'ಪರಿಶುದ್ಧ ಮನಸ್ಸು, ನಿತ್ಯ ಕಾಯಕದಿಂದ ಬದುಕು ಸುಖ'
ಬಾಗೂರು (ಚನ್ನರಾಯಪಟ್ಟಣ ತಾ.): ಬದುಕು ಸುಖ ಸಂತೋಷವಾಗಿರಬೇಕಾದರೆ ಪರಿಶುದ್ಧ ಮನಸ್ಸಿನಿಂದ ನಿತ್ಯ ಕಾಯಕ ಮಾಡಬೇಕು ಎಂದು ಆದಿಚುಂಚನಗಿರಿ ಮಠಾಧೀಶ ನಿರ್ಮಲಾನಂದನಾಥ ಸ್ವಾಮೀಜಿ ಅವರು ಆಶೀರ್ವಚನ ನೀಡಿದರು.
ಅವರು ಸಮೀಪದ ಕೆ.ತಿಮ್ಮಲಾಪುರ ಗ್ರಾಮದಲ್ಲಿ ಶನಿವಾರ ಮುತ್ತುರಾಯಸ್ವಾಮಿ, ಚೌಡೇಶ್ವರಿ, ಚಾಮುಂಡೇಶ್ವರಿ ದೇವಾಲಯದ ಜೀರ್ಣೋದ್ಧಾರ, ಕುಂಭಾಭಿಷೇಕ, ಶ್ರೀನಿವಾಸ ಕಲ್ಯಾಣೋತ್ಸವ, ಸೋಲ್ಜರ್ ಪತ್ರಿಕೆ ಬಿಡುಗಡೆ ಸಮಾರಂಭದ ಜ್ಯೋತಿ ಬೆಳಗಿಸಿ ಮಾತನಾಡಿದರು.
ದಿನ ಒಳ್ಳೆಯದನ್ನೇ ಯೋಚಿಸಿ ಒಳ್ಳೆಯ ಕೆಲಸಗಳನ್ನೇ ಮಾಡಿದರೆ ಮನುಷ್ಯನಲ್ಲಿ ದ್ವೇಷ, ಅಸೂಯೆಗಳು ದೂರವಾಗುತ್ತವೆ ಎಂದರು.
ಕಾಯಕಯೋಗಿ ಬಸವಣ್ಣನವರ ಆದರ್ಶಗಳನ್ನು ಜೀವನಕ್ಕೆ ಅಳವಡಿಸಿಕೊಳ್ಳಬೇಕು ಧಾರ್ಮಿಕ ಮನೋಭಾವನೆ ಬೆಳೆಸಿಕೊಂಡು ಶಾಂತಿ ನೆಮ್ಮದಿಯಿಂದ ಬಾಳಬೇಕು ಎಂದ ಅವರು, ದೇವಾಲಯದ ಜೀರ್ಣೋದ್ಧಾರ ಮಾಡಿಸಿದ ಸುಮಿತ್ರ ಪ್ರಭಾಕರ್ ಅವರನ್ನು ಶ್ಲಾಘಿಸಿದರು.
ಕರವೇ ರಾಜ್ಯಾಧ್ಯಕ್ಷ ಟಿ. ಎ. ನಾರಾಯಣಗೌಡ ಮಾತನಾಡಿದರು.
ಕಾರ್ಯಕ್ರಮದಲ್ಲಿ ಶೈಲನಾಥ ಸ್ವಾಮೀಜಿ, ಚಂದ್ರಶೇಖರ ಸ್ವಾಮೀಜಿ, ಟಿ. ತಿಮ್ಮೇಗೌಡ ನಿವೃತ್ತ ಐಎಎಸ್ ಅಧಿಕಾರಿ, ಪತ್ರಕರ್ತರಾದ ಭಾರಧ್ವಜ್, ಮುನಿರಾಜ್, ಸುಮಿತ್ರ, ಪ್ರಭಾಕರ್, ಶಮಂತ್ ಪಿ. ಗೌಡ, ಶ್ರೀವಾರಿ ಫೌಂಡೇಶನ್ನ ವೆಂಕಟೇಶ್ ಮೂರ್ತಿ, ರಾಮಕೃಷ್ಣೇಗೌಡ ಮತ್ತಿತರರು ಇದ್ದರು.