ಗಾಯಗೊಂಡಿದ್ದ ಜಿಂಕೆಗೆ ಆರೈಕೆ
ಕನ್ನಡಪ್ರಭ ವಾರ್ತೆ, ಸಕಲೇಶಪುರ. ಆ 26
ನಾಯಿ ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದ ಜಿಂಕೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೋಮವಾರ ರಕ್ಷಿಸಿ ಚಿಕಿತ್ಸೆ ನೀಡಿದರು. ಇಲ್ಲಿಗೆ ಸಮೀಪ ಆನೆಮಹಲ್ ಗ್ರಾಮದ ಬಸವರಾಜ್ ಎಂಬುವರ ತೋಟದಲ್ಲಿ ಸುಮಾರು 9 ವರ್ಷ ವಯಸಿನ ಗಂಡು ಜಿಂಕೆಯೊಂದನ್ನು ನಾಯಿಗಳು ಅಟ್ಟಾಡಿಸಿ ಕಾಲು ಮತ್ತು ಹೊಟ್ಟೆಗೆ ತೀವ್ರ ಸ್ವರೂಪದ ಗಾಯಗೊಳಿಸಿದ್ದನ್ನು ಕಂಡ ಜನರು ಜಿಂಕೆಯನ್ನು ರಕ್ಷಿಸಿ ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದರು. ಸುದ್ದಿ ತಿಳಿದ ಕೂಡಲೆ ವಲಯ ಅರಣ್ಯಾಧಿಕರಿ ಮಹಾದೇವ, ವನಪಾಲಕ ದೇವು, ಪುಟ್ಟರಾಜು, ರುದ್ರಪ್ಪ, ಅರಣ್ಯ ರಕ್ಷಕ ನಾಗೆಶ್, ಪೃಥ್ವಿ ಹಾಗೂ ಮುಂದಾದವರು ಸ್ಥಳಕ್ಕೆ ತೆರಳಿ ಗಾಯಗೊಂಡ ಜಿಂಕೆಯನ್ನು ಪಟ್ಟಣದ ಪಶು ಆಸ್ಪತ್ರೆಯ ವೈದ್ಯರಿಂದ ಅವರಿಂದ ಚಿಕಿತ್ಸೆ ಕೊಡಿಸಿದ್ದಾರೆ. ಪತ್ರಿಕೆಯೊಂದಿಗೆ ಮಾತನಾಡಿದ ವಲಯಾರಣ್ಯಾಧಿಕಾರಿ ಮಹಾದೇವ್ ಅವರು, ತೀವ್ರ ಸ್ವರೂಪದ ಗಾಯಗೊಂಡಿದ್ದ ಜಿಂಕೆಯೂ ಈಗ ಚೇತರಿಸಿಕ್ಕೊಳ್ಳುತ್ತಿದ್ದು, ಇನ್ನೆರಡು ದಿನಗಳ ನಂತರ ಹಾಸನದ ಗೆಂಡೆಕಟ್ಟ ಅರಣ್ಯ ಧಾಮಕ್ಕೆ ಸಾಗಿಸುವುದಾಗಿ ತಿಳಿಸಿದರು.