್‌ನ್ನು ನೌಕರರಿಗೆ ಬ್ಯಾಂಕ್ ಮುಖೇನ ಸಂಬಳವನ್ನು ಪಾವತಿಸುತ್ತಿಲ್ಲ. ಹೊಳೆನರಸೀಪುರ ವಲಯದಲ್ಲಿ ಪ್ರತಿ ನೌಕರನಿಗೆ 2 ಸಾವಿರ ರು. ಅರಕಲಗೂಡು ವಲಯದಲ್ಲಿ 3 ಸಾವಿರ ರು.ವೇತನ ನೀಡಲಾಗುತ್ತಿದೆ. ಸುಳ್ಳು ಮಾಹಿತಿ ನೀಡಿ ವಂಚಿಸಲಾಗುತ್ತಿದೆ. ಈ ಪದ್ಧತಿಯನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯದ ಎಲ್ಲ ವೃತ್ತಗಳಲ್ಲಿ ಸರ್ಕಾರಿ ಆದೇಶದಂತೆ 10 ವರ್ಷದ ಪಿಸಿಪಿ ಸೇವೆಸಲ್ಲಿಸಿರುವ ನೌಕರರಿಗೆ ಏ.1, 2009ರಿಂದಲೇ ಜಾರಿಗೆ ಬರುವಂತೆ 1 ಸಾವಿರ ರು.ಹೆಚ್ಚುವರಿ ವೇತನ ಮತ್ತು ಏ.1, 2012ರಿಂದ 10 ವರ್ಷ ಪೂರೈಸಿರುವ ನೌಕರರಿಗೆ 1 ಸಾವಿರ ರು.ಪಾವತಿ ಮಾಡಲು ಆದೇಶವಿದೆ. ಆದರೆ ಹಾಸನ ವೃತ್ತದ ವ್ಯಾಪ್ತಿಯಲ್ಲಿ ಹೆಚ್ಚಿನ ಪಿಸಿಪಿ ನೌಕರರಿಗೆ ಈ ಸೌಲಭ್ಯ ಸಿಕ್ಕಿಲ್ಲ ಮತ್ತು ಹತ್ತು ವರ್ಷ ಪೂರೈಸಿರುವ ನೌಕರರ ಮಾಹಿತಿಯನ್ನು ವಲಯ ಕಚೇರಿಗಳಿಂದ ಕಳುಹಿಸಿಲ್ಲ ಎಂದು ಆರೋಪಿಸಿದರು. ಆದ್ದರಿಂದ ದಿನಗೂಲಿ ನೌಕರರ ಬೇಡಿಕೆಗಳನ್ನು ಈಡೇರಿಸುವಂತೆ ಪಟ್ಟು ಹಿಡಿದರು.
ಪ್ರತಿಭಟನೆಯಲ್ಲಿ ರಾಜ್ಯಾಧ್ಯಕ್ಷ ಎ.ಎಂ.ನಾಗರಾಜು, ಪ್ರಧಾನ ಕಾರ್ಯದರ್ಶಿ ಗಂಗಾಧರಯ್ಯ, ಖಜಾಂಚಿ ಜಿ.ಕೃಷ್ಣ, ಬಿ.ವಿ.ನಾಗರಾಜು, ಸಂಘಟನಾ ಕಾರ್ಯದರ್ಶಿ ಜಯರಾಮು, ನಿರ್ದೇಶಕ ರುದ್ರಪ್ಪ ಹಾಗೂ ಇತರರು ಇದ್ದರು.