ಹೇಮಾವತಿ ಜಲಾಶಯದ ಒಳ ಹರಿವು 7464
ಹಾಸನ: ಹೇಮಾವತಿ ಜಲಾಶಯಕ್ಕೆ ಶುಕ್ರವಾರ 7467 ಕ್ಯುಸೆಕ್ ನೀರು ಹರಿದು ಬರುತ್ತಿದ್ದು, 6250 ಕ್ಯುಸೆಕ್ ನೀರು ಹೊರ ಬಿಡಲಾಗುತ್ತಿದೆ ಗರಿಷ್ಠ ನೀರಿನ ಮಟ್ಟ 2922 ಅಡಿ, ಇಂದಿನ ನೀರಿನ ಮಟ್ಟ 2921.89 ಅಡಿಯಾಗಿದ್ದು, 36.996 ಟಿಎಂಸಿ ನೀರು ಸಂಗ್ರಹವಾಗಿದೆ.
ಯಗಚಿ ಜಲಾಶಯ: ನೀರಿನ ಮಟ್ಟ 3164.726 ಅಡಿ, ಒಳ ಹರಿವು 275 ಕ್ಯುಸೆಕ್, ಹೊರ ಹರಿವು ನದಿಗೆ 75 ಕ್ಯುಸೆಕ್, ನಾಲೆಗೆ 200 ಕ್ಯುಸೆಕ್, ಒಟ್ಟು 3.600 ಟಿಎಂಸಿ ನೀರು ಸಂಗ್ರಹವಾಗಿದೆ.
ವಾಟೆ ಹೊಳೆ: 3165.68 ಅಡಿ, ಒಳ ಹರಿವು 90 ಕ್ಯುಸೆಕ್, ಹೊರ ಹರಿವು 70 ಕ್ಯುಸೆಕ್ ಒಟ್ಟು 1.304 ಟಿ ಎಂಸಿ ನೀರು ಸಂಗ್ರಹವಾಗಿದೆ.
ತಾಲೂಕುವಾರು ಮಳೆ ವಿವರ: ಅರಕಲಗೂಡು 4.2,ಬೇಲೂರು 0.2,ಹೊಳೆನರಸೀಪುರ 2, ಸಕಲೇಶಪುರ 10.4, ಮಿ.ಮೀಟರ್ ಮಳೆಯಾಗಿದೆ.
ಹೋಬಳಿವಾರು ಮಳೆ ವಿವರ: ಆಲೂರು ತಾಲ್ಲೂಕಿನ ಕೆಂಚಮ್ಮನ ಹೊಸಕೋಟೆ 26 ಕುಂದೂರು 5.6 ಅರಕಲಗೂಡು 4.2,ಮಲ್ಲಿಪಟ್ಟಣ್ಣ 6,ರಾಮನಾಥಪುರ 2.2,ಬಸವಾಪಟ್ಟಣ 6.4, ದೊಡ್ಡಮಗ್ಗೆ 3.4,ದೊಡ್ಡಬೆಮ್ಮತ್ತಿ 3.2,ಬೇಲೂರು ಕಸಬ 0.2, ಬಿಕ್ಕೋಡು 1.2,ಗೆಂಡೆಹಳ್ಳಿ 4.2, ಹಾಸನ ತಾಲೂಕಿನ ಕಟ್ಟಾಯ 1.6,ಗೊರೂರು 3,ಹೊಳೆನರಸೀಪುರ 2,ಹಳೇಕೋಟೆ 0.6, ಸಕಲೇಶಪುರ ಕಸಬ 10.4,ಬಾಳ್ಳುಪೇಟೆ 5.5,ಯಸಳೂರು 5, ಶುಕ್ರವಾರ ಸಂತೆ 6.2,ಮಾರನಹಳ್ಳಿ 20.7, ಹಾನಬಾಳು 4.5,ಹೆತ್ತೂರು 17.7 ಮಿ.ಮೀಟರ್ ಮಳೆಯಾಗಿದೆ.
ಪರೀಕ್ಷೆಗೆ ಆಹ್ವಾನ
ಹಾಸನ: 2013-14 ನೇ ಸಾಲಿನ ರಾಷ್ಟ್ರೀಯ ಪ್ರತಿಭಾನ್ವೇಷಣೆ ಪರೀಕ್ಷೆಯನ್ನು 10ನೇ ತರಗತಿ ವಿದ್ಯಾರ್ಥಿಗಳಿಗಾಗಿ ಹಾಗೂ ನ್ಯಾಷನಲ್ ಮೀನ್ಸ್ ಕಂ ಮೆರಿಟ್ ಸ್ಕಾಲರ್ಶಿಪ್ ಪರೀಕ್ಷೆಯನ್ನು 8 ನೇ ತರಗತಿ ವಿದ್ಯಾರ್ಥ್ಥಿಗಳಿಗಾಗಿ ನ.17ರಂದು ನಡೆಸಲಾಗುವುದು. ಪರೀಕ್ಷೆ ಅರ್ಜಿ ಹಾಸನ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಲಭ್ಯವಿದ್ದು ಸಾಮಾನ್ಯ ವರ್ಗ ಹಾಗೂ ಇತರೆ ವರ್ಗದ ವಿದ್ಯಾರ್ಥಿಗಳಿಗೆ ಪರೀಕ್ಷಾ ಶುಲ್ಕ ರು. 100- ಹಾಗೂ ಎಸ್ಸಿ ಎಸ್ಸಿ ವಿದ್ಯಾರ್ಥಿಗಳಿಗೆ 25 ರು. ಪರೀಕ್ಷಾ ಶುಲ್ಕವಿರುತ್ತದೆ. ಈ ಅರ್ಜಿ 10 ನೇ ತರಗತಿ ವಿದ್ಯಾಗಳಿಗೆ ಮಾತ್ರ. ಪರೀಕ್ಷೆಯ ಅರ್ಜಿಗಳು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಲಭ್ಯವಿದ್ದು, ಸಕಾರಿ ಅನುದಾನಿತ ಶಾಲೆಯ ಮಕ್ಕಳು ಮಾತ್ರ ಅರ್ಹರಾಗಿರುತ್ತಾರೆ. ಪೋಷಕರ ವಾರ್ಷಿಕ ವರಮಾನ ರು. 1,50,000 ಮೀರಬಾರದು, ವಾರ್ಷಿಕ ವರಮಾನ ಪತ್ರವನ್ನು ಮುಖ್ಯ ಶಿಕ್ಷಕರಿಂದ ದೃಢೀಕರಿಸಿ ಲಗತ್ತಿಸುವುದು ಕಡ್ಡಾಯ. ಈ ಅರ್ಜಿ 8 ನೇ ತರಗತಿ ವಿದ್ಯಾರ್ಥಿಗಳಿಗೆ ಮಾತ್ರ. ಅರ್ಜಿಗಳನ್ನು ಈ ಕಚೇರಿಯಲ್ಲಿ ಪಡೆದು ಶಾಲಾ ಮುಖ್ಯ ಶಿಕ್ಷಕರ ಮೂಲಕ ಸಲ್ಲಿಸುವುದು. ಮುಖ್ಯ ಶಿಕ್ಷಕರು ವಿದ್ಯಾರ್ಥಿಗಳ ಪಟ್ಟಿ ಮಾಡಿ ಕಚೇರಿಗೆ ಸಲ್ಲಿಸಿ ಅರ್ಜಿ ಪಡೆದು ವಿತರಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ರವಿಕುಮಾರ್ ತಿಳಿಸಿದ್ದಾರೆ.
ನಗರದಲ್ಲಿ ಪ್ರಹ್ಲಾದರಾಜರ ದಿವ್ಯ ರಥೋತ್ಸವ
ಹಾಸನ: ಗುರುರಾಘವೇಂದ್ರ ಸ್ವಾಮಿಗಳ 342ನೇ ಆರಾಧನಾ ಮಹೋತ್ಸವ ಅಂಗವಾಗಿ ಶುಕ್ರವಾರ ಶ್ರೀಪ್ರಹ್ಲಾದರಾಜರ ದಿವ್ಯ ರಥೋತ್ಸವ ನಡೆಯಿತು. ಬೆಳಗ್ಗೆ ಉಪ: ಕಾಲ ಪೂಜೆ, ಎಳನೀರು ಅಭಿಷೇಕ, ಅಷ್ಟೋತ್ತರ, ಅಲಂಕಾರ, ಮಹಾಪೂಜೆ ನಡೆಯಿತು.
ಮಠದ ಸುತ್ತಲಿನ ಪ್ರಮುಖ ರಸ್ತೆಗಳಲ್ಲಿ ಅಲಂಕೃತ ರಥದಲ್ಲಿ ವೇದಘೋಷ, ಭಜನೆ, ವಾದ್ಯಮೇಳಗಳೊಡನೆ ರಾಯರ ದಿವ್ಯ ರಥೋತ್ಸವ ನಡೆಯಿತು.
ಇದೇ ಸಂದರ್ಭದಲ್ಲಿ ಶ್ರೀಗುರುರಾಜ ಭಜನ ಮಂಡಲಿಯಿಂದ ಸ್ವರ್ಣ ಮಹೋತ್ಸವ ಸಲುವಾಗಿ ಭಕ್ತರಿಂದ ಬರೆಸಿದ್ದ ಓಂ ಶ್ರೀರಾಘೇವಂದ್ರಾಯ ನಮ: ಲೇಖನ ಯಜ್ಞ ಪುಸ್ತಕಗಳನ್ನು ರಥದಲ್ಲಿ ಇರಿಸಲಾಗಿತ್ತು. ಪ್ರಸಿದ್ಧ ಸಂಗೀತ ಶಿರೋಮಣಿ ವಿದ್ಯಾಭೂಷಣರು ಮತ್ತು ವೃಂದದವರಿಂದ ಭಕ್ತಿ ಗಾನ ಸುಧೆ ನಡೆಯಿತು. ಭಕ್ತರಿಗೆ ಪ್ರಸಾದ ವಿನಿಯೋಗ ನಡೆಯಿತು.
'ಅಧಿಕ ಬೆಲೆಗೆ ಮದ್ಯ ಮಾರಾಟ: ಅಂಗಡಿ ಪರವಾನಗಿ ರದ್ದು'
ಸಕಲೇಶಪುರ: ಅಧಿಕ ಬೆಲೆಗೆ ಮದ್ಯ ಮಾರಾಟ ಮಾಡುವ ಅಂಗಡಿಗಳ ಪರವಾನಗಿ ರದ್ದು ಪಡಿಸುವಂತಹ ಕಠಿಣ ಕ್ರಮ ಕೈಗೊಳ್ಳುವುದಾಗಿ ಅಬಕಾರಿ ಉಪ ಅಧೀಕ್ಷಕಿ ರಮಾದೇವಿ ಬಾಯಿ ಹೇಳಿದ್ದಾರೆ.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆ.1 ರಿಂದ ರಾಜ್ಯ ಸರ್ಕಾರ ಮದ್ಯದ ಬೆಲೆಯಲ್ಲಿ ಶೇ.10ರಿಂದ 40ರಷ್ಟು ಏರಿಕೆ ಘೋಷಣೆ ಮಾಡಿರುವುದನ್ನು ನೆಪವಿಟ್ಟುಕೊಂಡು ತಾಲೂಕಿನ ಮದ್ಯದಂಗಡಿಗಲ್ಲಿ ಮನಬಂದಂತೆ ಬೆಲೆ ಏರಿಕೆ ಮಾಡಲಾಗಿದೆ. ಈ ಬಗ್ಗೆ ಹಲವು ದೂರುಗಳ ಬಂದ ಹಿನ್ನೆಲೆಯಲ್ಲಿ ಕೆಲವು ಮದ್ಯದಂಗಡಿಗಳಿಗೆ ನೋಟಿಸ್ ಜಾರಿಗೊಳಿಸಲಾಗಿದ್ದು ಈ ದೂರು ಪುನರಾವರ್ತನೆಯಾದರೆ ಅಂತಹ ಅಂಗಡಿಗಳ ಪರವನಗಿ ರದ್ದುಪಡಿಸಲು ಶಿಫಾರಸ್ಸು ಮಾಡಲಾಗುವುದು ಎಂದರು. ಮದ್ಯದ ಬಾಟಲ್ ಕೊಳ್ಳುವ ಗ್ರಾಹಕರಿಗೆ ಬಿಲ್ಲನ್ನು ನೀಡಬೇಕು ಬಿಲ್ಲು ನೀಡಲು ನಿರಾಕರಿಸಿದರೆ ನೇರವಾಗಿ ಇಲಾಖೆಗೆ ದೂರು ನೀಡಿದರೆ ಕ್ರಮ ಜರುಗಿಸುವುದಾಗಿ ತಿಳಿಸಿದರು.
ಬಿಎಂಟಿಸಿ ನಾನಾ ಹುದ್ದೆಗಳಿಗೆ ಅರ್ಜಿ
ಹಾಸನ: ಬಿಎಂಟಿಸಿಯಲ್ಲಿ 80 ಸಹಾಯಕ ಲೆಕ್ಕಿಗ, 10 ಅಂಕಿ ಅಂಶ ಸಹಾಯಕ ಮತ್ತು 190 ಕಿರಿಯ ಸಹಾಯಕ ಕಂ ಡಾಟ ಎಂಟ್ರಿ ಆಪರೇಟರ್ ಹುದ್ದೆಗಳ ಭರ್ತಿಗೆ ಆನ್ಲೈನ್ ಮೂಲಕ ಜಾಲತಾಣ ಢಿಢಿಢಿ.ಛಿಟಡ್ಛ್ಛಿಛ್ಠಜಜ್ಠಡ.್ಛ್ಟಟ, ಆ. 24 ರೊಳಗೆ ಅರ್ಜಿ ಸಲ್ಲಿಸಬಹುದು.
ಸಹಾಯಕ ಲೆಕ್ಕಿಗರ ಹುದ್ದೆಗಳಿಗೆ ಬಿಕಾಂ, ಪದವಿ, ಅಂಕಿಅಂಶ ಸಹಾಯರ ಹುದ್ದೆಗಳಿಗೆ ಸಂಖ್ಯಾ ಶಾಸ್ತ್ರದಲ್ಲಿ ಪದವಿ ಅಥವಾ ಬಿಸಿಎ ಅಥವಾ ಕಂಪ್ಯೂಟರ್ ಸೈನ್ಸ್ನಲ್ಲಿ ಪದವಿ, ಕಿರಿಯ ಸಹಾಯಕ ಹುದ್ದೆಗಳಿಗೆ ಪಿಯುಸಿ ಪಾಸಾಗಿರಬೇಕು, ಎಲ್ಲ ಹುದ್ದೆಗಳಿಗೂ ಕಂಪ್ಯೂಟರ್ ಪರಿಣಿತಿ ಇರಬೇಕು.
ವಯೋವುತಿ ರಾಜ್ಯ ಸರ್ಕಾರ ನಿಯಮದಂತೆ, ನಿಗದಿಪಡಿಸಿರುವ ವಿದ್ಯಾರ್ಹತೆಯಲ್ಲಿ ಪಡೆದಿರುವ ಅಂಕಗಳ ಮತ್ತು ಮೀಸಲಾತಿ ನಿಯಮಗಳ ಆಧಾರ ಆಯ್ಕೆ ಮಾಡಲಾಗುವುದು.
ಈ ಅವಕಾಶಗಳನ್ನು ಜಿಲ್ಲೆಯ ಅರ್ಹ ಅಭ್ಯರ್ಥಿಗಳು ತಮ್ಮದಾಗಿಸಿಕೊಳ್ಳಬೇಕೆಂದು ಹಾಸನದ ಕೃಷಿಕ್ ಸರ್ವೋದಯ ಫೌಂಡೇಷನ್ನ ಕೋರಿದೆ. ವಿವರಗಳಿಗೆ ಮೊ 9845493336ಸಂಪರ್ಕಿಸಿ.
ಬ್ಯಾಂಕಿಂಗ್ ಹುದ್ದೆಗೆ ತರಬೇತಿ
ಹಾಸನ: ಆದಿಚುಂಚನಗಿರಿ ಶಾಖಾ ಮಠದ ಬಿಜಿಎಸ್ ಸ್ಟಡಿ ಸೆಂಟರ್ ವತಿಯಿಂದ ಸ್ಪೋಕನ್ ಇಂಗ್ಲಿಷ್ ಹಾಗೂ ಬ್ಯಾಂಕಿಂಗ್ ಹುದ್ದೆಗಳಿಗೆ ನುರಿತ ಉಪನ್ಯಾಸಕರಿಂದ ತರಬೇತಿಯನ್ನು ಸೆ. 1 ರಿಂದ ನೀಡಲಾಗುತ್ತದೆ.
ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಬಿಜಿಎಸ್ ಸ್ಟಡಿ ಸೆಂಟರ್, ಆದಿಚುಂಚನಗಿರಿ ಆಂಗ್ಲ ಮಾಧ್ಯಮ ಶಾಲೆ, ಎಂ.ಜಿ. ರಸ್ತೆ, ರವೀಂದ್ರನಗರ, ಹಾಸನ, ಮೊ.ಸಂ. 9738334784, 8050839482 ಸಂಪರ್ಕಿಸಿ.ಸಬಹುದು.
ಜಿಲ್ಲಾ ಅರಸು ಸಂಘದ ಸ್ಥಾಪನೆ
ಹಾಸನ: ನಗರದ ರಂಗೋಲಿಹಳ್ಳದ ರಾಮಾನುಜಭವನ ಬ್ರಹ್ಮಕುಮಾರಿ ಸಮಾಜದಲ್ಲಿ ಆ.26 ರಂದು ಬೆಳಗ್ಗೆ 10ಕ್ಕೆ ಜಿಲ್ಲಾ ಅರಸು ಸಂಘವನ್ನು ಸ್ಥಾಪಿಸಲಾಗುವದು ಎಂದು ಅರಸು ಜನಾಂಗದ ಸಂಘಙಟಕ ಯು.ಎನ್. ಯೋಗರಾಜೇ ಅರಸ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮನೆಗೆ ನುಗ್ಗಿ ಮಚ್ಚಿನಿಂದ ಹಲ್ಲೆ: ಆರೋಪಿಗೆ ಶಿಕ್ಷೆ
ಹೊಳೆನರಸೀಪುರ: ಬೈಕ್ ಮುಂದೆ ಹೋಗಲು ಜಾಗಬಿಡಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಕೋಪಗೊಂಡ ಯುವಕನೊಬ್ಬ ಟ್ರ್ಯಾಕ್ಟರ್ ಮಾಲೀಕನ ಮನೆಗೆ ನುಗ್ಗಿ ಆತ ಹಾಗೂ ಆತನ ಹೆಂಡತಿಯ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ಗಾಯಗೊಳಿಸಿದ್ದ ಆರೋಪಿಗೆ ನ್ಯಾಯಾಲಯ 2 ವರ್ಷ ಸಜೆ ಹಾಗೂ 3 ಸಾವಿರ ರು. ದಂಡ ವಿಧಿಸಿ ತೀರ್ಪು ನೀಡಿದೆ.
ತಾಲೂಕಿನ ಉದ್ದೂರು ಗ್ರಾಮದ ವಸಂತ ಎಂಬುವರು ತನ್ನ ಟ್ರಾಕ್ಟರ್ನಲ್ಲಿ ಹೋಗುವಾಗ ಹಿಂದಿನಿಂದ ಬೈಕಿನಲ್ಲಿ ಬಂದ ಹರೀಶ್ ಹಾಗೂ ಕುಮಾರ ಮುಂದೆ ಹೋಗಲು ಜಾಗ ಬಿಡಲಿಲ್ಲ ಎಂದು ಟ್ರಾಕ್ಟರ್ ಚಾಲಕ ವಸಂತ ಎಂಬುವರೊಂದಿಗೆ ಮೊದಲು ಜಗಳ ಮಾಡಿ ನಂತರ ಅವರ ಮನೆಗೂ ತೆರಳಿ ವಸಂತ ಹಾಗೂ ಅತನ ಪತ್ನಿ ಮಲ್ಲಮ್ಮ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ಗಾಯಗೊಳಿಸಿದ್ದರು. ಈ ಬಗ್ಗೆ ವಸಂತ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶ ಸಿ.ವಿ.ಸನತ್ ಅವರು ಆರೋಪಿಗಳಾದ ಹರೀಶ ಮತ್ತು ಕುಮಾರ ಅವರಿಗೆ 2 ವರ್ಷ ಸಜೆ ಹಾಗೂ 3 ಸಾವಿರ ರು. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಪತ್ನಿಗೆ ಕಿರುಕುಳ: ಪತಿಗೆ ಸಜೆ
ಹೊಳೆನರಸೀಪುರ: ಹೆಚ್ಚಿನ ವರದಕ್ಷಿಣೆ ತರುವಂತೆ ಪತ್ನಿಗೆ ಕಿರುಕುಳ ನೀಡುತ್ತಿದ್ದ ಪತಿಗೆ ನ್ಯಾಯಾಲಯ 1 ವರ್ಷ 6 ತಿಂಗಳು ಸಜೆ ಹಾಗೂ 4 ಸಾವಿರ ರು. ದಂಡ ವಿಧಿಸಿ ತೀರ್ಪು ನೀಡಿದೆ. ತಾಲೂಕಿನ ಉದ್ದೂರು ಗ್ರಾಮದ ಚಿದಂಬರ ಮೂರ್ತಿ ಸೋಮವಾರಪೇಟೆ ತಾ. ನಿಲವಾಗಿಲು ಗ್ರಾಮದ ಸ್ವರ್ಣಲತಾ ಎಂಬುವರನ್ನು 2 ವರ್ಷದ ಹಿಂದೆ ಮದುವೆ ಆಗಿದ್ದ. ನಂತರ ಹೆಂಡತಿಗೆ ಕಿರುಕುಳ ನೀಡಿ, ವರದಕ್ಷಿಣೆ ತರಲು ಪೀಡಿಸುತ್ತಿದ್ದ. ಪತಿಯ ಹಿಂಸೆ ಹಾಗೂ ವರದಕ್ಷಿಣೆಗೆ ಒತ್ತಾಯ ಹೆಚ್ಚಾದ ಹಿನ್ನೆಲೆಯಲ್ಲಿ ಹೆಂಡತಿ ಸ್ವರ್ಣಲತಾ ಇಲ್ಲಿನ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಅಂದಿನ ಸಿಪಿಐ ಸತ್ಯಣ್ಣರೆಡ್ಡಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಆರೋಪ ಸಾಬೀತಾದ ಹಿನ್ನೆಯಲ್ಲಿ ಹಿರಿಯ ಶ್ರೇಣಿ ನ್ಯಾಯಾಧೀಶ ಡಿ. ಕಂಬೇಗೌಡರು ಚಿದಂಬರಮೂರ್ತಿಗೆ 1 ವರ್ಷ ಸಜೆ ಹಾಗೂ 3 ಸಾವಿರ ರು. ದಂಡ ಹಾಗೂ ವರದಕ್ಷಿಣೆಗಾಗಿ ಪೀಡಿಸಿದ್ದಕ್ಕೆ 6 ತಿಂಗಳ ಸಜೆ ಹಾಗೂ 1 ಸಾವಿರ ರು. ದಂಡ ಸೇರಿ ಒಟ್ಟು 1 ವರ್ಷ 6 ತಿಂಗಳು ಸಜೆ ಹಾಗೂ 4 ಸಾವಿರ ರು. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಈ ಎರಡೂ ಪ್ರಕರಣಗಳಲ್ಲಿ ಸರ್ಕಾರಿ ಸಹಾಯಕ ಅಭಿಯೋಜಕ ಮಲ್ಲಿಕಾರ್ಜುನ ದೊಡ್ಡಗೌಡರ ವಾದ ಮಂಡಿಸಿದ್ದರು.