ಪ್ರಿಯನೊಂದಿಗೆ ಸೇರಿ ಪತಿ ಕೊಲೆ; ಇಬ್ಬರೂ ಸೆರೆ
ಕ.ಪ್ರ.ವಾರ್ತೆ , ಚನ್ನರಾಯಪಟ್ಟಣ , ಆ.21
ತಾಲೂಕಿನ ದೊಡ್ಡೇರಿ ಕಾವಲು ಬಳಿ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿ ಆತನ ಗುರುತು ಕಾಣದಂತೆ ಪೆಟ್ರೋಲ್‌ನಿಂದ ಮೃತದೇಹ ಸುಟ್ಟುಹಾಕಿದ್ದ ಕೊಲೆಗಾರರನ್ನು ಚನ್ನರಾಯಪಟ್ಟಣ ಪೊಲೀಸರು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ತಾಲೂಕಿನ ನುಗ್ಗೇಹಳ್ಳಿ ಹೋಬಳಿ ದೊಡ್ಡೇರಿ ಗ್ರಾಮದ ಧನಂಜಯನ ಪತ್ನಿ ಆಶಾ ಅದೇ ಗ್ರಾಮದ ನಾಗೇಶ್ ಜತೆ ಅನೈತಿಕ ಸಂಬಂಧವಿಟ್ಟುಕೊಂಡಿದ್ದಾಳೆಂದು ವಿರೋಧಿಸಿದ ಆಶಾ ಪತಿ ಧನಂಜಯನನ್ನು ತನ್ನ ಪ್ರಿಯಕರನ ಜತೆ ಸೇರಿ ಕೊಲೆ ಮಾಡಿ ಸಿಕ್ಕಿಬಿದ್ದಿದ್ದಾರೆ.
ಧನಂಜಯ ತನ್ನ ಪತ್ನಿ ಆಶಾಳು ನಾಗೇಶ್ ಜತೆ ಸಂಬಂಧವಿಟ್ಟುಕೊಂಡಿದ್ದಳೆಂದು ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ. ಇದನ್ನು ಸಹಿಸದ ಆಶಾ ಆ.2ರಂದು ನಾಗೇಶ್ ಜತೆ ಸೇರಿ ಗಂಡನಿಗೆ ಮನೆಯಲ್ಲಿಯೇ ಮದ್ಯಪಾನ ಮಾಡಿಸಿ ಆತ ಪ್ರಜ್ಞಾಹೀನವಾದ ಸಂದರ್ಭದಲ್ಲಿ ಇಬ್ಬರೂ ಸೇರಿ ಕುತ್ತಿಗೆಗೆ ಟವಲ್‌ನಿಂದ ಬಿಗಿದು ಕೊಲೆ ಮಾಡಿದ್ದಾರೆ.
ಕೊಲೆ ಮಾಡಿದ ನಂತರ ಮೃತದೇಹವನ್ನು ದೊಡ್ಡೇರಿ ಕಾವಲು ಬಳಿಗೆ ಟ್ರ್ಯಾಕ್ಟರ್‌ನಲ್ಲಿ ತಂದು ದೇಹದ ಮೇಲೆ ಪೆಟ್ರೋಲ್ ಸುರಿದು ಗುರುತು ಸಿಗದ ರೀತಿಯಲ್ಲಿ ಬೆಂಕಿ ಹಾಕಿದ್ದಾರೆ.
ಪೆಟ್ರೋಲ್ ಹಾಕಿ ಸುಟ್ಟಿರುವ ಬಳಿ ಟ್ರ್ಯಾಕ್ಟರ್ ಚಕ್ರದ ಗುರುತು ಇರುವುದನ್ನು ಗಮನಿಸಿದ ಚನ್ನರಾಯಪಟ್ಟಣ ಸರ್ಕಲ್ ಇನ್‌ಸ್ಪೆಕ್ಟರ್ ಹಾಗೂ ಅವರ ತಂಡ ಸ್ಥಳೀಯ ವ್ಯಕ್ತಿಯಾಗಿರುವುದೆಂಬುದನ್ನು ತಿಳಿದು ಸುತ್ತಮುತ್ತಲಿನ ಗ್ರಾಮದಲ್ಲಿ ಕಾಣೆಯಾಗಿರುವ ವ್ಯಕ್ತಿಯ ಬಗ್ಗೆ ಅನುಮಾನಪಟ್ಟು ಹುಡುಕುವ ಸಂದರ್ಭದಲ್ಲಿ ಧನಂಜಯನು ಕಾಣೆಯಾಗಿರುವುದು ತಿಳಿದು ಆತನ ಕೊಲೆ ಪ್ರಕರಣವನ್ನು ಭೇದಿಸಿದ್ದಾರೆ ಎಂದು ಜಿಲ್ಲಾ ಎಸ್ಪಿ ರವಿ ಡಿ.ಚನ್ನಣ್ಣನವರ್ ತಿಳಿಸಿದರು.
ಪ್ರಕರಣವನ್ನು ಭೇದಿಸಿದ ತಮ್ಮ ತಂಡಕ್ಕೆ ಬಹುಮಾನವನ್ನು ನೀಡಲಾಗುವುದು ಎಂದು ತಿಳಿಸಿದರು.