'ವಿದ್ಯೆಗೆ ನೀಡುವಷ್ಟೇ ಆದ್ಯತೆ ಕ್ರೀಡೆಗೂ ನೀಡಿ'
ಕ.ಪ್ರ.ವಾರ್ತೆ , ಅರಸೀಕೆರೆ , ಆ. 23
ವಿದ್ಯೆಗೆ ನೀಡುವಷ್ಟೇ ಆದ್ಯತೆಯನ್ನು ಕ್ರೀಡೆಗೂ ನೀಡುವುದರಿಂದ ಮೂಲಕ ಉತ್ತಮ ದೇಹದಾರ್ಢ್ಯ ಹೊಂದಿ ಆರೋಗ್ಯವಂತರಾಗಲು ಸಹಕಾರಿ ಎಂದು ದೈಹಿಕ ಶಿಕ್ಷಣ ಪರಿವೀಕ್ಷಕ ತಿಮ್ಮೇಶ್ ತಿಳಿಸಿದರು.
ಪಟ್ಟಣದ ಜೇನುಕಲ್ ಕ್ರೀಡಾಂಗಣದಲ್ಲಿ ಪ್ರೌಢಶಾಲಾ ಹೋಬಳಿ ಮಟ್ಟದ ಕ್ಲಸ್ಟರ್ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕ್ರೀಡೆಯಲ್ಲಿ ಸೋಲು ಹಾಗೂ ಗೆಲುವು ಸಹಜ. ಅದನ್ನು ಕ್ರೀಡಾ ಮನೋಭಾವದಿಂದ ಸ್ವೀಕರಿಸಬೇಕು ಎಂದು ಹೇಳಿದರು. ಕ್ರೀಡಾಕೂಟದಲ್ಲಿ ಪಾಲ್ಗೊಂಡಿರುವ ಶಾಲಾ ವಿದ್ಯಾರ್ಥಿಗಳು ಗೆದ್ದನೆಂದು ಹಿಗ್ಗಬೇಡ, ಸೋತನೆಂದು ಕುಗ್ಗಬೇಡ ಎಂಬ ನಾಣ್ಣುಡಿಯಂತೆ ಸ್ಪರ್ಧಾತ್ಮಕವಾಗಿ ಪೈಪೋಟಿ ನಡೆಸಿ ಗೆಲವು ಸಾಧಿಸಬೇಕೆಂದು ಕರೆ ನೀಡಿದರು. ಕ್ರೀಡಾಕೂಟದಲ್ಲಿ 16 ಪ್ರೌಢಶಾಲೆಯ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅಂತಿಮ ಪಂದ್ಯದಲ್ಲಿ ಸಂತ ಮೇರಿ ಪ್ರೌಢಶಾಲೆ ಬಾಲಕರು ಆದಿಚುಂಚನಗಿರಿ ಶಾಲೆಯನ್ನು ಪರಾಭವಗೊಳಿಸಿ ವಿಜಯದ ನಗೆ ಬೀರಿದರು.