ವಸತಿಹೀನರಿಗೆ ಸರ್ಕಾರಿ ಭೂಮಿ: ಗ್ರಾಮಸ್ಥರ ಮನವಿ
ಕ.ಪ್ರ.ವಾರ್ತೆ , ಸಕಲೇಶಪುರ , ಆ. 23
ತಾಲೂಕಿನ ಕಸಬಾ ಹೋಬಳಿ ಕೊಲ್ಲಹಳ್ಳಿ ಗ್ರಾಮದಲ್ಲಿರುವ ಸರ್ಕಾರಿ ಭೂಮಿಯನ್ನು ಭೂ ಮಾಲೀಕರಿಂದ ಖುಲ್ಲಾ ಮಾಡಿಸಿ ವಸತಿಹೀನರಿಗೆ ನೀಡಬೇಕು ಎಂದು ಗ್ರಾಮಸ್ಥರು ಉಪವಿಭಾಗಾಧಿಕಾರಿ ಹಾಗೂ ನಾನಾ ಅಧಿಕಾರಿಗಳಿಗೆ ಮನವಿ ನೀಡಿದರು.
ಗ್ರಾಮದ ಗ್ರಾಮಠಾಣದಲ್ಲಿ ಸುಮಾರು 6 ಎಕರೆ ಸೇರಿದಂತೆ ಸರ್ವೇ ನಂಬರ್ 18 ಮತ್ತು 60ರಲ್ಲಿ ಗೋಮಾಳ, 64 ಮತ್ತು 708 ಮತ್ತು 2ರಲ್ಲಿ ಸರ್ಕಾರಿ ಕೆರೆ, 55 ಮತ್ತು 108ರಲ್ಲಿ ಸರ್ಕಾರಿ ಕರಾಬು, 16-4 ಮತ್ತು 17 ಆಕಾರ ಕಂಡ ಸರ್ಕಾರಿ ಬೀಳು, 59ರಲ್ಲಿ ಸ್ಮಶಾನ ಇದೆ. ಈ ಭೂಮಿಯನ್ನು ಮನೆ ಇಲ್ಲದ ಬಡವರಿಗೆ ನೀಡುವಂತೆ ಗ್ರಾಮಸ್ಥರು ಮನವಿಯಲ್ಲಿ ಕೋರಿದ್ದಾರೆ.
ದಶಕಗಳಿಂದ ಗ್ರಾಮದಲ್ಲಿ ವಾಸವಿದ್ದರೂ ಇಲ್ಲಿಯವರೆಗೆ ಸ್ವಂತ ಸೂರು ಮಾಡಿಕೊಳ್ಳಲು ನಮಗೆ ಸಾಧ್ಯವಾಗಿಲ್ಲ. ನಿವೇಶನಕ್ಕಾಗಿ ಹಲವಾರು ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರೂ ಗ್ರಾಮದಲ್ಲಿ ಭೂಮಿ ಇಲ್ಲ ಎಂದು ಕಂದಾಯ ಅಧಿಕಾರಿಗಳು ಹೇಳುತ್ತಿದ್ದರು. ಭೂ ಮಾಲೀಕರು ಸ್ವಾಧೀನಪಡಿಸಿಕೊಂಡಿರುವ ಪ್ರದೇಶಗಳನ್ನು ಖುಲ್ಲಾ ಮಾಡಿಸಿ ನೀಡಬೇಕು ಎಂದು ಒತ್ತಾಯಿಸಿದರು.
ಎಪಿಎಂಸಿ ಸದಸ್ಯ ಕೊಲ್ಲಹಳ್ಳಿ ಸಲೀಂ ಅಬ್ದುಲ್ಲಾ, ಗ್ರಾಮದ ಸತೀಶ್ ಶೆಟ್ಟಿ, ಸುಭಾಶ್, ಇಬ್ರಾಹಿಂ ಹಾಜಿ, ಹನ್ನಳ್ಳಿ ಹಮೀದ್, ಮಹಮ್ಮದ್, ಮಿತ್ರ, ವೀರಭದ್ರಯ್ಯ, ಐತಪ್ಪ, ಕಾಷ್ಟಾಲ್ಲಿ ಸುರೇಶ್, ಮಹಿಳಾ ಸಂಘಟನೆ ಕಾರ್ಯಕರ್ತೆಯರಾದ ಸ್ವಪ್ನ, ಪವಿತ್ರ, ಪೂಜಾ ಇತರರು ಇದ್ದರು.