ಕುಡಿವ ನೀರು ಅಸಮರ್ಪಕ ಪೂರೈಕೆ: ಪ್ರತಿಭಟನೆ
ಕ.ಪ್ರ. ವಾರ್ತೆ, ಅರಸೀಕೆರೆ , ಆ. 21
ಕುಡಿಯುವ ನೀರಿಗೆ ಹಾಹಾಕಾರ ಪರಿಸ್ಥಿತಿ ಇದ್ದರೂ ಅದನ್ನು ಪರಿಹರಿಸುವಲ್ಲಿ ವಿಫಲವಾಗಿರುವ ತಾಲೂಕು ಆಡಳಿತದ ಕ್ರಮ ಖಂಡಿಸಿ ಜನಪ್ರತಿನಿಧಿಗಳೊಂದಿಗೆ ನಾಗರಿಕರು ಬಾಣಾವರ ಗ್ರಾಪಂ ಕಚೇರಿ ಎದುರು ಇತ್ತೀಚೆಗೆ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನ ಬಾಣಾವರ ಗ್ರಾ.ಪಂ. ವ್ಯಾಪ್ತಿಯಲ್ಲಿ ಕಳೆದ ಮೂರ್ನಾಲ್ಕು ತಿಂಗಳುಗಳಿಂದಲೂ ಸಮರ್ಪಕ ಕುಡಿಯುವ ನೀರು ಪೂರೈಸಲು ವಿಫಲವಾಗಿದ್ದರಿಂದ ತಕ್ಷಣವೇ ಕುಡಿಯುವ ನೀರು ಒದಗಿಸುವಂತೆ ಒತ್ತಾಯಿಸಿ ಧರಣಿ ನಡೆಸಿದರು.
ಧರಣಿ ನಿರತರನ್ನುದ್ದೇಶಿಸಿ ಗ್ರಾಪಂ ಅಧ್ಯಕ್ಷೆ ಅಂಬಿಕಾ ರಮೇಶ್ ಮಾತನಾಡಿ, ತಾವು ಕಾಂಗ್ರೆಸ್‌ನಿಂದ ಗ್ರಾಪಂ ಅಧ್ಯಕ್ಷರಾಗಿದ್ದಾರೆಂದು ಭಾವಿಸಿರುವುದು ಈ ಎಲ್ಲಾ ಸಮಸ್ಯೆಗಳ ಉದ್ಭವಕ್ಕೆ ಕಾರಣವಾಗಿದೆ. ಸಮಸ್ಯೆಯ ಬಗ್ಗೆ ಹತ್ತಾರು ಬಾರಿ ಸಭೆ ಕರೆದರೂ ಸಮರ್ಪಕ ಬೆಂಬಲ ದೊರೆತಿಲ್ಲ. ಆದರೆ ತಾಲೂಕು ದಂಡಾಧಿಕಾರಿಗಳು ಈ ಹಿಂದೆ ಸಮಸ್ಯೆ ಪರಿಹರಿಸುವುದಾಗಿ ಭರವಸೆ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಸಮಸ್ಯೆ ಇತ್ಯರ್ಥ್ಥವಾಗುವವರೆಗೆ ಧರಣಿ ಕೈ ಬಿಡುವುದಿಲ್ಲವೆಂದು ಹೇಳಿದರು.
ತಾಪಂ ಸದಸ್ಯ ರವಿಶಂಕರ್ ಮಾತನಾಡಿ, ಪ್ರತಿ ತಾಪಂ ಸಾಮಾನ್ಯ ಸಭೆಯಲ್ಲಿಯೂ ಬಾಣಾವರ ಪಟ್ಟಣದಲ್ಲಿ ಎದುರಾಗಿರುವ ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವಂತೆ ಮನವಿ ಮಾಡಲಾಗಿದೆ. ಆದರೆ ಈವರೆಗೂ ಸಂಬಂಧಿಸಿದ ಜನಪ್ರತಿನಿಧಿಗಳಾಗಲಿ ಅಥವಾ ಅಧಿಕಾರಿಗಳಾಗಲಿ ಕಾರ್ಯ ಪ್ರವೃತ್ತವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡ ಲಿಕ್ನಿಚಂದ್, ಗ್ರಾಪಂ ಮಾಜಿ ಅಧ್ಯಕ್ಷ ಹಾಗೂ ಕೆಜೆಪಿ ಮುಖಂಡ ಶ್ರೀಧರ್, ಸತೀಶ್‌ಶೇಟ್, ಅಮರ್‌ನಾಥ್, ಸೇರಿದಂತೆ ನೂರಾರು ನಾಗರಿಕರು ಪಾಲ್ಗೊಂಡಿದ್ದರು.
ರಾಜಕೀಯ ಲೇಪನ: ಕುಡಿಯುವ ನೀರಿನ ವಿಷಯಕ್ಕೆ ಸಂಬಂಧಿಸಿದಂತೆ ಉದ್ಭವವಾಗಿರುವ ಸಮಸ್ಯೆ ನಿಧಾನಗತಿಯಲ್ಲಿ ರಾಜಕೀಯ ಬಣ್ಣ ಪಡೆದುಕೊಳ್ಳತೊಡಗಿದೆ. ಕಡಿಮೆ ಸದಸ್ಯರನ್ನು ಹೊಂದಿರುವ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಅಧ್ಯಕ್ಷರಾಗಿರುವುದು ಬಹುಸಂಖ್ಯಾತ ಸದಸ್ಯರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಅಪ್ಪ ಅಮ್ಮನ ಜಗಳದಲ್ಲಿ ಕೂಸು ಬಡವಾಯಿತು ಎಂಬ ಸ್ಥಿತಿ ಬಾಣಾವರ ಜನತೆಯದ್ದಾಗಿದೆ.