ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

'ಸರ್ಕಾರಿ' ವಿಳಾಸವಿಲ್ಲದ ಕಚೇರಿಗಳು...!

Vishwanath S
Updated On : 26 Aug 2013, 12:22 pm

ಕ.ಪ್ರ.ವಾರ್ತೆ ,  ಸಕಲೇಶಪುರ ,  ಆ.25
ಪಟ್ಟಣದ ಬಹುತೇಕ ಪ್ರಮುಖ ಸರ್ಕಾರಿ ಕಚೇರಿಗಳು ಖಾಸಗಿ ಕಟ್ಟಡಗಳಲ್ಲಿ ವಿಳಾಸವಿಲ್ಲದೆ ಇರುವುದರಿಂದ ಸಾರ್ವಜನಿಕರು ತಮ್ಮ ಕೆಲಸಗಳಿಗಾಗಿ ಕಚೇರಿ ಹುಡುಕಾಟ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಪಟ್ಟಣದಲ್ಲಿ ಕಂದಾಯ ಇಲಾಖೆ ಅಧೀನದಲ್ಲಿರುವ ಭೂಮಾಪಕರ ಕಚೇರಿ ಅಶೋಕ ರಸ್ತೆಯ ಅಡ್ಡ ರಸ್ತೆಯಲ್ಲಿರುವ ಎರಡನೇ ಮಹಡಿಯಲ್ಲಿದೆ.
ಇಲ್ಲಿಗೆ ಹೋಗಲು ಯಾವುದೇ ನಾಮಫಲಕಗಳಾಗಲಿ ಅಥವಾ ಸೂಚನಾ ಫಲಕಗಳಾಗಲಿ ಇಲ್ಲದೆ ಇರುವುದು ಸಮಸ್ಯೆಯನ್ನು ತಂದೊಡ್ಡಿದೆ.
ಉಪ ನೋಂದಣಾಧಿಕಾರಿ ಕಚೇರಿ ಬಿ.ಎಂ ರಸ್ತೆಯ ಖಾಸಗಿ ಕಟ್ಟಡದ ಎರಡನೇ ಅಂತಸ್ತಿನಲ್ಲಿದೆ. ಈ ಕಚೇರಿಯನ್ನು ಜನ ಸಾಮಾನ್ಯರು ಸುಲಭವಾಗಿ ಗುರುತು ಹಿಡಿಯುವುದು ತೀರಾ ಕಷ್ಟದ ವಿಚಾರ.
ಇದಲ್ಲದೆ ಸಹಕಾರ ಸಂಘಗಳ ನಿಬಂಧಕರ ಕಚೇರಿ, ಸಮಾಜಕಲ್ಯಾಣ ಇಲಾಖೆ ಹಾಗೂ ಜಲಾನಯನ ಇಲಾಖೆ ಕಚೇರಿಗಳು ಆಜಾದ್ ರಸ್ತೆಯ ಖಾಸಗಿ ಕಟ್ಟಡದ ಎರಡು ಹಾಗೂ ಮೂರನೇ ಅಂತಸ್ತಿನಲ್ಲಿದೆ.
ಈ ಕಚೇರಿಗಳಿರುವ ಕಟ್ಟಡವನ್ನು ಹುಡುಕಿ ಹೋದರೂ ಕಚೇರಿಗೆ ಹೋಗಲು ದಾರಿ ಹುಡುಕ ಬೇಕಾಗಿದೆ.
ಕಿರಿದಾದ ಮೆಟ್ಟಿಲುಗಳ ಕಟ್ಟಡದ ದಾರಿಯಲ್ಲಿ ದಢೂತಿ ದೇಹದ ವ್ಯಕ್ತಿಗಳು ಹೋಗುವುದು ಅಸಾಧ್ಯವಾಗಿದೆ. ಇದಲ್ಲದೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಸಹಕಾರಿ ಲೆಕ್ಕಪರಿಶೋಧಕರ ಕಚೇರಿ ಅಶೋಕ ರಸ್ತೆಯ ಖಾಸಗಿ ಕಟ್ಟಡದ ಎರಡನೇ ಮಹಡಿಯಲ್ಲಿದೆ. ಈ ಕಚೇರಿಗಳನ್ನು ಹುಡುಕುವುದು ಸಾರ್ವಜನಿಕರಿಗೆ ಸಾಹಸವೇ ಸೈ.
ಅಲ್ಲದೆ  ಗ್ರಂಥಾಲಯ, ಜಿಪಂ ಎಂಜಿನಿಯರ್ ಕಚೇರಿಗಳೂ ಖಾಸಗಿ ಕಟ್ಟಡದಲ್ಲಿದ್ದು, ಗ್ರಂಥಾಲಯದ ಕಟ್ಟಡ ದುಸ್ಥಿತಿಗೆ ಈಡಾಗಿದ್ದರೂ ಪರ್ಯಾಯ ಕಟ್ಟಡದ ಭಾಗ್ಯ ಇಲ್ಲದಾಗಿದೆ. ಈ ಸರ್ಕಾರಿ ಕಚೇರಿಗಳಿಗೆ ಅಂಗವಿಕಲರು ಸುಲಭವಾಗಿ ಹೋಗಬೇಕು ಎಂಬ ಕಾರಣದಿಂದ ಅಂಗವಿಕಲರ ಪಾದಚಾರಿಮಾರ್ಗ ಕಲ್ಪಿಸುವುದಕ್ಕೆ ಮೊದಲ ಅದ್ಯತೆ ನೀಡಿದೆ. ಆದರೆ ಈ ಖಾಸಗಿ ಕಟ್ಟಡದಲ್ಲಿರುವ ಯಾವ ಕಚೇರಿಗಳಿಗೂ ಅಂಗವಿಕಲರು ಹೋಗುವುದು ಅಸಾಧ್ಯ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement