ಸಾಲಗಾರರಾದ ಶ್ರೀಮಂತ ಬೆಳೆಗಾರರು
ಹಾಸನ: ಮಲೆನಾಡು ಮಳೆನಾಡಾದ ಕಾರಣ ಕಾಫಿ ಬೆಳೆ ಕಳೆದುಕೊಂಡ ಮಲೆನಾಡಿನ ರೈತಾಪಿಗಳು ಈಗ ಏಲಕ್ಕಿ ಮತ್ತು ಮೆಣಸಿನ ಬೆಳೆಯನ್ನು ಸಹ ಕಳೆದುಕೊಳ್ಳುತ್ತಿದ್ದಾರೆ.
ಜೂನ್ ಪೂರ್ತಾ ಉಧೋ ಎಂದು ಸುರಿದ ಮಳೆಯಿಂದ ಏಲಕ್ಕಿಗೆ ಕೊಕ್ಕೆ ಕಂದು ರೋಗ ಬಂದರೆ, ಮೆಣಸಿಗೆ ಕೊಳೆ ರೋಗ ತಗುಲಿ ಫಸಲು ನಾಶವಾಗಿದೆ. ಕಾಫಿ ಗಿಡಗಳ ನಡುವೆ ಬೆಳೆಯುವ ಮೆಣಸಿನ ಬಳ್ಳಿಗಳಿಗೆ ರೋಗ ತಗುಲಿದ್ದರಿಂದ ಗೊಂಚಲು ಗೊಂಚಲಾಗಿದ್ದ ಮೆಣಸಿನ ಕಾಳುಗಳು ಹೆಚ್ಚಿನ ಮಳೆಯಿಂದ ಉದುರಿ ಹೋಗಿವೆ.
ಮೇಯಿಂದ ಜೂನ್ ಆರಂಭದವರೆಗೆ ಕಡಿಮೆ ಮಳೆಯಾದ ಪರಿಣಾಮ ಮೆಣಸಿನ ಬಳ್ಳಿಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಹೂವು ಅರಳಲಿಲ್ಲ. ಅಲ್ಪ ಸ್ವಲ್ಪ ಉಳಿದಿದ್ದ ಹೂವುಗಳು ಕಾಯಿಯಾಗಿ ಪರಿವರ್ತನೆಗೊಳ್ಳುತ್ತಿದ್ದಂತೆ ಭೀಕರ ಮಳೆಯಾಯಿತು. ಇದರಿಂದ ರೋಗ ಬಂದು ಇದ್ದ ಮೆಣಸು ನಷ್ಟವಾಯಿತು.
ಏಲಕ್ಕಿ ಕಥೆಯಂತೂ ಹೇಳ ತೀರದು: ಸತತ 53 ದಿನಗಳವರೆಗೆ ಸುರಿದ ಮಳೆಯಿಂದ ಏಲಕ್ಕಿ ಗಿಡಗಳಿಗೆ ಕೊಕ್ಕೆ ರೋಗ ತಗುಲಿ ನಾಶವಾಯಿತು. ಇದರಿಂದ ದುಬಾರಿ ಕೂಲಿ ಕೊಟ್ಟು ಗೊಬ್ಬರ ಹಾಕಿದ್ದು ಪ್ರಯೋಜನವಿಲ್ಲದಂತಾಗಿದ್ದು, ಮಾಡಿದ ಸಾಲ ತೀರಿಸಲಾಗದ ದುಸ್ಥಿತಿಯನ್ನು ಏಲಕ್ಕಿ, ಮೆಣಸು ಮತ್ತು ಕಾಫಿ ಬೆಳೆಗಾರರು ತಲುಪಿದ್ದಾರೆ. ಇದರಿಂದ ಕಾಫಿ ಬೆಳೆಗಾರರು ಶ್ರೀಮಂತಿಕೆಯ ಪ್ರತೀಕ ಎಂಬ ಖ್ಯಾತಿಯನ್ನು ಕಳೆದುಕೊಂಡು ಸಾಲಗಾರರಾಗಿ ಪರಿವರ್ತನೆಗೊಂಡಿದ್ದಾರೆ.
ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಏಲಕ್ಕಿ, ಮೆಣಸನ್ನು ಬೆಳೆಯಲಾಗುತ್ತದೆ. ಆದರೆ ಅತಿ ಮಳೆ ಮತ್ತು ರೋಗಗಳಿಂದ ಅವೆರಡು ಬೆಳೆಗಳು ನಷ್ಟವಾಗಿವೆ. ಸಕಲೇಶಪುರ ಪಟ್ಟಣದಲ್ಲಿ 8 ರಿಂದ 10 ಏಲಕ್ಕಿ ವಹಿವಾಟು ನಡೆಸುವ ಮಂಡಿಗಳಿದ್ದವು. ಈಗ ಎರಡು ಮಾತ್ರ ಇವೆ. ಇದಕ್ಕೆ ಕಾರಣ ಬರಬರುತ್ತಾ ಹವಾಮಾನ ವೈಪರೀತ್ಯದಿಂದ ಅತಿ ಕಡಿಮೆ ಇಲ್ಲವೇ ಅತಿ ಹೆಚ್ಚು ಮಳೆ ಆಗುತ್ತಿದ್ದರಿಂದ ಅಲ್ಲೆಲ್ಲಾ ಏಲಕ್ಕಿ ಬೆಳೆಯುತ್ತಿದ್ದ ಪ್ರದೇಶ ಕಡಿಮೆಯಾಗತೊಡಗಿದೆ.
2002- 2005 ರಲ್ಲಿ ಬರದಿಂದ ತತ್ತರಿಸಿ ಹೋಗಿದ್ದ ಮಲೆನಾಡು ಭಾಗದ ರೈತರು 2007 ರಲ್ಲಿ ಕೊಂಚ ಚೇತರಿಕೆ ಕಂಡರಾದರೂ, 2008, 09 ರಲ್ಲಿ ಅತಿವೃಷ್ಟಿಯಾಯಿತು. ಹೀಗೆ ಅನಾವೃಷ್ಟಿ ಮತ್ತು ಅತಿವೃಷ್ಟಿಗೆ ಈಡಾಗುತ್ತಿರುವ ರೈತರ ಸಹಾಯಕ್ಕೆ ಕೇಂದ್ರ, ರಾಜ್ಯ ಸರ್ಕಾರಗಳು ನಿಲ್ಲದೇ ಇರುವುದು ವಿಷಾದನೀಯ. ಕೇಂದ್ರದ ಏಲಕ್ಕಿ ಮಂಡಳಿ ಮತ್ತು ಸಾಂಬಾರ ಮಂಡಳಿ ಇದ್ದರೂ ಇಲ್ಲದಂತೆ ಇವೆ. ಕೇರಳ ರಾಜ್ಯದವರಿಗೆ ಮಾತ್ರ ಸಹಾಯವಾಗಿವೆಯೇ ಹೊರತು ಕರ್ನಾಟಕ ಬೆಳೆಗಾರರಿಗೆ ಪ್ರಯೋಜನವಾಗಿಲ್ಲ ಎಂದು ಕರ್ನಾಟಕ ಬೆಳೆಗಾರರ ಒಕ್ಕೂಟ ಸದಸ್ಯ ಬಿ.ಎ. ಜಗನ್ನಾಥ್ ಅಸಮಾಧಾನ ವ್ಯಕ್ತಪಡಿಸುತ್ತಾರೆ.
ಅರಬ್ಬರಿಗೆ ನಿರಾಶೆ: ಮಸಾಲೆ ಪ್ರಿಯರಾದ ಅರಬ್ಬರಿಗೆ ಕೇಳಿದಷ್ಟು ಕರಿ ರಾಣಿ ಎಂದೇ ಸಾಂಬಾರ ಲೋಕದಲ್ಲಿ ಖ್ಯಾತಿ ಪಡೆದಿರುವ ಮೆಣಸನ್ನು ಸರಬರಾಜು ಮಾಡಲು ಸ್ಥಳೀಯ ವ್ಯಾಪಾರಿಗಳಿಗೆ ಸಾಧ್ಯವಾಗುತ್ತಿಲ್ಲ. ಸುವಾಸನೆ ಬೀರುವ ಏಲಕ್ಕಿ ಬೆಲೆ ಈಗ ಗಗನಕ್ಕೆ ಏರುತ್ತಿದೆ. ಅರಬ್ ರಾಷ್ಟ್ರಗಳ ವ್ಯಾಪಾರಿಗಳು ಎಷ್ಟಾದರೂ ಕಳುಹಿಸಿ ಎಂದು ಸ್ಥಳೀಯ ವ್ಯಾಪಾರಿಗಳಿಗೆ ದುಂಬಾಲು ಬಿದ್ದಿದ್ದಾರೆ. ಬೇಡಿಕೆಗೆ ಅನುಗುಣವಾಗಿ ಮೆಣಸು, ಏಲಕ್ಕಿ ಉತ್ಪಾದನೆಯಾಗಿಲ್ಲ. ಈಗ ಕೆಜಿ ಮೆಣಸಿನ ಬೆಲೆ 398 ರು. ನಿಂದ 400 ರು. ಇದ್ದರೇ, 8 ಎಂಎಂ ಗಾತ್ರದ ಅತ್ಯುತ್ತಮ ಏಲಕ್ಕಿ ಬೆಲೆ ಕೆಜಿಗೆ 1050 ರಿಂದ 1,100 ರು. ಗೆ ತಲುಪಿದೆ.
ಭಾರತದೊಳಗೆ ಮೂರನೇ ದರ್ಜೆಗಿಂತ ಕಳಪೆಯುಳ್ಳ ಏಲಕ್ಕಿಯನ್ನು ಮಾತ್ರ ಮಾರಾಟ ಮಾಡಲಾಗುತ್ತಿದೆ. ತಿಳಿ ಹಸಿರುಳ್ಳ ಗುಣಮಟ್ಟದ ಏಲಕ್ಕಿಯನ್ನು ಬೇರೆ ಬೇರೆ ದೇಶಗಳಿಗೆ ರಫ್ತು ಮಾಡಲಾಗುತ್ತಿದೆ. ಇದೇ ಸ್ಥಿತಿಯೂ ಮೆಣಸಿನದ್ದಾಗಿದೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಹೆತ್ತೂರು, ಯಸಳೂರು, ಕಸಬಾ ಹೋಬಳಿಯಲ್ಲಿ ಬೆಳೆಯುವ ಏಲಕ್ಕಿ ಮತ್ತು ಮೆಣಸು ಅರಬ್ ದೇಶದವರಿಗೆ ಬಲು ಪ್ರಿಯವಂತೆ. ಅದಕ್ಕಾಗಿ ಇಲ್ಲಿಯ ಏಲಕ್ಕಿ, ಮೆಣಸೇ ಬೇಕು ಎಂದು ದುಂಬಾಲು ಬಿದ್ದಿರುವ ಅರಬ್ಬಿಯನ್ನರು ಕೇಳಿದಷ್ಟು ಸರಬರಾಜು ಮಾಡಲು ಆಗುತ್ತಿಲ್ಲ.
ರಾಜ್ಯದ ಕೊಡಗು, ಹಾಸನ ಮತ್ತು ಚಿಕ್ಕಮಗಳೂರು, ಕೇರಳ ರಾಜ್ಯದ ವೈನಾಡ್, ಈಟಕಿ, ಕಲ್ಕಟ್ಟದಲ್ಲಿ ಮತ್ತು ತಮಿಳುನಾಡಿನ ಪೋಡಿ ನಾಯಕನನೂರು ಹಾಗೂ ಮಧ್ಯ ಅಮೆರಿಕದ ವಾಟೆಮಾಲಾ, ವಿಯಟ್ನಾಂನಲ್ಲಿ ಹವಾಮಾನ ವೈಪರೀತ್ಯದಲ್ಲಿ ಏಲಕ್ಕಿ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆಯಾಗಲಿಲ್ಲ.
ಕೇರಳದಲ್ಲಿ ಈ ವರ್ಷ 3 ಲಕ್ಷ ಕೆಜಿ ಏಲಕ್ಕಿ ಉತ್ಪಾದನೆಯಾಗಬೇಕಿತ್ತು. ಆಗಿರುವುದು 2 ಲಕ್ಷಕ್ಕಿಂತ ಕಡಿಮೆ. ಕರ್ನಾಟಕದಲ್ಲಿ ಒಂದೂವರೆಯಿಂದ 2 ಕೋಟಿ ಕೆಜಿ ಉತ್ಪಾದನೆಯಾಗಬೇಕಿತ್ತು. ಅದರಲ್ಲಿ ಅರ್ಧನೂ ಆಗಿಲ್ಲ. ಬೇರೆ ದೇಶಗಳಲ್ಲೂ ಇದೆ ಸ್ಥಿತಿ ಉಂಟಾದ ಕಾರಣ ಬೆಲೆ ಏರಿಕೆಯಾಗಿದೆ. ಕೊಚ್ಚಿನ್ ಮಾರುಕಟ್ಟೆ ಮೂಲಕ ವಿದೇಶಗಳಿಗೆ ಮೆಣಸು, ಏಲಕ್ಕಿ ರಫ್ತಾಗುತ್ತದೆ ಎಂದು ಸಕಲೇಶಪುರದ ಏಲಕ್ಕಿ ವ್ಯಾಪಾರಿ ಸುಪ್ರದೀಪ್ ಯಜಮಾನ್ ಹೇಳುತ್ತಾರೆ.
ಸಾಲ ಮನ್ನಾ ಮಾಡಿ: ಹಿಂದೆಲ್ಲಾ ಕೆಜಿ ಮೆಣಸಿಗೆ 150 ರು. ನಿಂದ 180 ರು. ಬೆಲೆ ಏರಿಕೆಯಾಗಿತ್ತು, ಅದೇ ಹೆಚ್ಚಾಯಿತು ಅನ್ನುತ್ತಿದ್ದೆವು. ಈಗ ಕೆಜಿಗೆ 380 ರು.ನಿಂದ 390 ರು. ಆಗಿದೆ. ಮೆಣಸಿನ ಬಳ್ಳಿ ರೋಗದಿಂದ ನಾಶವಾಗಿದೆ. ಅರಬ್ ದೇಶದವರು ಕೇಳಿದಷ್ಟು ಕಳುಹಿಸಲಾಗುತ್ತಿಲ್ಲ, ಇತರ ರೈತರಿಗೆ ಮಾಡುವಂತೆ ನಮಗೂ ಸಾಲ ಮನ್ನಾ ಮಾಡಬೇಕು ಎಂದು ಮೆಣಸು, ಏಲಕ್ಕಿ, ಕಾಫಿ ಬೆಳೆಗಾರ ನರೇಶ್ ಆಗ್ರಹಿಸಿದ್ದಾರೆ.
ಭಾರತದ ಮೆಣಸು ಮತ್ತು ಏಲಕ್ಕಿ ಇಂಗ್ಲೆಂಡ್, ಪಾಕಿಸ್ತಾನ್, ಅಸ್ಟೇಲಿಯಾ, ಅರಬ್ ದೇಶಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಸರಬರಾಜುತ್ತಿದೆ. ಉತ್ತರ ಭಾರತದ ರಾಜ್ಯಗಳಲ್ಲಿ ಕೂಡ ಮೆಣಸಿಗೆ ಸಿಕ್ಕಾಪಟ್ಟೆ ಬೇಡಿಕೆ ಇತ್ತು. ಈಗ ಗಗನಕ್ಕೆ ಏರುತ್ತಿರುವ ಕಾರಣ ಈ ರಾಜ್ಯಗಳ ವ್ಯಾಪಾರಿಗಳು ಎಂದಿನಂತೆ ಖರೀದಿಸುತ್ತಿಲ್ಲ.
-ದಯಾಶಂಕರ ಮೈಲಿ