ಪತಿ ಜೀತಮುಕ್ತಿಗಾಗಿ ದೂರು ನೀಡಿದ್ದಕ್ಕೆ ಪತ್ನಿಗೆ ಹಿಂಸೆ
ಕ.ಪ್ರ.ವಾರ್ತೆ , ಹಾಸನ , ಆ.21
ಜೀತಗಾರನಾಗಿದ್ದ ಪತಿಯನ್ನು ಜೀತಮುಕ್ತಿಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದ್ದಕ್ಕಾಗಿ ಮಾನಸಿಕ ಹಾಗೂ ದೈಹಿಕವಾಗಿ ಹಿಂಸೆ ನೀಡಿ, ತನ್ನ ಪತಿಯನ್ನು ಊರು ಬಿಡುವಂತೆ ಮಾಡಿದ ಏಲಕ್ಕಿ ಅಂಗಡಿ ಮಾಲೀಕ ಚಂದ್ರಶೇಖರ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ನೊಂದ ಮಹಿಳೆ ಲತಾ ಎಂಬವರು ಜಿಲ್ಲಾಧಿಕಾರಿಗೆ ಮನವಿ ನೀಡಿದ್ದಾರೆ.
ಸಕಲೇಶಪುರ ಪಟ್ಟಣದ ಕುಶಾಲನಗರ ಬಡಾವಣೆಯ ವಾಸಿ ಬೆಳ್ಳಿಯಪ್ಪ ಎಂಬವರು ಕಳೆದ 3 ವರ್ಷಗಳಿಂದ ಏಲಕ್ಕಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಅವರು ತಮ್ಮ ವೇತನದಲ್ಲಿಯೇ ಸಾಲವನ್ನು ಸಂಪೂರ್ಣ ತೀರುವಳಿ ಮಾಡಿದ್ದಾರೆ. ಆದರೆ, ಸಾಲ ನೀಡಿದ್ದ ಸಂದರ್ಭದಲ್ಲಿ ನನ್ನ ಹಾಗೂ ನನ್ನ ಪತಿಯ ಸಹಿಯನ್ನು ಪಡೆದಿದ್ದರು. ಈಗ ಆ ದಾಖಲೆಯನ್ನು ತೋರಿಸಿ ನನ್ನ ಪತಿಗೆ ಕೆಲಸಕ್ಕೆ ಬಾರದಿದ್ದರೆ ದೂರು ನೀಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ಕಳೆದ 3 ತಿಂಗಳಿನಿಂದ ಪತಿ ಬೆಳ್ಳಿಯಪ್ಪ ಕೆಲಸಕ್ಕೆ ಹೋಗುತ್ತಿರಲಿಲ್ಲಿ. ಆದರೆ ಈಗ ಕಳೆದ 2 ದಿನಗಳಿಂದ ಪತಿ ನಾಪತ್ತೆಯಾಗಿದ್ದಾರೆ. ಈಗ ನನ್ನ ಬಳಿ ಬಂದು ಹಣವನ್ನು ತೀರಿಸುವಂತೆ ಹಿಂಸೆ ನೀಡುತ್ತಿದ್ದಾರೆ. ನನ್ನ ಪತಿಗೆ ಮಾನಸಿಕವಾಗಿ ಹಿಂಸೆ ನೀಡಿ ಊರು ಬಿಡುವಂತೆ ಮಾಡಿರುವ ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಬೆಳ್ಳಿಯಪ್ಪರ ಪತ್ನಿ ಲತಾ ಜಿಲ್ಲಾಧಿಕಾರಿಗೆ ಮನವಿ ನೀಡಿದ್ದಾರೆ.