ನ್ಯಾಕ್ ತಂಡದಿಂದ ಕಾಲೇಜು ಪರಿಶೀಲನೆ
ಕ.ಪ್ರ. ವಾರ್ತ್ಣೆ ಹೊಳೆನರಸೀಪುರ ಆ 25
ಯುಜಿಸಿ ಶ್ರೇಣಿ ನೀಡಿಕೆ ಕುರಿತಂತೆ ಅಗತ್ಯ ಸೌಲಭ್ಯಗಳು ಹಾಗೂ ಶೈಕ್ಷಣಿಕ ಪ್ರಗತಿ ಪರಿಶೀಲನೆಗಾಗಿ ಮೈಸೂರು ವಿಶ್ವವಿದ್ಯಾಲಯದ ನ್ಯಾಕ್ ಅಧಿಕಾರಿಗಳ ತಂಡವು ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿಗೆ ಭೇಟಿ ನೀಡಿ ಕಾಲೇಜಿನಲ್ಲಿನ ಸವಲತ್ತುಗಳ ಪೂರ್ವಭಾವಿ ಸಮೀಕ್ಷೆ ನಡೆಸಿತು.
ನ್ಯಾಕ್ ತಂಡವನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಎಂ.ಬಿ.ಇರ್ಷಾದ್ ತಮ್ಮ ಸಹೋದ್ಯೋಗಿಗಳೊಂದಿಗೆ ಸ್ವಾಗತಿಸಿ, ಕಾಲೇಜಿನಲ್ಲಿನ ಮೂಲಭೂತ ಸೌಕರ್ಯಗಳು ಸೇರಿದಂತೆ ಪೂರ್ಣ ದಾಖಲೆಗಳನ್ನು ಸಮೀಕ್ಷಾ ತಂಡದ ಮುಂದಿರಿಸಿ ಮುಂದಿನ ಶೈಕ್ಷಣಿಕ ಅಭಿವೃದ್ದಿಗೆ ನ್ಯಾಕ್ ತಂಡ ಉತ್ತಮ ಶ್ರೇಣಿ ನೀಡುವಂತೆ ಮನವಿ ಮಾಡಿತು. ನ್ಯಾಕ್ ತಂಡದ ಮುಖ್ಯಸ್ಥ ಬಾಲಸುಬ್ರಮಣ್ಯಂ ಅವರ ತಂಡ ಬೆಳಗಿನಿಂದ ಸಂಜೆಯವರೆಗೆ ಕಾಲೇಜಿನ ಎಲ್ಲ ಮಾಹಿತಿಗಳನ್ನು ಪಡೆದರಲ್ಲದೆ, ಕಾಲೇಜಿನಲ್ಲಿ ಇರಬೇಕಾದ ಸವಲತ್ತುಗಳ ಕುರಿತಂತೆ ಸಲಹೆಗಳನ್ನು ನೀಡಿದರು. ಪ್ರಸ್ತುತ ಕಾಲೇಜಿನಲ್ಲಿನ ವಾತಾವರಣ ಮತ್ತು ಆಡಳಿತದ ನೀತಿ ತಮ್ಮ ಮನಸ್ಸಿಗೆ ತೃಪ್ತಿ ತಂದಿದ್ದರೂ ಸಣ್ಣ ಪುಟ್ಟ ಕೊರತೆಗಳನ್ನು ತಿದ್ದಿಕೊಂಡಲ್ಲಿ ಯುಜಿಸಿ ಎ ಶ್ರೇಣಿ ನೀಡಲಿದೆ ಎಂಬ ಭರವಸೆ ನೀಡಿದರು.
ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಪ್ರಭಾಕರ್ ಅವರೊಂದಿಗೆ ಅಧಿಕಾರಿಗಳಾದ ಬಾಲಸುಬ್ರಮಣ್ಯಂ, ಡಾ.ಕೆ.ಮಹೇಶ್, ವೇಣುಗೋಪಾಲ್, ಸೋಮಶೇಖರ್ ತಂಡ ಬೆಳಗ್ಗೆ ಕಾಲೇಜಿಗೆ ಆಗಮಿಸಿ ಯುಜಿಸಿ ಶ್ರೇಣಿ ನೀಡುವ ಕುರಿತು ಕಾಲೇಜಿನ ಎಲ್ಲ ವಿಭಾಗಗಳಿಗೂ ಭೇಟಿ ನೀಡಿ ಪರಿಶೀಲನೆ ನಡೆಸಿತು. ಸಲಹೆ ನೀಡಿದ ತಂಡ ನಲವತ್ತೈದು ದಿನಗಳೊಳಗೆ ಕೇಂದ್ರ ಯುಜಿಸಿ ತಂಡವೊಂದು ಆಗಮಿಸಿ ಮತ್ತೊಮ್ಮೆ ಕಾಲೇಜಿನ ಬಗ್ಗೆ ಪೂರ್ಣ ತಪಾಸಣೆ ನಡೆಸಲಿದೆ. ಆದ್ದರಿಂದ ತಾವುಗಳು ನೀಡಿರುವ ಸಲಹೆಯನ್ನು ಅನುಷ್ಠಾನಕ್ಕೆ ತರುವಂತೆ ಸೂಚಿಸಿ ವರದಿಯನ್ನು ತಮ್ಮ ಮೇಲಧಿಕಾರಿಗಳಿಗೆ ಸಲ್ಲಿಸುವುದಾಗಿ ತಿಳಿಸಿ ತೆರಳಿತು.