ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಅರಸೀಕೆರೆ-ಮೈಸೂರು ಪ್ಯಾಸೆಂಜರ್ ರೈಲು ವಿಳಂಬ

Vishwanath S
Updated On : 24 Aug 2013, 12:54 pm

ಕ.ಪ್ರ.ವಾರ್ತೆ ,  ಅರಸೀಕೆರೆ ,  ಆ. 23
ರೇಲ್ವೆ ಇಲಾಖೆ ಸಿಬ್ಬಂದಿಯ ಹೊಂದಾಣಿಕೆ ಕೊರತೆಯಿಂದ ಪಟ್ಟಣದಿಂದ ಮೈಸೂರಿಗೆ ಸಂಚರಿಸುವ ಪ್ಯಾಸೆಂಜರ್ ರೈಲು ಪ್ರತಿ ದಿನ ಸಂಜೆ ತಡವಾಗಿ ಹೊರಡುತ್ತಿದ್ದು ಇದರಿಂದ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗಿದೆ ಎಂದು ಆರೋಪಿಸಿ ಸ್ಟೇಷನ್‌ಮಾಸ್ಟರ್ ಕಚೇರಿಯಲ್ಲಿ ಗುರುವಾರ ಸಂಜೆ ಪ್ರಯಾಣಿಕರು ದಿಢೀರ್ ಪ್ರತಿಭಟನೆ ನಡೆಸಿದರು.
ಪಟ್ಟಣದ ರೇಲ್ವೆ ನಿಲ್ದಾಣದಿಂದ ಪ್ರತಿ ದಿನ ಸಂಜೆ 5.15 ಸಮಯಕ್ಕೆ  ಹೊರಡುವ ಅರಸೀಕೆರೆ - ಮೈಸೂರು ಪ್ಯಾಸೆಂಜರ್ ರೈಲು ಅಧಿಕಾರಿಗಳು ಮತ್ತು ಸಿಬ್ಬಂದಿ ವೈಮನಸ್ಸು ಮತ್ತು ಕರ್ತವ್ಯ ಲೋಪದಿಂದ ಒಂದರಿಂದ 2 ಗಂಟೆ ಕಾಲ ಸ್ಥಳೀಯ ರೈಲು ನಿಲ್ದಾಣದಿಂದ ಹೊರಡುತ್ತಿದೆ. ಇದರ ಬಗ್ಗೆ ಮೇಲಧಿಕಾರಿಗಳಿಗೆ ದೂರು ಸಲ್ಲಿಸಿದ್ದರೂ ಯಾವುದೇ ಪ್ರಯೋಜನ ಆಗದೆ ಈ ರೈಲು ಯಥಾ ಸ್ಥಿತಿಯಲ್ಲಿ ವಿಳಂಬವಾಗಿ ಹೊರಡುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಬೋಗಿಗಳ ಸ್ವಚ್ಛ ನೆಪದಲ್ಲಿ ಪ್ರತಿ ನಿತ್ಯ ರೈಲನ್ನು ಪ್ಲಾಟ್‌ಫಾರಂನಲ್ಲಿ ವಿಳಂಬವಾಗಿ ನಿಲ್ಲಿಸಲಾಗುತ್ತಿದೆ.ಈ ಸ್ವಚ್ಛತಾ ಕೆಲಸ ನಿರ್ವಹಿಸುವ ಸಿಬ್ಬಂದಿ ಮತ್ತು ಸ್ಥಳಿಯ ರೈಲ್ವೆ ಇಲಾಖೆ ಅಧಿಕಾರಿಗಳ ಸಾಮರಸ್ಯ ಹದಗೆಟ್ಟಿರುವುದರಿಂದ ಹೀಗಾಗುತ್ತಿದೆ.
ಅರಸೀಕೆರೆಯಿಂದ ಹಾಸನ ಮತ್ತು ಮೈಸೂರಿಗೆ ಪ್ರತಿನಿತ್ಯ ತೆರಳುವ ಸರ್ಕಾರಿ ನೌಕರರು, ವ್ಯಾಪಾರಸ್ಥರು ಸೇರಿದಂತೆ ನೂರಾರು ಪ್ರಯಾಣಿಕರಿಗೆ ವಿಳಂಬವಾಗಿ ಹೊರಡುವ ರೈಲಿನಿಂದ ತಡ ರಾತ್ರಿ ಮನೆ ಸೇರುವ ಪರಿಸ್ಥಿತಿ ಉಂಟಾಗಿದ್ದು, ಈ ಬಗ್ಗೆ ಅಧಿಕಾರಿಗಳು ಉದ್ಧಟತನದಿಂದ ವರ್ತಿಸುತ್ತಿದ್ದಾರೆಂದರು. ಯಾವುದೇ ರೈಲು ಗಾಡಿ ವಿಳಂಬವಾಗಿ ಹೊರಡುವುದರ ಬಗ್ಗೆ ಧ್ವನಿವರ್ಧಕ ಮೂಲಕ ಪ್ರಯಾಣಿಕರಿಗೆ ತಿಳಿಯಪಡಿಸಬೇಕು. ಆದರೆ ಇಲ್ಲಿಯ ಅಧಿಕಾರಿಗಳು ಮಾಹಿತಿ ನೀಡದೇ ಪ್ರಯಾಣಿಕರನ್ನು ಪೇಚಿಗೆ ಸಿಲುಕಿಸಿ ಕಿರುಕುಳ ನೀಡುತ್ತಿದ್ದಾರೆಂದು ದೂರಿದರು.
ಮುಂದಿನ ದಿನಗಳಲ್ಲಿ ಅರಸೀಕೆರೆಯಿಂದ ಮೈಸೂರಿಗೆ ಹೊರಡುವ ಪ್ಯಾಸೆಂಜರ್ ರೇಲು ಗಾಡಿ ನಿಗಧಿತ ಸಮಯಕ್ಕಿಂತ ವಿಳಂಬವಾಗಿ ಸಂಚರಿಸಿದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಪ್ರಯಾಣಿಕರು ಎಚ್ಚರಿಸಿದರು. ಪ್ರತಿಭಟನೆಗೆ ಮಣಿದ ಅಧಿಕಾರಿಗಳು ಕೂಡಲೇ ವಿಳಂಬವಾದರೂ ರೈಲುಗಾಡಿ ಸಂಚಾರಕ್ಕೆ ಹಸಿರು ನಿಶಾನೆ ತೋರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement