ಹಾಚಗೋಡನಹಳ್ಳಿ ಶಿವಣ್ಣಗೆ ರಂಗ ಕೌಸ್ತುಭ ಪ್ರದಾನ
ಹಾಸನ: ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಡಾ. ರಂಗಪ್ಪದಾಸ್ ಅವರ ನಿರ್ದೇಶನದಲ್ಲಿ ಇತ್ತೀಚೆಗೆ ಪ್ರಚಂಡ ರಾವಣ ನಾಟಕ ಪ್ರದರ್ಶನ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಹಾಸನ ತಾಲೂಕು ರಂಗ ಸಂಗೀತ್ ಪರಿಷತ್ ಕಲಾವಿದರು ಜಿಲ್ಲೆಯ ಹಿರಿಯ ರಂಗಭೂಮಿ ಕಲಾವಿದರಾದ ಹಾಚಗೋಡನಹಳ್ಳಿ ಶಿವಣ್ಣರವರಿಗೆ ರಂಗಕೌಸ್ತುಭ ಪ್ರಶಸ್ತಿ ನೀಡಿ ಸನ್ಮಾನಿಸಿದರು.
ಈ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಹಾಸನ ಜಿಲ್ಲಾ ರಂಗ ಸಂಗೀತ ಪರಿಷತ್ ಕಾರ್ಯದರ್ಶಿ ಯಲಗುಂದ ಶಾಂತಕುಮಾರ್, ಜಿಲ್ಲೆಯಲ್ಲಿ ಕಲಾವಿದರಿಗೆ ರಂಗತಾಲೀಮಿಗೆ ಕೊಠಡಿಗಳ ಅವಶ್ಯಕತೆ ಹೆಚ್ಚಾಗಿದೆ. ಇದಕ್ಕಾಗಿ ಹಾಸನ ನಗರದ ಹಾಸನಾಂಬ ಕಲಾಕ್ಷೇತ್ರದ ಆವರಣದಲ್ಲಿ ಮೂರು ರಂಗತಾಲೀಮಿನ ಕೊಠಡಿಗಳನ್ನು ನಿರ್ಮಿಸಿಕೊಡಬೇಕೆಂದು ಜಿಲ್ಲಾಧಿಕಾರಿಗಳವರಲ್ಲಿ ಸಂಘದ ಕಲಾವಿದರೆಲ್ಲಾ ಸೇರಿ ಮನವಿ ಮಾಡುವುದಾಗಿ ತಿಳಿಸಿದರು.
ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಂ.ಶಿವಣ್ಣ ಪ್ರಶಸ್ತಿ ಪ್ರದಾನ ಮಾಡಿದರು. ರಂಗಭೂಮಿ ಕಲಾವಿದರಾದ ಸಿ.ಎಂ. ಶ್ರೀಕಂಠಪ್ಪ, ಶಶಿಕಾಂತ್, ಡಿ.ವಿ,ಮೋಹನ್, ವೈ.ಎಸ್.ಶಾಂತಕುಮಾರ್, ಸಾಹಿತಿ ಗೊರೂರು ಅನಂತರಾಜು, ಪ್ರದೀಪ್, ಕೆ.ಕುಮಾರ್,ಕಲ್ಲಯ್ಯ, ರಂಗ ನಿರ್ದೇಶಕ ಡಾ.ರಂಗಪ್ಪದಾಸ್, ಪಾಲಾಕ್ಷಾಚಾರ್,ಎಂ.ಮಹದೇವ್ ಮತ್ತಿತರರು ಇದ್ದರು.