ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಕಾಮಗಾರಿ ವಿಳಂಬ: ರೈತರ ಪ್ರತಿಭಟನೆ

Vishwanath S
Updated On : 27 Aug 2013, 12:45 pm

ಕ.ಪ್ರ.ವಾರ್ತೆ ,  ಬೇಲೂರು ,  ಆ.26
ತಾಲೂಕಿನ ಹಳೆಬೀಡು - ಮಾದೀಹಳ್ಳಿ ಹೋಬಳಿ ಕೆರೆಗಳಿಗೆ ನೀರು ಹರಿಸಲು ನಡೆಯುತ್ತಿರುವ ಏತ ನೀರಾವರಿ ಕಾಮಗಾರಿಯಲ್ಲಿ ಅನಗತ್ಯ ವಿಳಂಬ ಹಾಗೂ ಭಾರಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿ ಸೋಮವಾರ ಶಿವಪುರ ಮಠದ ಬಸವಾನಂದ ಸ್ವಾಮೀಜಿ ಹಾಗೂ ಹೋಬಳಿ ರೈತಸಂಘ ಹಾಗೂ ನಾನಾ ಪ್ರಗತಿಪರ ಸಂಘಟನೆ ಕಾರ್ಯಕರ್ತರು ರಸ್ತೆತಡೆ ನಡೆಸಿ, ಶಾಸಕರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಇಲ್ಲಿನ ನೆಹರೂ ನಗರದಿಂದ ಮೆರವಣಿಗೆ ತೆರಳಿದ ಪ್ರತಿಭಟನಾನಿರತರು, ನಂತರ ಶಾಸಕರ ಕಚೇರಿಗೆ ಮುತ್ತಿಗೆ ಹಾಕಿ ಸ್ಥಳಕ್ಕೆ ಶಾಸಕರು ಹಾಗೂ ಯಗಚಿ ಎಂಜನಿಯರ್ ಆಗಮಿಸುವಂತೆ ಪಟ್ಟು ಹಿಡಿದರು.
ಈ ಸಂದರ್ಭದಲ್ಲಿ ಶಿವಪುರ ಮಠದ ಬಸವಾನಂದ ಸ್ವಾಮೀಜಿ ಮಾತನಾಡಿ, ಹಳೆಬೀಡು ಮಾದೀಹಳ್ಳಿ ಹೋಬಳಿ ಕೆರೆಗಳಿಗೆ ಯಗಚಿ ಜಲಾಶಯದಿಂದ ಏತ ನೀರಾವರಿ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದೆ.  ಅಲ್ಲದೆ ಏತ ನೀರಾವರಿಗೆ ಆಗತ್ಯವಾಗಿರುವ ಯಂತ್ರಗಳು ಕಳಪೆ ಗುಣಮಟ್ಟ ಹೊಂದಿದ್ದು, ಬೇರೆಡೆ ಕೆಟ್ಟು ಹೋಗಿರುವ ಹಳೆ ಯಂತ್ರಗಳನ್ನು ಇಲ್ಲಿಗೆ ತಂದು ಜೋಡಿಸಲಾಗುತ್ತಿದೆ. ಏಪ್ರಿಲ್‌ನಲ್ಲಿ ಕಾಮಗಾರಿ ಮುಗಿಯುವುದಾಗಿ ಹೇಳಿ ಈಗ ಸೆಪ್ಟೆಂಬರ್ ಬರುತ್ತಿದ್ದರೂ ಕಾಮಗಾರಿ ಪೂರ್ಣಗೊಂಡಿಲ್ಲ ಎಂದು ದೂರಿದರು.
ಯಗಚಿ ಹೋರಾಟ ಸಮಿತಿ ಅಧ್ಯಕ್ಷ ಗುರುಸ್ವಾಮಿಗೌಡ ಮಾತನಾಡಿ, ಮಳೆ ಇಲ್ಲದೆ ಹೋಬಳಿ ಜನತೆ ಬರಗಾಲದಿಂದ ನರಳುತ್ತಿದ್ದಾರೆ. ಏತ ನೀರಾವರಿ ಮೂಲಕ ಕೆರೆಗಳಿಗೆ ನೀರು ಹರಿಸಲು ಮುಂದಾಗಿರುವುದು ಅವೈಜ್ಞಾನಿಕವಾದುದು. ಹಲವಾರು ಜಿಲ್ಲೆಯಲ್ಲಿ ಏತ ನೀರಾವರಿ ವಿಫಲಗೊಂಡಿದೆ. ಈಗ ತಾತ್ಕಾಲಿಕವಾಗಿ ಏತ  ನೀರಾವರಿ ಕಲ್ಪಿಸಿ ನಂತರದ ದಿನಗಳಲ್ಲಿ ಶಾಶ್ವತ ನೀರಾವರಿ ಯೋಜನೆಯನ್ನು ಕಲ್ಪಿಸುವಂತೆ ಒತ್ತಾಯಿಸಿದರು. ಅಲ್ಲದೇ ಏತ ನೀರಾವರಿ ಕಾಮಗಾರಿಯಲ್ಲಿ ಭಾರಿ ಅವ್ಯವಹಾರ ನಡೆಯುತ್ತಿದ್ದು, ಗುತ್ತಿಗೆದಾರರು ಹಾಗೂ ಅಧಿಕಾರಿಗಳು ಶಾಮೀಲಾಗಿದ್ದು, ಶಾಸಕರಿಗೆ ತಪ್ಪು ಮಾಹಿತಿ ನೀಡಿ ಹಾದಿ ತಪ್ಪಿಸುತ್ತಿದ್ದು, ಕೂಡಲೆ ಶಾಸಕರು ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕೆ.ಎಸ್. ಸಿಂಗೇಶ್ ಮಾತನಾಡಿ, ಅರಸೀಕೆರೆ ಶಾಸಕ ಶಿವಲಿಂಗೇಗೌಡ ವಿರೋಧ ಪಕ್ಷದಲ್ಲಿದ್ದರೂ ಅರಸೀಕೆರೆ ಸುತ್ತಮುತ್ತಲಿನ 150 ಹಳ್ಳಿಗೆ ಕುಡಿಯುವ ನೀರು ವ್ಯವಸ್ಥೆ ಕಲ್ಪಿಸುತ್ತಿದ್ದಾರೆ. ತಾಲೂಕಿನ ಶಾಸಕ ವೈ.ಎನ್.ರುದ್ರೇಶ್‌ಗೌಡರು ತಮ್ಮದೆ ಕಾಂಗ್ರೆಸ್ ಸರ್ಕಾರ ಇದ್ದರೂ ಬರ ಪೀಡಿತ ಈ ಹೋಬಳಿಗೆ ನೀರು ಕೊಡುವಲ್ಲಿ ಮುಂದಾಗಿಲ್ಲ ಎಂದು ದೂರಿದರು.
ಸ್ಥಳಕ್ಕೆ ಆಗಮಿಸಿದ ಶಾಸಕ ರುದ್ರೇಶ್‌ಗೌಡ ಮಾತನಾಡಿ, ಬೇಲೂರು ತಾಲೂಕಿಗೆ ಸಮರ್ಪಕವಾಗಿ ನೀರು ಕೊಡಬೇಕು ಎಂಬ ಮಹದಾಸೆ ತಮಗೂ ಇದೆ. ಅದರಲ್ಲೂ  ಜಾವಗಲ್, ಹಳೆಬೀಡು, ಮಾದೀಹಳ್ಳಿ ಹೋಬಳಿಗೆ ನೀರು ಹರಿಸಲೇ ಬೇಕಾಗಿದೆ. ಮೊದಲನೇ ಹಂತದ ಚಾನಲ್ ಕಾಮಗಾರಿ ಆರಂಭವಾಗಿದ್ದು ಜಾಕ್‌ವೆಲ್ ಕೆಲಸ ನಡೆಯುತ್ತಿದೆ. ಪಂಪ್‌ಹೌಸ್ ನಿರ್ಮಾಣ ಕೆಲಸ ಆರಂಭವಾಗಬೇಕಿದೆ. ಅಲ್ಲದೆ 4 ಕಿ.ಮಿ ದೂರದ ವಿದ್ಯುತ್ ಲೈನ್ ಎಳೆಯಲು ಅನುಮತಿ ದೊರಕಿದ್ದು ಇನ್ನು 6 ತಿಂಗಳಲ್ಲಿ ಕಾಮಗಾರಿ ಮುಗಿಯಲಿದೆ ಎಂದು ತಿಳಿಸಿ, ಸ್ಥಳದಲ್ಲಿದ್ದ ಯಗಚಿ ಎಂಜಿನಿಯರ್ ವೆಂಕಟೇಶ್ ಅವರಿಗೆ ಶೀಘ್ರವಾಗಿ ಕಾಮಗಾರಿ ಮುಗಿಸುವಂತೆ ಸೂಚಿಸಿದರು.  ರೈತಸಂಘದ ಬೋಗಮಲ್ಲೇಶ್, ಕೆ.ಪಿ. ಕುಮಾರ್, ಬಳ್ಳೂರು ಸ್ವಾಮಿಗೌಡ, ಪ್ರಗತಿ ಪರ ಸಂಘಟನೆ ಗೌರವಾಧ್ಯಕ್ಷ ಕೆ.ಸುದರ್ಶನ್, ಶಿವಪ್ಪ, ಚನ್ನೇಗೌಡ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement