ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

'ಜಿಲ್ಲಾ ಸಹಕಾರ ಯೂನಿಯನ್‌ಗೆ ಉತ್ತಮ ಹೆಸರು'

Vishwanath S
Updated On : 27 Aug 2013, 12:48 pm

ಹಾಸನ: ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಕಾರ್ಯ ನಿರ್ವಹಿಸುತ್ತಿರುವ ಜಿಲ್ಲಾ ಸಹಕಾರ ಯೂನಿಯನ್‌ಗಳ ಪೈಕಿ ಹಾಸನ ಜಿಲ್ಲಾ ಸಹಕಾರ ಯೂನಿಯನ್ ರಾಜ್ಯದಲ್ಲಿಯೇ ಉತ್ತಮ ಎಂದು ಹೆಸರು ಗಳಿಸಿದೆ ಎಂದು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಕಾರ್ಲೆ ಇಂದ್ರೇಶ್ ತಿಳಿಸಿದರು.
  ಜಿಲ್ಲಾ ಸಹಕಾರ ಯೂನಿಯನ್ ಸಭಾಂಗಣದಲ್ಲಿ ಏರ್ಪಡಿಸಿದ್ದ 2012-13ನೇ ಸಾಲಿನ ಯೂನಿಯನ್ ಸರ್ವ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲಾ ಸಹಕಾರ ಯೂನಿಯನ್ನಿನ ಆರ್ಥಿಕ ವ್ಯವಹಾರದಲ್ಲಿ ಹಿಂದಿದ್ದರೂ, ಸಹಕಾರ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಹೆಚ್ಚಿನ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿದ್ದು, ಸಹಕಾರ ಸಂಘಗಳ ಪ್ರಗತಿಗೆ ಮಾರ್ಗದರ್ಶಕನಾಗಿ ಉತ್ತಮ ಕೆಲಸ ಮಾಡುತ್ತಿದೆ.
  ಜಿಲ್ಲಾ ಸಹಕಾರ ಯೂನಿಯನ್, ಸಹಕಾರಿಗಳ ನಾಯಕತ್ವ ಗುಣ, ಸಹಕಾರ ಸಂಘಗಳ ಕಾರ್ಯನಿರ್ವಹಣೆ ಇತ್ಯಾದಿ ಗಳ ಬಗ್ಗೆ ಪ್ರತಿ ವರ್ಷ ವಿವಿಧ ರೀತಿಯ ತರಬೇತಿ ಶಿಬಿರಗಳನ್ನು ಹಮ್ಮಿ ಕೊಳ್ಳುತ್ತಿದ್ದು, ಇದರ ಪೂರ್ಣ ಪ್ರಯೋಜನ ಪಡೆಯುವಂತೆ ಸಹಕಾರಿಗಳಲ್ಲಿ ಮನವಿ ಮಾಡಿದರು.
 ಯೂನಿಯನ್ನಿನ 2012- 13ನೇ ಸಾಲಿನ ಆಡಳಿತ ವರದಿ, ಲೆಕ್ಕಪರಿಶೋಧನಾ ವರದಿ, 2013-14 ನೇ ಸಾಲಿನ ಬಜೆಟ್ ಹಾಗೂ ಹಿಂದಿನ ಸಾಲಿನಲ್ಲಿ ಆಯ-ವ್ಯಯಕ್ಕಿಂತ ಹೆಚ್ಚಿಗೆ ಖರ್ಚಾಗಿರುವುದನ್ನು ಸಭೆಯು ಸರ್ವಾನುಮತದಿಂದ ಒಪ್ಪಿಗೆ ನೀಡಿ ಅಂಗೀಕರಿಸಿತು.
 ರಾಜ್ಯ ಸಹಕಾರ ಮಹಾ ಮಂಡಳ ನಿರ್ದೇಶಕ ಆರ್.ಟಿ. ದ್ಯಾವೇಗೌಡ, ಯೂನಿಯನ್‌ನ ಎಲ್ಲಾ  ನಿರ್ದೇಶಕರು, ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕ ಇಲ್ಯಾಸ್‌ವುಲ್ಲಾ ಷರೀಫ್ ಹಾಗೂ ಜಿಲ್ಲೆಯ ನಾನಾ ಸಹಕಾರ ಸಂಘಗಳ ಪ್ರತಿನಿಧಿಗಳು ಹಾಗೂ ಸಹಕಾರ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಯೂನಿಯನ್ ಸಮಗ್ರ ಬೈಲಾ ತಿದ್ದುಪಡಿ ಕುರಿತು ಚರ್ಚಿಸಿದರು.
ಕೃಷಿ ಪ್ರಶಸ್ತಿಗೆ
ಅರ್ಜಿ ಆಹ್ವಾನ
ಹಾಸನ: ಕೃಷಿ ವಲಯದ ಉತ್ಪಾದಕತೆ ಹೆಚ್ಚಿಸಲು ಹಾಗೂ ರೈತರಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸುವ ಸಲುವಾಗಿ ಪ್ರತಿ ವರ್ಷದಂತೆ 2013ರ ಮುಂಗಾರು ಹಂಗಾಮಿನಲ್ಲಿ ಕೃಷಿ ಪ್ರಶಸ್ತಿ ನೋಂದಣಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
 ಹಾಸನ ತಾಲೂಕು ಮಟ್ಟಕ್ಕೆ ರಾಗಿ (ಮಳೆ ಆಶ್ರಿತ), ಜಿಲ್ಲಾ ಮಟ್ಟಕ್ಕೆ ರಾಗಿ (ಮಳೆ ಆಶ್ರಿತ) ಹಾಗೂ ರಾಜ್ಯ ಮಟ್ಟಕ್ಕೆ ರಾಗಿ (ಮಳೆ ಆಶ್ರಿತ), ಬತ್ತ (ನೀರಾವರಿ), ಮುಸುಕಿನಜೋಳ (ನೀರಾವರಿ) ಹಾಗೂ ಕಬ್ಬು (ನೀರಾವರಿ) ಬೆಳೆಗಳನ್ನು ನಿಗದಿಪಡಿಸಿದ್ದು, ನಿಗದಿತ ಶುಲ್ಕ ಅರ್ಜಿ ಹಾಗೂ ಭೂ ದಾಖಲಾತಿಗಳೊಂದಿಗೆ ನೋಂದಣಿ ಮಾಡಿಸಲು ಆ.31 ಕಡೇ ದಿನ.
  ಸ್ಪರ್ಧೆಯ ನೋಂದಣಿ ಶುಲ್ಕವಾಗಿ ತಾಲೂಕು ಮಟ್ಟದಲ್ಲಿ  ಸಾಮಾನ್ಯ ರೈತರು  100 ರು, ಪರಿಶಿಷ್ಟ ರೈತರು 25 ರು, ಜಿಲ್ಲಾ ಮಟ್ಟದಲ್ಲಿ ಸಾಮಾನ್ಯ ರೈತರು 150 ರು, ಪರಿಶಿಷ್ಟ ರೈತರು 40 ರು, ರಾಜ್ಯಮಟ್ಟದಲ್ಲಿ  ಸಾಮಾನ್ಯ ರೈತರು 300 ರು, ಪರಿಶಿಷ್ಟ ರೈತರು 75 ರು. ಪಾವತಿಸಬೇಕು
  ಸ್ಪರ್ಧೆಯಲ್ಲಿ ವಿಜೇತರಿಗೆ ತಾಲೂಕು ಮಟ್ಟದಲ್ಲಿ ಪ್ರಥಮ ಬಹಮಾನವಾಗಿ 10 ಸಾವಿರ ರು, ದ್ವಿತೀಯ ಬಹುಮಾನವಾಗಿ 5 ಸಾವಿರ ರು, ತೃತೀಯ ಬಹುಮಾನವಾಗಿ 3 ಸಾವಿರ ರು. ನೀಡಲಾಗುವುದು.
 ಜಿಲ್ಲಾ ಮಟ್ಟದಲ್ಲಿ ಪ್ರಥಮ ಬಹುಮಾನವಾಗಿ 15 ಸಾವಿರ ರು, ದ್ವಿತೀಯ ಬಹುಮಾನವಾಗಿ 10 ಸಾವಿರ ರು, ತೃತೀಯ ಬಹುಮಾನವಾಗಿ 5 ಸಾವಿರ ರು. ನೀಡಲಾಗುವುದು.ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನವಾಗಿ 30 ಸಾವಿರ ರು, ದ್ವಿತೀಯ ಬಹುಮಾನವಾಗಿ 15 ಸಾವಿರ ರು, ತೃತೀಯ 10 ಸಾವಿರ ರು. ನೀಡಲಾಗುವುದು.
 ಹಾಸನ ತಾಲೂಕಿನ ರೈತಬಾಂಧವರಲ್ಲಿ 2013ರ ಮುಂಗಾರು ಹಂಗಾಮಿನ ಕೃಷಿ ಪ್ರಶಸ್ತಿಗೆ ನಿಗದಿತ ಶುಲ್ಕ ಮತ್ತು ಅಗತ್ಯ ದಾಖಲಾತಿ ನೀಡಿ, ಆ.31 ರೊಳಗೆ ನೋಂದಣಿ ಮಾಡಿಸಲು ಕೋರಲಾಗಿದೆ.
 ಹೆಚ್ಚಿನ ಮಾಹಿತಿಗಾಗಿ ಹೋಬಳಿಯ ರೈತ ಸಂಪರ್ಕ ಕೇಂದ್ರಗಳು ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿ, ಹಾಸನ ಇಲ್ಲಿ ಸಂಪರ್ಕಿಸುವಂತೆ ಸಹಾಯಕ ಕೃಷಿ ನಿರ್ದೇಶಕಿ ಎ.ಎಸ್. ಕೋಕಿಲ ಕೋರಿದ್ದಾರೆ.
ಇಂದು ಕೆಸರು ಗದ್ದೆ ಓಟದ ಸ್ಪರ್ಧೆ
ಹೊಳೆನರಸೀಪುರ: ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಘಟಕದಿಂದ ಆ.27ರಂದು  ಗ್ರಾಮೀಣ ಸೊಗಡಿನ ಕ್ರೀಡೆಯಾದ ಕೆಸರು ಗದ್ದೆ ಓಟದ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ತಾಲೂಕು ಶಾಖೆಯ ಅಧ್ಯಕ್ಷ ಕೆರಗೋಡು ಮಹೇಶ್ ತಿಳಿಸಿದ್ದಾರೆ. ಕೆಸರು ಗದ್ದೆ ಓಟದ ಸ್ಪರ್ಧೆಯನ್ನು ಬೆಳಗ್ಗೆ 10 ಕ್ಕೆ  ಪಟ್ಟಣದ ಅರಕಲಗೂಡು ರಸ್ತೆಯಲ್ಲಿನ ಹುಚ್ಚನಕೊಪ್ಪಲು ಏತ ನೀರಾವರಿ ಯೋಜನೆ ಬಳಿಯಲ್ಲಿ ಪುರುಷರು ಮತ್ತು ಮಹಿಳೆಯರಿಗಾಗಿ ಪ್ರತ್ಯೇಕವಾಗಿ  ಹಮ್ಮಿಕೊಳ್ಳಲಾಗಿದೆ.  ಕ್ರೀಡಾಕೂಟ ಶಾಸಕ ಎಚ್.ಡಿ.ರೇವಣ್ಣ ಉದ್ಘಾಟಿಸಲಿದ್ದು, ಸ್ಪರ್ಧೆಗಳಿಗೆ ಭವಾನಿರೇವಣ್ಣ ಚಾಲನೆ ನೀಡಲಿದ್ದಾರೆ. ವಿಜೇತರಿಗೆ ಅರಕಲಗೂಡು ಪೊಟ್ಯಾಟೋ ಕ್ಲಬ್ ಸಂಸ್ಥಾಪಕ ಯೋಗಾರವುಶ್ ಬಹುಮಾನ ವಿತರಿಸಲಿದ್ದಾರೆ. ಕರವೇ ರಾಜ್ಯ ಉಪಾಧ್ಯಕ್ಷ ರವೀಂದ್ರಕುಮಾರ್, ಜಿಲ್ಲಾಧ್ಯಕ್ಷ ಮನುಕುಮಾರ್, ರಾಜ್ಯ ಸಂಚಾಲ ನಾಗೇಂದ್ರಬಾಬು, ಪ್ರಥಮ ದರ್ಜೆ ಗುತ್ತಿಗೆದಾರ ಟಿ.ಶಿವಕುಮಾರ್, ಪೊಟ್ಯಾಟೋ ಕ್ಲಬ್ ಸಂಚಾಲಕ ರಾಜೇಂದ್ರ ದೊಡ್ಡಮಗ್ಗೆ ಭಾಗವಹಿಸಲಿದ್ದು, ಕರವೇ ರಾಜ್ಯಾಧ್ಯಕ್ಷ  ಟಿ.ಎ.ನಾರಾಯಣಗೌಡ ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದ್ದಾರೆ.
30 ರಂದು ನಾಟಕ ವಿಚಾರ ಸಂಕಿರಣ
ಆಲೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಚಾಮುಂಡೇಶ್ವರಿ ಜಾನಪದ ಮತ್ತು ರಂಗಭೂಮಿ ಕಲಾಸಂಘದ  ಆಶ್ರಯದಲ್ಲಿ ಆ 30 ರಂದು  ಮಧ್ಯಾಹ್ನ 2.30ಕ್ಕೆ ತಾಲೂಕಿನ ಮಗ್ಗೆ ಗ್ರಾಮದ ಡಾ. ಅಂಬೇಡ್ಕರ್ ಪ್ರೌಢಶಾಲೆಯಲ್ಲಿ ನಾಟಕ ವಿಚಾರ ಸಂಕಿರಣ ನಡೆಯಲಿದೆ. ಶಾಸಕ ಎಚ್.ಕೆ. ಕುಮಾರಸ್ವಾಮಿ ಉದ್ಘಾಟಿಸುವರು. ಗ್ರಾಮ ಪಂಚಾಯ್ತಿ ಅಧ್ಯಕ್ಷ ಪರಮಶಿವಪ್ಪ ಅಧ್ಯಕ್ಷತೆ ವಹಿಸುವರು.
ವಂಚನೆ: ವ್ಯಕ್ತಿಗೆ ಗೂಸಾ
ಅರಸೀಕೆರೆ: ವಿದ್ಯಾವಂತ ನಿರುದ್ಯೋಗಿ ಯುವಕ-ಯುವತಿಯರನ್ನು ವಂಚಿಸಿ ಉಚಿತ ಉದ್ಯೋಗ ನೋಂದಣಿ ಸಹಾಯವಾಣಿ ಹೆಸರಿನಲ್ಲಿ ಹಣ ಸಂಗ್ರಹಣೆ ಮಾಡಲು ಮುಂದಾಗಿದ್ದ ಬೆಂಗಳೂರಿನ ಕೃಷಿ ಫೌಂಡೇಷನ್‌ವೊಂದರ ವ್ಯಕ್ತಿಯೊಬ್ಬನಿಗೆ ನಿರುದ್ಯೋಗಿಗಳೇ ಗೂಸಾ ಕೊಟ್ಟ ಪ್ರಸಂಗ ಸೋಮವಾರ ತಾಲೂಕು ಪಂಚಾಯ್ತಿ ಕಚೇರಿ ಆವರಣದಲ್ಲಿ ನಡೆದಿದೆ. ಆ.3ರಂದು ಪಟ್ಟಣದ ಹಳೆಯ ಪ್ರಾಥಮಿಕ ಶಾಲಾ ಆವರಣದಲ್ಲಿ ಆಯೋಜಿಸಲಾಗಿದ್ದ ಉದ್ಯೋಗ ಮೇಳದಲ್ಲಿ ಬೆಂಗಳೂರಿನ ಜೆ.ಬಿ.ಡಿ. ಕೃಷಿ ಫೌಂಡೇಷನ್ ಹೆಸರಿನ ಪದಾಧಿಕಾರಿಗಳು ಉದ್ಯೋಗ ನೀಡುವುದಾಗಿ ಅರ್ಜಿ ವಿತರಿಸಿ ನಂತರ ದೂರವಾಣಿ ಮೂಲಕ ಆಸಕ್ತ ಅಭ್ಯರ್ಥಿಗಳನ್ನು ಸಂಪರ್ಕಿಸಿ ಉದ್ಯೋಗ ನೀಡಲು ಪರೀಕ್ಷೆ ಹಾಗೂ ಇನ್ನಿತರೆ ಖರ್ಚಿಗೆ ಹಣ ನೀಡುವಂತೆ ಒತ್ತಾಯಿಸಿದ್ದಲ್ಲದೆ ಬೆಂಗಳೂರಿಗೆ ಕರೆದೊಯ್ದು ಕೆಲಸ ನೀಡುವುದಾಗಿ ಭರವಸೆ ನೀಡಿದ್ದಾರೆ.  ಸೋಮವಾರ ಒಂದೆಡೆ ಸೇರಿದ ಯುವಕ-ಯುವತಿಯರು ಸಂಸ್ಥೆಯ ಶಿವಾನಂದ್ ಹಾಗೂ ವಿಠಲ್ ಎಂಬುವರನ್ನು ಭೇಟಿ ಮಾಡಿ ಅಗತ್ಯ ದಾಖಲೆ ನೀಡಿದ್ದಾರೆ. ಆದರೆ ಮುಂಗಡ ಹಣ ನೀಡುವಂತೆ ಒತ್ತಾಯಿಸಿದ ಹಿನ್ನೆಲೆಯಲ್ಲಿ ಆತನನ್ನು ಹಿಡಿದು ಶಾಸಕರಿಗೆ ಒಪ್ಪಿಸಿದರು. ಸಮಸ್ಯೆಯ ಆಳ ಅರಿತ ಶಾಸಕ ಕೆ.ಎಂ.ಶಿವಲಿಂಗೇಗೌಡ ಸ್ಥಳಕ್ಕಾಗಮಿಸಿ ಕಂಪನಿಯ ದಾಖಲೆಗಳನ್ನು ಪ್ರದರ್ಶಿಸುವಂತೆ ಸೂಚಿಸಿದ ವೇಳೆ ಪದಾಧಿಕಾರಿಗಳು ತಬ್ಬಿಬ್ಬಾದರು. ಇದರಿಂದ ಸಿಟ್ಟಿಗೆದ್ದ ಶಾಸಕರು ಬಡವರು, ಅಮಾಯಕರನ್ನು ವಂಚಿಸುವುದು ತರವಲ್ಲ. ತಮ್ಮ ತಪ್ಪು ತಿದ್ದಿಕೊಳ್ಳಬೇಕು. ಇದೇ ರೀತಿ ಮುಂದುವರೆದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲವೆಂದು ಗದರಿದರು. ಕುಪಿತರಾಗಿದ್ದ ಯುವಕರ ಗುಂಪು ಪದಾಧಿಕಾರಿಗಳಿಗೆ ಗೂಸಾ ನೀಡಿತು. ನಂತರ ಮಾತನಾಡಿದ ಶಾಸಕರು ಉದ್ಯೋಗ ಮೇಳಕ್ಕೂ, ಇವರಿಗೂ ಯಾವುದೇ ಸಂಬಂಧವಿಲ್ಲ. ಆದರೆ ಅವರ ಹೆಸರಿನಲ್ಲಿ ಹಣ ಮಾಡಲು ಹೊರಟಿದ್ದಾರೆ. ಇಂತಹ ನಯವಂಚಕರು ಎಲ್ಲೆಡೆಯು ಇರುತ್ತಾರೆ. ಈ ಬಗ್ಗೆ ವಿದ್ಯಾವಂತರು ಜಾಗೃತಿ ವಹಿಸಬೇಕೆಂದು ಹೇಳಿದರು.
ಯುಪಿ ಸಿಎಂ ಕ್ರಮ ಖಂಡಿಸಿ ಪ್ರತಿಭಟನೆ
ಸಕಲೇಶಪುರ: ಆಯೋಧ್ಯೆಯಲ್ಲಿ ಹಿಂದು ಮುಖಂಡರನ್ನು ಬಂಧಿಸಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಕ್ರಮವನ್ನು ಖಂಡಿಸಿ ಪಟ್ಟಣದಲ್ಲಿ ಸೋಮವಾರ ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಅಖಿಲೇಶ್ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದರು.   ಬಂಧಿಸಿರುವ ವಿಶ್ವ ಹಿಂದೂ ಪರಿಷತ್ ಮುಖಂಡರು ಹಾಗೂ ಶ್ರೀರಾಮಸೇನೆ ಅಧ್ಯಕ್ಷರನ್ನು ಬಿಡುಗಡೆಮಾಡ ಬೇಕು ಎಂಬ ಮನವಿ ನೀಡಿದರು. ಸಂಘಟನೆಯ ಮುಖಂಡ ಸಂತೋಷ್, ರಘು, ದರ್ಮೆಶ್, ಬಿಜೆಪಿ ಅಧ್ಯಕ್ಷ ಕ್ಯಾಮನಹಳ್ಳಿ ರಾಜಕುಮಾರ್ ಉಪಸ್ಥಿತರಿದ್ದರು.
ಅರ್ಜಿ ಆಹ್ವಾನ
ಹಾಸನ: ಅಂಡಮಾನ್- ನಿಕೋಬಾರ ದ್ವೀಪದಲ್ಲಿ ನೆಲೆಸಿರುವ ಹೊರನಾಡ ಕನ್ನಡಿಗರು ಕನ್ನಡ ಸಂಘ ಅಂಡಮಾನ್ ವತಿಯಿಂದ ನವಂಬರ್ 1 ರಂದು ಕನ್ನಡ ರಾಜ್ಯೋತ್ಸವ ಆಚರಿಸುತ್ತಿದ್ದು  ಭರತನಾಟ್ಯ, ಕೂಚುಪುಡಿ, ವೀರಗಾಸೆ, ಡೊಳ್ಳುಕುಣಿತ, ಜಾನಪದ ನೃತ್ಯ, ಸುಗಮ ಸಂಗೀತ, ತೊಗಲು ಗೊಂಬೆ ಆಟ, ಇನ್ನಿತರ ದೇಶಿ ಕಲೆಗಳನ್ನು  ಪ್ರದರ್ಶಿಸಲು  ಕಲಾವಿದರಿಂದ ಅರ್ಜಿ ಆಹ್ವಾನಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಮೊ.9901528112 ಸಂಪರ್ಕಿಸುವಂತೆ ಸಂಘಟಕ ಎಸ್. ರಾಜೇಂದ್ರ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement