ಸ್ವಂತ ಖರ್ಚಿನಲ್ಲಿ ನಾಲೆಯ ಹೂಳು ತೆಗೆದ ರೈತರು
ಕ.ಪ್ರ.ವಾರ್ತೆ , ಹೊಳೆನರಸೀಪುರ , ಆ.23
ಎಂಜಿನಿಯರ್‌ಗಳ ವರ್ತನೆಯಿಂದ ಬೇಸತ್ತ ಅಚ್ಚುಕಟ್ಟು ಪ್ರದೇಶದ ರೈತರೇ ಸ್ವಂತ ಖರ್ಚಿನಿಂದ ನಾಲೆಯ ಹೂಳು ತೆಗೆಸಲು ಮುಂದಾದ ಘಟನೆ ತಾಲೂಕಿನ ಹುಚ್ಚನಕೊಪ್ಪಲು ಗ್ರಾಮದಲ್ಲಿ ಗುರುವಾರ ನಡೆದಿದೆ.
ನೀರಾವರಿ ಇಲಾಖೆಗೆ ಸೇರಿದ ಹುಚ್ಚನಕೊಪ್ಪಲು ಗ್ರಾಮದ ಬಳಿಯಲ್ಲಿನ 1.5 ಕಿ.ಮೀ ಉದ್ದದ ವಿತರಣಾ ನಾಲೆ 22ರಲ್ಲಿ ಹೂಳು ಹಾಗೂ ಗಿಡಗಂಟಿಗಳು ತುಂಬಿಕೊಂಡು, ಅದರ ಮುಂದಿನ ಭಾಗದಲ್ಲಿರುವ ರೈತರ ಸುಮಾರು 150 ಎಕರೆಯಷ್ಟು ಅಚ್ಚುಕಟ್ಟು ಪ್ರದೇಶಗಳಿಗೆ ನೀರು ಸರಾಗವಾಗಿ ಹರಿಯುತ್ತಿರಲಿಲ್ಲ.
ನಾಲೆಯಲ್ಲಿನ ಹೂಳು ಹಾಗೂ ಗಿಡಗಂಟಿಗಳನ್ನು ತೆಗೆಸದ ಕಾರಣ ಬೆಳೆಗೆ ನೀರು ಸರಾಗವಾಗಿ ಹರಿಯದೆ ತೊಂದರೆಯಾಗಿರುವುದನ್ನು ಸರಿಪಡಿಸುವಂತೆ ರೈತರು ಕೋರಿದರೂ ಸಂಬಂಧಪಟ್ಟವರು ಕಿವಿಗೊಡಲೇ ಇಲ್ಲ ಎಂದು ರೈತ ಅಮಾಸಯ್ಯ ದೂರಿದ್ದಾರೆ.
ಈಗಾಗಲೇ ಬತ್ತದ ಸಸಿ ಮಡಿ ಮಾಡಿದ್ದ ಕೃಷಿ ಭೂಮಿಗೆ ನೀರು ಹರಿಯದೆ ಸಸಿ ಮಡಿಗಳು ಒಣಗುವ ಹಂತ ತಲುಪಿದ್ದರಿಂದ ಇಂಜಿನಿಯರುಗಳ ನಿರ್ಲಕ್ಷ್ಯ ಖಂಡಿಸಿ ಕೆಲ ರೈತರು ಒಂದಾಗಿ ಸ್ವಂತ ಖರ್ಚಿನಲ್ಲಿ ತಾವೇ ಜೆಸಿಬಿ ಯಂತ್ರದ ಮೂಲಕ ನಾಲೆಯ ಹೂಳು ತೆಗೆಸಲು ಮುಂದಾದರು.
ರೈತರೇ ಯಂತ್ರದ ಮೂಲಕ ನಾಲೆಯಲ್ಲಿನ ಹೂಳು ತೆಗೆಸುತ್ತಿರುವ ಸಂಗತಿ ತಿಳಿದು ಸ್ಥಳಕ್ಕೆ ಮಾಧ್ಯಮದವರು ತೆರಳಿದ ವಿಷಯ ತಿಳಿದ ಮೇಲೆ ನೀರಾವರಿ ಇಲಾಖೆ ಅಧಿಕಾರಿಗಳೂ ಸ್ಥಳಕ್ಕೆ ದೌಡಾಯಿಸಿದರು. ಸ್ಥಳದಲ್ಲಿದ್ದ ಕೆಲ ರೈತರು ಇಲಾಖೆ ಎಂಜಿನಿಯರ್ ಶಿವಪ್ರಕಾಶ್ ಅವರನ್ನು ನಿರ್ಲಕ್ಷತೆಯ ಕುರಿತು ತರಾಟೆಗೆ ತೆಗೆದುಕೊಂಡರು.
ಕಳೆದ ಮೂರು ವರ್ಷಗಳಿಂದಲೂ ನಾಲೆಯಲ್ಲಿನ ಹೂಳು ಹಾಗೂ ಗಿಡಗಂಟಿಗಳನ್ನು ತೆಗೆಸದ ಕಾರಣ ಹಾಗೂ ಈ ವರ್ಷ ಚೆನ್ನಾಗಿಯೇ ಮಳೆಯಾದ ಹಿನ್ನೆಲೆಯಲ್ಲಿ ನಾಲೆಗಳಿಗೆ ನೀರು ಬಿಟ್ಟಿದ್ದರೂ, ಎಂಜಿನಿಯರ್‌ಗಳ ನಿರ್ಲಕ್ಷ್ಯತೆಯಿಂದ ವಿತರಣಾ ನಾಲೆ 22ರ ಮುಂದಿನ ಭಾಗದ ಜಮೀನಿಗೆ ನೀರು ಸಮರ್ಪಕವಾಗಿ ಹರಿಯದೇ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗಿದ್ದಾಗಿ ರೈತ ಜವರಯ್ಯ, ಶ್ರೀಪತಿ ಮತ್ತು ರವಿಕುಮಾರ್ ಮಾಧ್ಯಮದವರಿಗೆ ವಾಸ್ತವ ಸ್ಥಿತಿ ಪರಿಚಯಿಸಿದರು.
ಈ ಕುರಿತಂತೆ ಸಮಜಾಯಿಷಿ ನೀಡಿದ ಎಂಜಿನಿಯರ್ ಶಿವಪ್ರಕಾಶ್ ಅವರು, ನಾಲೆಯಲ್ಲಿನ ಹೂಳು ಹಾಗೂ ಗಿಡಗಳನ್ನು ತೆರವುಗೊಳಿಸಲು ಟೆಂಡರ್ ಕರೆಯಲಾಗಿತ್ತು. ಆದರೆ ಸಾಕಷ್ಟು ಮಳೆಯಾದ ಕಾರಣದಿಂದಾಗಿ ನಿಗಧಿತ ಅವಧಿಗೂ ಮುನ್ನವೇ ನಾಲೆಗಳಿಗೆ ನೀರನ್ನು ಹರಿಯಬಿಟ್ಟ ಕಾರಣದಿಂದಾಗಿ ನಾಲೆಯನ್ನು ಸ್ವಚ್ಛಗೊಳಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಟೆಂಡರ್ ರದ್ದುಗೊಳಿಸಲಾಗಿದೆ ಎಂದು ಹೇಳಿದರು.
ಆದರೂ ರೈತರ ಮನವಿ ಮೇರೆಗೆ ತುರ್ತಾಗಿ ನಾಲೆಯನ್ನು ದುರಸ್ತಿಗೊಳಿಸಿಕೊಡಲು ಮುಂದಾಗಿದ್ದು, ರೈತರ ಮನವೊಲಿಸಿ, ಸ್ವಂತ ಹಣದಿಂದ ನಾಲೆಯನ್ನು ಸ್ವಚ್ಛಗೊಳಿಸುವುದನ್ನು ಸ್ಥಗಿತಗೊಳಿಸಲಾಗುವುದು ಎಂದು ಸಿವಪ್ರಕಾಶ ತಿಳಿಸಿದರು.