ಕೆಲವೇ ವ್ಯಕ್ತಿ ಬೆಳವಣಿಗೆ ರಾಷ್ಟ್ರಾಭಿವೃದ್ಧಿಗೆ ಅಪಾಯಕಾರಿ
ಕ.ಪ್ರ. ವಾರ್ತ್ಣೆ ಹಾಸನ ಆ 25
ಅಭಿವೃದ್ಧಿ ಅನ್ನೋದು ಸಾಮಾನ್ಯ ಜನರಿಗೆ ಲಭ್ಯವಾಗದೇ ಕೆಲವೇ ವ್ಯಕ್ತಿಗಳ ಬೆಳವಣಿಗೆಯಾದರೆ ಅದು ಅಭಿವೃದ್ಧಿಯಾಗದೇ ಅಪಾಯಕಾರಿ ಬೆಳವಣಿಗೆಯಾಗಲಿದೆ ಎಂದು ವಿಚಾರವಾದಿ ಹಾಗೂ ರಾಜಕೀಯ ಚಿಂತಕ ಎ.ಕೆ.ಸುಬ್ಬಯ್ಯ ಅಸಮಾಧಾನ ವ್ಯಕ್ತಪಡಿಸಿದರು.
ಅವರು ಕರ್ನಾಟಕ ಕೋಮು ಸೌಹಾರ್ದ ವೇದಿಕೆ, ಸಮತಾ ಸೈನಿಕ ದಳ-ದಲಿತ ಸಾಹಿತ್ಯ ಪರಿಷತ್ ಮತ್ತು ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಸಂಯುಕ್ತಾಶ್ರಯದಲ್ಲಿ ಭಾನುವಾರ ನಡೆದ ಸೋ ಕಾಲ್ಡ್ (ಡೋಂಗಿ) ಅಭಿವೃದ್ಧಿ ಮತ್ತು ಕೋಮುವಾದದ ಸವಾಲುಗಳು ಎಂಬ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.ಅಭಿವೃದ್ಧಿ ಅಂದರೆ ಕೋಮುವಾದದ ಅಭಿವೃದ್ಧಿಯಲ್ಲ. ನಿಜ ಬಡವರ ಅಭಿವೃದ್ಧಿಯಾಗಿದೆ. ಅಭಿವೃದ್ಧಿಯು ಎಲ್ಲರಿಗೂ ಸಮಾನವಾಗಿರಬೇಕು ಎಂದು ಹೇಳಿದರು. ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ತಮ್ಮ ರಾಜ್ಯದಲ್ಲಿ ಯಾರು ಕಂಡರಿಯದಷ್ಟು ಅಭಿವೃದ್ಧಿ ಪಡಿಸಿದ್ದೇನೆ ಎಂದು ಬಿಂಬಿಸುತ್ತಿದ್ದಾರೆ. ಆದರೆ ಗುಜರಾತ್‌ನಲ್ಲಿ ಹೆಚ್ಚು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ.
ಅಷ್ಟೇ ಅಲ್ಲದೆ ಮೋದಿ ಅವರು ಅಧಿಕಾರಕ್ಕೆ ಬಂದ ನಂತರ ಗುಜರಾತ್‌ನಲ್ಲಿ ಶೇ.20ರಷ್ಟು ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾಗಿದೆ ಎಂದು ಆರೋಪಿಸಿದರು.
ರಿಲಯನ್ಸ್ ಮಾಲೀಕರಾದ ಅಂಬಾನಿ ಅವರಂತಹವರು ಅಭಿವೃದ್ಧಿಯಾದಾಕ್ಷಣ ದೇಶ ಅಭಿವೃದ್ಧಿಯಾಗಿದೆ ಅನ್ನೋದು ತಪ್ಪು. ಅಂಬಾನಿಯವರ ಮನೆ ಸುತ್ತಲು ಕೊಳಚೆ ಪ್ರದೇಶದಗಳು ಈಗಲು ಇದ್ದಂತೆ ಇವೆ.
ಕೆಲವೇ ವ್ಯಕ್ತಿಗಳು ಮಾತ್ರ ಅಭಿವೃದ್ಧಿ ಹೊಂದಿದರೆ ಅದು ದೇಶದ ನಿಜವಾದ ಅಭಿವೃದ್ಧಿಯಾಗದೆ ಡೋಂಗಿ ಅಭಿವೃದ್ಧಿಯಾಗುತ್ತದೆ ಎಂದು ಕಿಡಿಕಾರಿದರು.
ಯಡಿಯೂರಪ್ಪ ಸ್ವ ಅಭಿವೃದ್ಧಿ: 1983ರಲ್ಲಿ ಶಿಕಾರಿಪುರದಲ್ಲಿ ಯಡಿಯೂರಪ್ಪ ಚುನಾವಣೆಗೆ ನಿಲ್ಲುವ ಸಂದರ್ಭದಲ್ಲಿ ಸಹಕಾರಿ ಸಂಘದವರು ಯಡಿಯೂರಪ್ಪನವರಿಗೆ ನೀಡಿದ್ದ 2 ಸಾವಿರ ರು.ಗಳ ಸಾಲ ವಸೂಲಿ ಮಾಡಲು ಬಂದಿದ್ದರು. ಆಗ ಆ ಹಣವನ್ನು ಅವರಿಗೆ ನೀಡಲು ಸಾಧ್ಯವಾಗಲಿಲ್ಲ.
ಆದರೆ ಈಗ ಯಡಿಯೂರಪ್ಪ ಹಾಗೂ ಅವರ ಮಕ್ಕಳು ಸಂಪತ್ತಿನ ರಾಶಿ ಮಾಡಿದ್ದಾರೆ. ಅದೇ ಅವರ ಅಧಿಕಾರವಧಿಯ ಶ್ರೇಷ್ಠ ಸಾಧನೆಯಾಗಿದೆ ಎಂದು ವ್ಯಂಗ್ಯವಾಡಿದರು.
ಅಂತಾರಾಷ್ಟ್ರೀಯ ಚಿತ್ರಕಲಾವಿದ ಕೆ.ಟಿ.ಶಿವಪ್ರಸಾದ್ ಮಾತನಾಡಿ, ಸಮಾಜದಲ್ಲಿ ಚಲನೆ ಇಲ್ಲವಾದರೆ ಬದಲಾವಣೆ ಅಸಾಧ್ಯ. ಮೌಢ್ಯ ಇರೋ ಕಡೆ ಕ್ರೌರ್ಯ ಹೆಚ್ಚಾಗುತ್ತದೆ. ಧರ್ಮ ಮತ್ತು ವಿಜ್ಞಾನವನ್ನು ತುಲನೆ ಮಾಡಿದರೆ ವಿಜ್ಞಾನ ಸತ್ಯವನ್ನು ಹೇಳುತ್ತದೆ. ಆದರೆ ಅದನ್ನು ಸ್ವಿಕರಿಸುವ ಮನೋಭಾವನೆ ನಮ್ಮಲ್ಲಿ ಇಲ್ಲ ಎಂದರು.
ಕಾರ್ಯಕ್ರಮದಲ್ಲಿ ಕೋಮು ಸೌಹಾರ್ದ ವೇದಿಕೆಯ ರಾಜ್ಯ ಕಾರ್ಯದರ್ಶಿ ಕೆ.ಎನ್.ಅಶೋಕ್, ಸಾಹಿತ ಜ.ಹೋ.ನಾರಾಯಣ ಸ್ವಾಮಿ ಹಾಗೂ ಇತರರು ಇದ್ದರು.