ಜನವರಿಗೆ 24/7 ಕುಡಿವ ನೀರು
ಕ.ಪ್ರ.ವಾರ್ತೆ , ಅರಸೀಕೆರೆ , ಆ. 23
ಪಟ್ಟಣದಲ್ಲಿ ದಿನದ 24 ಗಂಟೆಯೂ ಶುದ್ಧ ಕುಡಿಯುವ ನೀರು ಪೂರೈಕೆ ಹಾಗೂ ಪುರಸಭೆ ವ್ಯಾಪ್ತಿಯಲ್ಲಿ ಹೊಸದಾಗಿ ಕೈಗೊಂಡಿರುವ ಒಳಚರಂಡಿ ಕಾಮಗಾರಿಗಳು ಜನವರಿ ಅಂತ್ಯದೊಳಗೆ ಪೂರ್ಣಗೊಳ್ಳಲಿದೆ ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿದರು.
ಪಟ್ಟಣದ ಹೆಂಜಗೊಂಡನಹಳ್ಳಿ ಬಡಾವಣೆಯಲ್ಲಿ ಒಳಚರಂಡಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2 ದಶಕಗಳಿಂದ ಕುಡಿಯುವ ನೀರಿಗೆ ತೊಂದರೆ ಅನುಭವಿಸುತ್ತಿರುವ ಪಟ್ಟಣದ ನಾಗರಿಕರಿಗೆ ದಿನದ 24 ಗಂಟೆ ಕುಡಿವ ನೀರು ಪೂರೈಸುವ ಚನ್ನರಾಯಪಟ್ಟಣ ತಾಲೂಕು ಗನ್ನಿಘಡದ ಹೇಮಾವತಿ ನದಿಮೂಲದ 121 ಕೋಟಿ ವೆಚ್ಚದ ಕಾಮಗಾರಿ ಮುಕ್ತಾಯ ಹಂತದಲ್ಲಿದೆ.
3 ದಶಕಗಳಷ್ಟು ಹಳೆಯದಾದ ಒಳಚರಂಡಿ ವ್ಯವಸ್ಥೆ ಶಿಥಿಲಾವಸ್ಥೆ ತಲುಪಿ ನಾಗರಿಕರಲ್ಲಿ ಅಸಹ್ಯಕರ ವಾತಾವರಣ ಸೃಷ್ಟಿಸಿದ್ದ ಒಳಚರಂಡಿ ವ್ಯವಸ್ಥೆಯನ್ನು ಹೊಸದಾಗಿ ನಿರ್ಮಿಸಲು 81 ಕೋಟಿ ರು. ವೆಚ್ಚದ ಕಾಮಗಾರಿ ಸಹ ಪ್ರಗತಿಯಲ್ಲಿದೆ ಎಂದು ತಿಳಿಸಿದರು.
2008ರ ವಿಧಾನಸಭೆ ಚುನಾವಣೆಯಲ್ಲಿ ಪಟ್ಟಣದ ಜನತೆಗೆ ಭರವಸೆ ನೀಡಿದಂತೆ ಕಳೆದ ಅವಧಿಯಲ್ಲಿ ಈ ಎರಡು ಕಾಮಗಾರಿಗಳಿಗೆ ಚಾಲನೆ ದೊರೆತಿದ್ದು, ಇನ್ನೇನು ಕಾಮಗಾರಿ ಮುಕ್ತಾಯ ಹಂತಕ್ಕೆ ಬರುತ್ತಿದೆ ಎಂದು ಹೇಳಿದರು.
ತಾವು ಮತ್ತೊಮ್ಮೆ ಗೆಲ್ಲಲು ಸಾಧ್ಯವಿಲ್ಲ ಎಂಬ ಟೀಕೆಗೆ ತಿಲಾಂಜಲಿ ನೀಡಿ, ಮತದಾರರು ತಮ್ಮನ್ನು ಆಶೀರ್ವದಿಸಿ ಎರಡನೇ ಬಾರಿಗೆ ವಿಧಾನಸಭೆಗೆ ಕಳಿಸಿರುವುದೇ ತಾವು ಕ್ಷೇತ್ರದ ಅಭಿವೃದ್ಧಿ ಪರ ಇದ್ದಾರೆ ಎನ್ನುವುದಕ್ಕೆ ಸಾಕ್ಷಿಯಾಗಿದ್ದು ಜನರ ಈ ಪ್ರೀತಿ ವಿಶ್ವಾಸಕ್ಕೆ ಆಭಾರಿಯಾಗಿದ್ದು ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ಭರವಸೆ ನೀಡಿದರು.
ನಗರ ಕುಡಿಯುವ ನೀರು ಮತ್ತು ಒಳಚರಂಡಿ ಅಭಿವೃದ್ಧಿ ಮಂಡಲಿ ಸಹಾಯಕ ಎಂಜಿನಿಯರ್ ಮಲ್ಲೇಶ್ ನಾಯಕ್ ಮಾತನಾಡಿ, ಅರಸೀಕೆರೆಯಲ್ಲಿ ನಡೆಯುತ್ತಿರುವ ಈ ಎರಡು ಕಾಮಗಾರಿಗಳು ರಾಜ್ಯದಲ್ಲೇ ಮೊದಲ ಬಾರಿಗೆ ಕೈಗೊಳ್ಳಲಾಗುತ್ತಿದ್ದು ಕಾಮಗಾರಿಯಲ್ಲಿ ಯಾವುದೇ ಲೋಪ ದೋಷವಾಗದಂತೆ, ಗುಣಮಟ್ಟಕ್ಕೆ ಆದ್ಯತೆ ನೀಡುವ ಮೂಲಕ ಅಚ್ಚುಕಟ್ಟಾಗಿ ಕಾಮಗಾರಿ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಪುರಸಭೆ ಮಾಜಿ ಅಧ್ಯಕ್ಷ ಎಂ.ಸಮೀವುಲ್ಲಾ, ಜಿಟಿ ಗಣೇಶ್, ಪುರಸಭೆ ಪರಿಸರ ಎಂಜಿನಿಯರ್ ಎಸ್.ಎಂ.ನವೀನ್, ಆರೋಗ್ಯ ನಿರೀಕ್ಷಕ ರಮೇಶ್ ಇತರರು ಇದ್ದರು.