ಜಾನುವಾರುಗಳಿಗೆ ಕಾಲುಬಾಯಿ ರೋಗ ಲಸಿಕೆ ಆಂದೋಲನ ಉದ್ಘಾಟನೆ
ಕ.ಪ್ರ.ವಾರ್ತೆ , ಹಾಸನ , ಆ.26
ಪ್ರತಿಯೊಬ್ಬರೂ ರೈತಾಪಿ ವರ್ಗದ ಒಳಿತಿಗೆ ಶ್ರಮಿಸುವುದು ಅಗತ್ಯ ಎಂದು ಅಂತಾರಾಷ್ಟ್ರೀಯ ಲಯನ್ಸ್ ಕ್ಲಬ್ ಹಾಸನ ಹೊಯ್ಸಳ ಸಂಸ್ಥೆಯ ಜಿಲ್ಲಾ ರಾಜ್ಯಪಾಲ ಕೆ.ಸಿ. ಪ್ರಭು ತಿಳಿಸಿದರು.
ತಾಲೂಕಿನ ಮರ್ಕುಲಿ ಗ್ರಾಮದಲ್ಲಿ ಕೃಷಿ ವಿಶ್ವ ವಿದ್ಯಾನಿಲಯ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಹಾಗೂ ಲಯನ್ಸ್ ಕ್ಲಬ್ ಆಶ್ರಯದಲ್ಲಿ ಆಯೋಜಿಸಿದ್ದ ಜಾನುವಾರುಗಳಿಗೆ ಕಾಲುಬಾಯಿ ರೋಗ ಲಸಿಕೆ ಆಂದೋಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸರ್ಕಾರೇತರ ಸಂಸ್ಥೆಗಳು ಗ್ರಾಮಾಭಿವೃದ್ಧಿ ಕಾರ್ಯಕ್ರಮಗಳನ್ನು ಸಂಯೋಜಿಸುತ್ತವೆ. ಆದರೆ ವಿದ್ಯಾರ್ಥಿಗಳು ಗ್ರಾಮೀಣ ಭಾಗದಲ್ಲಿ ವಾಸ್ತವ್ಯ ಹೂಡಿ ರೈತರ ಮನದಾಳದ ನೋವುಗಳನ್ನು ಅರ್ಥ ಮಾಡಿಕೊಂಡು ಅವರ ಏಳಿಗೆಗೆ ಶ್ರಮಿಸುವುದು ನಿಜವಾದ ದೇಶಸೇವೆ ಎನಿಸಿಕೊಳ್ಳುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕೃಷಿ ಮಹಾವಿದ್ಯಾಲಯದ ಡೀನ್ ಡಾ.ಎಲ್.ಮಂಜುನಾಥ್ ಮಾತನಾಡಿ ಜಾನು ವಾರುಗಳಿಗೆ ಕಾಲುಬಾಯಿ ರೋಗಲಸಿಕೆ ಆಂದೋಲನದಿಂದ ಜಾನುವಾರುಗಳು ಆರೋಗ್ಯಕರವಾಗಿ ಬೆಳೆಯಲು ಹಾಗೂ ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ತಾಪಂ ಉಪಾಧ್ಯಕ್ಷ ದ್ಯಾವೇಗೌಡ ಕೃಷಿ ಮಾಹಿತಿ ಕೇಂದ್ರ ಉದ್ಘಾಟಿಸಿ, ಅಧಿಕಾರಿಗಳು ರೈತರ ಸಮಸ್ಯೆಗಳಿಗೆ ಹೆಚ್ಚು ಸ್ಪಂದಿಸುವ ಮೂಲಕ ಅವರಿಗೆ ಸರ್ಕಾರದಿಂದ ಸಿಗಬೇಕಾಗುವ ಸವಲತ್ತು ಹಾಗೂ ತಾಂತ್ರಿಕ ಮಾಹಿತಿಯನ್ನು ನೀಡುತ್ತಿರುವುದು ಶ್ಲಾಘನೀಯ ಎಂದರು.
ಲಯನ್ಸ್ ಹಾಸನ ಹೊಯ್ಸಳ ಸಂಸ್ಥೆ ಅಧ್ಯಕ್ಷ ಎಂ.ಇ. ಚಂದ್ರೇಗೌಡ ಮಾತನಾಡಿದರು.ತೋಟಗಾರಿಕಾ ತಜ್ಞ ಡಾ. ಸಿದ್ದಗಂಗಯ್ಯ, ಡಾ. ಜಿ. ನಾಗೇಶ್ ಇತರರು ಇದ್ದರು.