ಜಿಲ್ಲಾ ಚಿತ್ರಕಲಾ ಸ್ಪರ್ಧೆ ಉದ್ಘಾಟನೆ
ಕ.ಪ್ರ. ವಾರ್ತೆ , ಹಾಸನ , ಆ. 26
ಮಕ್ಕಳು ತಮ್ಮ ಪ್ರತಿಭೆ ಪ್ರದರ್ಶಿಸಲು ಚಿತ್ರಕಲಾ ಸ್ಪರ್ಧೆ ಉತ್ತಮ ವೇದಿಕೆಯಾಗಿದೆ ಎಂದು ನಗರಸಭೆ ಸದಸ್ಯೆ ನೇತ್ರಾವತಿ ಗಿರೀಶ್ ತಿಳಿಸಿದರು. ನಗರದ ಸಂಸ್ಕೃತ ಭವನದಲ್ಲಿ ಆನಬೆಲ್ ಶಿಕ್ಷಣ ಸಂಸ್ಥೆ ಹಾಗೂ ರೋಟರಿ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಂತಹ ಕಾರ್ಯಕ್ರಮಗಳನ್ನು ಹೆಚ್ಚು ಹೆಚ್ಚು ನಡೆಸುವುದರಿಂದ ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಗುರುತಿಸಬಹುದು ಎಂದು ಹೇಳಿದರು.
ಎರಡೂ ಸಂಸ್ಥೆಗಳು ಅನೇಕ ಅತ್ಯುತ್ತಮ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿರುವುದನ್ನು ಸ್ವಾಗತಿಸಿ, ಮುಂದೆ ಇಂತಹ ಕಾರ್ಯಕ್ರಮ ಇನ್ನೂ ಹೆಚ್ಚು ಹೆಚ್ಚು ಬರಲಿ ಎಂದು ಶುಭ ಹಾರೈಸಿದರು.
ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ನೂರಾರು ಮಕ್ಕಳು ಭಾಗವಹಿಸಿ ತಮ್ಮದೇ ಆದ ಕಲ್ಪನೆಯ ಚಿತ್ತಾರವನ್ನು ಮೂಡಿಸಿದರು. ವಿಜೇತ ಮಕ್ಕಳಿಗೆ ಬಹುಮಾನ ನೀಡಿ ಗೌರವಿಸಿದರು. ರೋಟರಿ ಅಧ್ಯಕ್ಷ ಮದನ್‌ಕುಮಾರ್ ಸ್ವಾಗತಿಸಿದರು. ಸಂಸ್ಥೆ ನಿರ್ದೇಶಕ ಫಣಿಕುಮಾರ್ ಕಾರ್ಯಕ್ರಮ ನಡೆಸಿಕೊಟ್ಟರು. ಬೆಂಗಳೂರಿನ ಸಂತೋಷ್, ರೋ. ಬಿ.ಎನ್. ರಮೇಶ್, ಅಮೃತ, ರವಿಕುಮಾರ್, ಶಿವರಾಂ ಇತರರಿದ್ದರು.